ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಸ್ವಚ್ಛತೆ ಬಗ್ಗೆ ಜನರು ಅರಿವು ಮೂಡಿಸಿಕೊಂಡು ತಾವು ವಾಸಿಸುವ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ದೇಶದ ಪ್ರಗತಿಗೆ ಸಹಕಾರಿಯಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಮಹೇಶ್ ಹೇಳಿದರು.ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದಿಂದ ನಡೆದ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತಾ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದರು.ದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛತಾ ಆಂದೋಲನವನ್ನು ಆರಂಭಿಸಿದರು. ನಾವು ವಾಸಿಸುವ ಪ್ರದೇಶ ಹಾಗೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ ಎಂದರು.
ಪ್ರಕೃತಿ ಎನ್ನುವುದು ಮನುಷ್ಯದ ದೇಹ ಇದ್ದಂತೆ. ನಾವು ಹೇಗೆ ದಿನನಿತ್ಯ ನಮ್ಮ ದೇಹವನ್ನು ಸ್ವಚ್ಛಗೊಳಿಸಿಕೊಳ್ಳುವ ಮೂಲಕ ರೋಗರುಜಿನ ಹರಡದಂತೆ ಕಾಪಾಡಿಕೊಳ್ಳುತ್ತೇವೋ ಅದೇ ರೀತಿ ಪ್ರಕೃತಿಯನ್ನು ಸಹ ನಾವು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪರಿಸರ ಸ್ವಚ್ಛವಾಗಿದ್ದರೆ ನಾವು ಸಹ ಆರೋಗ್ಯವಂತರಾಗಿರುತ್ತೇವೆ ಎಂದರು.ಮನುಷ್ಯರು ಮಾಡುವ ಗಲೀಜನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರನ್ನು ಪ್ರತಿಯೊಬ್ಬರು ಗೌರವಿಸಬೇಕು. ಪೌರಕಾರ್ಮಿಕರು ಇಲ್ಲವಾದರೆ ನಾವು ವಾಸಿಸುವ ಪ್ರದೇಶ, ಪಟ್ಟಣ, ನಗರಗಳು ಗಬ್ಬೆದ್ದುನಾರುತ್ತವೆ. ಪೌರಕಾರ್ಮಿಕರು ತಮ್ಮ ಆರೋಗ್ಯದ ಕಡೆಗೂ ಹೆಚ್ಚಿನ ಗಮನಹರಿಸಬೇಕು. ಪೌರಕಾರ್ಮಿಕರ ಆರೋಗ್ಯ ರಕ್ಷಣೆ ಸರ್ಕಾರಗಳು ಕ್ರಮ ವಹಿಸಬೇಕು. ಸೌಕರ್ಯಗಳಿಂದ ವಂಚಿತರಾದರೆ ತಮ್ಮ ಗಮನಕ್ಕೆ ತಂದಂರೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ಕಾಳೇಗೌಡ ಮಾತನಾಡಿ, ಪರಿಸರ ಸ್ವಚ್ಛವಾಗಿದ್ದರೆ ನಮ್ಮ ಮನಸ್ಸು, ಆರೋಗ್ಯವು ಸಹ ಸ್ವಚ್ಛವಾಗಿರುತ್ತದೆ. ಹಾಗಾಗಿ ನಾವು ಕನಿಷ್ಠ ನಾವು ವಾಸಿಸುವ ಸುತ್ತಮುತ್ತಲಿನ ಪ್ರದೇಶವನ್ನಾದರು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಮತ್ತೊಬ್ಬರಿಗೆ ಮಾದರಿಯಾಗಬೇಕು ಎಂದರು.ಈ ವೇಳೆ ನ್ಯಾಯಾಧೀಶರಾದ ಬಾಬು ಎನ್.ಪಾರ್ವತಮ್ಮ , ಬಿ.ಕಿಶೋರ್‌ಕುಮಾರ್, ಕೆ.ಎನ್. ಪದ್ಮ, ಎಂ. ವಕೀಲರ ಸಂಘದ ಕಾರ್‍ಯದರ್ಶಿ ಕೆ.ಎನ್.ನಾಗರಾಜು, ಶಿರಸ್ತೆದಾರ್‌ಗಳಾದ ಮಂಜುನಾಥ್, ರಾಧ, ರಮೇಶ್, ಮಾಲತಿ, ಜಯಶಂಕರ್, ಪುರಸಭೆ ಅಧಿಕಾರಿ ಕೆ.ರಮೇಶ್, ಪೌರಕಾರ್ಮಿಕರಾದ ರಂಗ, ಈಶ್ವರ, ಸದಾಶಿವ, ಗಣೇಶ, ನಂದೀಶ್, ನಾಗಮ್ಮ, ರಾಣಿ, ವಸಂತ, ಗೀತಾ, ಮಧು ಸೇರಿದಂತೆ ವಕೀಲರು ಹಾಜರಿದ್ದರು.