ಸಾರಾಂಶ
‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ಸಲಹೆ ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ದೇಶದ ಭವಿಷ್ಯವಾದ ವಿದ್ಯಾರ್ಥಿಗಳ ದುಶ್ಚಟಗಳಿಂದ ದೂರವಿರಬೇಕು. ಉತ್ತಮ ಆಹಾರ, ಹವ್ಯಾಸ ಬೆಳೆಸಿಕೊಂಡು ಸ್ವಾಸ್ಥ್ಯ ಸಮಾಜ ನಿರ್ಮಾಣದ ರೂವಾರಿಗಳಾಗಬೇಕು ಎಂದು ಶಿಕ್ಷಣ ಸಂಯೋಜಕ ಯೋಗೀಶ್ ಚಕ್ಕೆರೆ ತಿಳಿಸಿದರು.ತಾಲೂಕಿನ ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಮ್ಮಿಕೊಂಡಿದ್ದ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು. ಸ್ವಾಸ್ಥ್ಯ, ಸಂಕಲ್ಪ, ಆರೋಗ್ಯಯುತ ನಾಡನ್ನು ಕಟ್ಟಬೇಕು ಎಂದು ಹೇಳಿದರು.
ದೇಶದ ಬೆನ್ನೆಲುಬಾಗಿರುವ ಯುವಕರು ದಾರಿ ತಪ್ಪುತ್ತಿರುವುದು ದುರಂತದ ಸಂಗತಿ. ಹದಿಹರೆಯ ತುಂಬಾಮುಖ್ಯ ಶಿಕ್ಷಕಿ ಯಶೋಧ ಶಾನಭಾಗ್ ಮಾತನಾಡಿ, ವಿದ್ಯಾರ್ಥಿ ಇರುವಾಗ ಪ್ರಾರಂಭಕ್ಕೆ ತಮಾಷೆಗಾಗಿ ಮಾದಕ ವಸ್ತುಗಳಿಗೆ ಮೋಹಿತರಾಗಿ ನಂತರ ಅದರೊಳಗೆ ಜಾರಿಬಿಡುತ್ತಾರೆ. ಇದರಿಂದ ಅಂತಹವರ ಕುಟುಂಬ ಬೀದಿಪಾಲಾಗುವುದರ ಜತೆಗೆ ಜನರ ನಗೆಪಾಟಲಿಗೆ ಬಲಿಯಾಗುತ್ತಾರೆ. ವಿದ್ಯಾರ್ಥಿಗಳಾದ ನೀವು ಇಪ್ಪತ್ತನೆಯ ವಯಸ್ಸಿನ ತನಕ ನಿಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಮಾದಕ ವಸ್ತುಗಳಿಂದ ದೂರವಿದ್ದಲ್ಲಿ ಮುಂದಿನ ನಿಮ್ಮ ಜೀವನ ಪರಿಪಕ್ವವಾಗಲಿದೆ. ಆದ್ದರಿಂದ ಮೊದಲು ನಿಮ್ಮ ಮನೆ, ಕುಟುಂಬ, ಗ್ರಾಮಗಳಿಂದ ಮಾದಕ ವಸ್ತುಗಳ ನಿರ್ಮೂಲನೆ ಮಾಡಬೇಕು. ಆಗ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ. ಇದಕ್ಕಾಗಿ ವಿದ್ಯಾರ್ಥಿಗಳು ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಕ್ಕೆರೆ ವಲಯದ ಮೇಲ್ವಿಚಾರಕ ಷಣ್ಮುಖ ಮಾತನಾಡಿ, ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟಿರುವ ಮದ್ಯಪಾನ ಮುಂತಾದ ದುಶ್ಚಟಗಳು ಕುಟುಂಬಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ವಿದ್ಯಾರ್ಥಿಗಳು ಜಾಗೃತರಾಗಿ ಕುಡಿತದಿಂದ ಹಾಳಾಗಿರುವ ಸಂಸಾರಗಳಿಗೆ ಬುದ್ಧಿವಾದ ಹೇಳುವ ಮಹತ್ಕಾರ್ಯಕ್ಕೆ ಮುಂದಾಗಬೇಕು ಎಂದರು.ಇದೇ ವೇಳೆ ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿದ್ದು ಸಮಾಜದ ಸತ್ಪ್ರಜೆಗಳಾಗಿ ಬಾಳುತ್ತೇವೆಂದು ಪ್ರಮಾಣ ಸ್ವೀಕರಿಸಿದರು. ಸೇವಾ ಪ್ರತಿನಿಧಿ ರತ್ನಮಣ್ಣಿ, ಒಕ್ಕೂಟದ ಪದಾಧಿಕಾರಿಗಳಾದ ಅಶ್ವಿನಿ, ಅರ್ಚನಾ ಶಿಕ್ಷಕರಾದ ನಟರಾಜ್, ರಾಜೇಶ್, ರೂಪ, ಉಮೇಶ್, ವಿಜಯ್ ಇತರರಿದ್ದರು.