ಸಾರಾಂಶ
ಕೃಷಿ ಲಾಭ ಕೊಡುತ್ತಿಲ್ಲ ಎಂಬ ಕಾರಣದಿಂದ ಪೂರ್ವಜರ ಕಾಲದಿಂದ ಅನ್ನ ನೀಡಿರುವ ಜಮೀನು ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ. ಇದರಿಂದ ಕೃಷಿ ಉತ್ಪನ್ನ ನೀಡುತ್ತಿದ್ದ ಜಮೀನುಗಳಲ್ಲಿ ಕಾರ್ಖಾನೆ, ಕಟ್ಟಡ ಮತ್ತು ನಿವೇಶನ ತಲೆ ಎತ್ತುತ್ತಿವೆ.
ಧಾರವಾಡ:
ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ರೈತರು ತಮ್ಮ ಜಮೀನು ಉಳಿಸಿಕೊಳ್ಳುವತ್ತ ಗಮನ ಹರಿಸಬೇಕೆಂದು ಮಾಜಿ ಶಾಸಕ ಅಮೃತ ದೇಸಾಯಿ ಹೇಳಿದರು.ತಾಲೂಕಿನ ನರೇಂದ್ರ ಗ್ರಾಮದಲ್ಲಿ ಸಾಯಿ ವಿದ್ಯಾಮಂದಿರ, ಶಿವಶಕ್ತಿ ಹವ್ಯಾಸಿ ಯುವಕ ಮಂಡಳ, ಗಜಾನನ ಯುವಕ ಮಂಡಳ ಮತ್ತು ಸಿದ್ಧಾರೂಢ ಯುವಕ ಮಂಡಳ ಸಹಯೋಗದಲ್ಲಿ ನಡೆದ ರೈತ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಕೃಷಿ ಲಾಭ ಕೊಡುತ್ತಿಲ್ಲ ಎಂಬ ಕಾರಣದಿಂದ ಪೂರ್ವಜರ ಕಾಲದಿಂದ ಅನ್ನ ನೀಡಿರುವ ಜಮೀನು ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ. ಇದರಿಂದ ಕೃಷಿ ಉತ್ಪನ್ನ ನೀಡುತ್ತಿದ್ದ ಜಮೀನುಗಳಲ್ಲಿ ಕಾರ್ಖಾನೆ, ಕಟ್ಟಡ ಮತ್ತು ನಿವೇಶನ ತಲೆ ಎತ್ತುತ್ತಿವೆ. ಆದ್ದರಿಂದ ರೈತರು ತಮ್ಮ ಜಮೀನುಗಳನ್ನು ಮುಂದಿನ ಪೀಳಿಗೆಯ ಬದುಕಿಗಾಗಿ ಮಾರಾಟ ಮಾಡದಿರಲು ತೀರ್ಮಾನಿಸಬೇಕು ಎಂದರು.
ಮಾಜಿ ಶಾಸಕಿ ಸೀಮಾ ಮಸೂತಿ ಮಾತನಾಡಿ, ಕೃಷಿ ಕುಟುಂಬದ ಯುವಕರಿಗೆ ಹೆಣ್ಣು ಕೊಡಲು ಹಿಂದೇಟು ಹಾಕಲಾಗುತ್ತಿದೆ. ಈ ಬಗ್ಗೆ ಹೆಣ್ಣು ಹೆತ್ತವರು ತಮ್ಮ ಮಕ್ಕಳನ್ನು ಕೃಷಿಯಲ್ಲಿ ತೊಡಗಿದ ಯುವಕರಿಗೆ ಕೊಟ್ಟುವ ಮೂಲಕ ಕೃಷಿಕರನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.ರೈತ ಹೋರಾಟಗಾರ ಗಂಗಾಧರ ಪಾಟೀಲ ಕುಲಕರ್ಣಿ ಮಾತನಾಡಿ, ಕೃಷಿ ವಲಯ ನಿರ್ಲಕ್ಷಿತವಾಗಿದೆ. ಇದರಿಂದ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿ ವಿರೋಧಿ ಕರಾಳ ಕೈಗಳಿಂದ ಮುಕ್ತರಾಗಲು ಸಂಘಟಿತ ಹೋರಾಟ ಅಗತ್ಯವಿದೆ ಎಂದರು.
ಬಿಜೆಪಿ ಮುಖಂಡರಾದ ಸವಿತಾ ಅಮರಶೆಟ್ಟಿ, ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ, ಗ್ರಾಪಂ ಅಧ್ಯಕ್ಷ ನಾಗೇಶ ಹಟ್ಟಿಹೊಳಿ, ಗಣ್ಯರಾದ ಮುತ್ತಣ್ಣ ಬಳ್ಳಾರಿ, ಚೆನವೀರಗೌಡ ಪಾಟೀಲ, ಮಹಾದೇವ ದಂಡಿನ, ಮಂಜುನಾಥ ತಿರ್ಲಾಪೂರ ಇದ್ದರು. ಈಶ್ವರ ಗಾಣಿಗೇರ ಅಧ್ಯಕ್ಷತೆ ವಹಿಸಿದ್ದರು.ರವಿಕುಮಾರ ನಾಯಕ ಉಪನ್ಯಾಸ ನೀಡಿದರು. ಮಹಾಂತೇಶ ನಾಡಗೌಡ ದೇಸಾಯಿ ನಿರೂಪಿಸಿದರು. ರವಿ ಕರೀಕಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಗಪ್ಪ ಆಯಟ್ಟಿ ಸ್ವಾಗತಿಸಿದರು. ವೀರಭದ್ರಪ್ಪ ಹುಂಬೇರಿ ವಂದಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ರೈತ ದಿನಾಚರಣೆ ಪ್ರಯುಕ್ತ ಬೆಳಗ್ಗೆ ಗ್ರಾಮದಲ್ಲಿ ಎತ್ತುಗಳ ಮೆರವಣಿಗೆಗೆ ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಸಾಧಕ ರೈತರನ್ನು ಗೌರವಿಸಲಾಯಿತು.