ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನ.4 ರಂದು ಆಹಾರಧಾನ್ಯಗಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಬೇಜವಾಬ್ದಾರಿ ಹಾಗೂ ಕರ್ತವ್ಯ ನಿರ್ಲಕ್ಷ್ಯ ಸೇರಿದಂತೆ ಸರ್ಕಾರದ ಈ ಆಹಾರಧಾನ್ಯಗಳ ಅಕ್ರಮ ಸಾಗಾಟ ಸಂಚು ರೂಪಿಸಿರುವ ಆರೋಪದಡಿ, ಸದರಿ ವಸತಿನಿಲಯದ ಪ್ರಾಂಶುಪಾಲರಾದ ಬಸ್ಸಮ್ಮ ಪಾಟೀಲ್ ಅವರನ್ನು ಅಮಾನತುಗೊಳಿಸಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ಕಾರ್ಯನಿರ್ವಾಹಕ ನಿರ್ದೇಶಕ ಬಿ. ಶಿವಸ್ವಾಮಿ ಗುರುವಾರ ಆದೇಶ ಹೊರಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನ.4 ರಂದು ಆಹಾರಧಾನ್ಯಗಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಬೇಜವಾಬ್ದಾರಿ ಹಾಗೂ ಕರ್ತವ್ಯ ನಿರ್ಲಕ್ಷ್ಯ ಸೇರಿದಂತೆ ಸರ್ಕಾರದ ಈ ಆಹಾರಧಾನ್ಯಗಳ ಅಕ್ರಮ ಸಾಗಾಟ ಸಂಚು ರೂಪಿಸಿರುವ ಆರೋಪದಡಿ, ಸದರಿ ವಸತಿನಿಲಯದ ಪ್ರಾಂಶುಪಾಲರಾದ ಬಸ್ಸಮ್ಮ ಪಾಟೀಲ್ ಅವರನ್ನು ಅಮಾನತುಗೊಳಿಸಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ಕಾರ್ಯನಿರ್ವಾಹಕ ನಿರ್ದೇಶಕ ಬಿ. ಶಿವಸ್ವಾಮಿ ಗುರುವಾರ ಆದೇಶ ಹೊರಡಿಸಿದ್ದಾರೆ.ಈ ಬೆನ್ನಲ್ಲೇ, ಅಮಾನತುಗೊಂಡ ಪ್ರಾಂಶುಪಾಲರಾದ ಬಸಮ್ಮ ಪಾಟೀಲ್ ಸೇರಿದಂತೆ ಕೆಂಭಾವಿಯವರಾದ ಸದ್ದಾಂ ಹಾಗೂ ಇರ್ಫಾನ್ ಎಂಬುವವರ ವಿರುದ್ಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಂಭಾವಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆಂದು ನಿಗದಿಯಾಗಿ ಗೂಡ್ಸ್ ವಾಹನಗಳಲ್ಲಿ ಸಾಗಾಟವಾಗಿದ್ದ ಅಕ್ಕಿ, ಗೋದಿ ದಾಸ್ತಾನು ನಾಪತ್ತೆ ಹಾಗೂ ಸರ್ಕಾರದ ಈ ಆಹಾರಧಾನ್ಯಗಳ ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಮಾರಾಟ ಮಾಡುವ ಸಂಚಿನ ಆರೋಪಗಳಿಂದಾಗಿ ಈ ಪ್ರಕರಣ ಭಾರಿ ಚರ್ಚೆಗೆ ಗ್ರಾಸವಾಗಿತ್ತು.ಈ ಕುರಿತು ಜಿಲ್ಲಾಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಆದೇಶದ ಮೇರೆಗೆ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಯಾದಗಿರಿ ಜಿಲ್ಲೆಯ ಉಪ ನಿರ್ದೇಶಕ ಸೋಮಶೇಖರ ಬಿರಾದರ್ ತನಿಖೆ ನಡೆಸಿ, ನ.6 ರಂದು ವರದಿ ಸಲ್ಲಿಸಿದ್ದರು. ಪ್ರಾಂಶುಪಾಲರಾದ ಬಸಮ್ಮ ಪಾಟೀಲ್ ಅವರನ್ನು ಕ್ರೈಸ್, ಗುರುವಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಚೆನ್ನಬಸಪ್ಪ ಅವರು ಶುಕ್ರವಾರ ನೀಡಿದ ದೂರಿನ ಮೇರೆಗೆ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
*ಏನಿದು ಪ್ರಕರಣ ?: ನ.3 ರಂದು ಮಧ್ಯಾಹ್ನ, ಆಹಾರ, ನಾಗರಿಕ ಸರಬರಾಜು ನಿಗಮ ನಿಯಮಿತದ ಸುರಪುರದ ಗೋದಾಮಿನಿಂದ ಭರ್ತಿ ಮಾಡಲಾದ ಮೂರು ಮಿನಿ ಗೂಡ್ಸ್ ವಾಹನಗಳಲ್ಲಿ 75.75 ಕ್ವಿಂಟಾಲ್ ಅಕ್ಕಿ (150 ಚೀಲ) ಹಾಗೂ 37.87 ಕ್ವಿಂಟಾಲ್ ಗೋದಿ (75 ಚೀಲ) ದಾಸ್ತಾನನ್ನು ಕೆಂಭಾವಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆಂದು ರವಾನಿಸಲಾಗಿತ್ತಾದಾರೂ, ಅಂದು ದಾಸ್ತಾನು ವಸತಿ ನಿಲಯಕ್ಕೆ ತಲುಪಿರಲಿಲ್ಲ.ಸುರಪುರದ ಗೋದಾಮಿನಿಂದ 30 ಕಿ.ಮೀ. ದೂರದಲ್ಲಿರುವ ಆಹಾರಧಾನ್ಯಗಳು 30 ಗಂಟೆಗಳಾದರೂ ತಲುಪದಿರುವ ಬಗ್ಗೆ ಸ್ಥಳೀಯರು ಹಾಗೂ ಸಂಘಟನೆಗಳು ಶಂಕೆ ವ್ಯಕ್ತಪಡಿಸಿದ್ದರು. ನ.4 ರಂದು ಸಂಜೆ 7.30 ನಿಗದಿತ ಸಂಖ್ಯೆಯ ವಾಹನ ಹೊರತುಪಡಿಸಿ ಬೇರೊಂದು ಗೂಡ್ಸ್ ವಾಹನದಲ್ಲಿ ಆಹಾರಧಾನ್ಯಗಳನ್ನು ನಿಲಯಕ್ಕೆ ಖಾಸಗಿ ವ್ಯಕ್ತಿಗಳು ತಂದಿಳಿಸಿದಾಗ ಸ್ಥಳೀಯರು ಹಾಗೂ ಸಂಘಟನೆಗಳು ವಾಹನ ತಡೆದಿದ್ದಾರೆ. ಸರ್ಕಾರದಿಂದ ಮಕ್ಕಳಿಗೆ ಸಿಗಬೇಕಾದ ಈ ಆಹಾರಧಾನ್ಯಗಳು ವಸತಿ ಶಾಲೆಗೆ ಬಾರದೆ ಅಕ್ರಮಕೋರರ ಖಾಸಗಿ ಗೋದಾಮಿಗೆ ಹೋಗಿವೆ ಎಂದು ಆರೋಪಿಸಿ ಠಾಣೆಗೆ ದೂರಿದ್ದರು. ಪ್ರಕರಣ ಗಂಭೀರ ಸ್ವರೂಪ ಪಡೆದ ಹಿನ್ನೆಲೆ, ಜಿಲ್ಲಾಧಿಕಾರಿ ಪಾಂಡ್ವೆ ತನಿಖೆಗೆ ಆದೇಶಿಸಿದ್ದರು.
ಆಹಾರ ಇಲಾಖೆ ಉಪ ನಿರ್ದೇಶಕ ಸೋಮಶೇಖರ ಬಿರಾದರ್ ನಡೆಸಿದ ತನಿಖೆಯಲ್ಲಿ, ವಸತಿ ನಿಲಯದ ಪ್ರಾಂಶುಪಾಲರು ಹಾಗೂ ವಾಚಮನ್ ಹೇಳಿಕೆಗಳಲ್ಲಿ ವ್ಯತ್ಯಾಸ, ಸ್ಥಳೀಯರ ಆರೋಪಗಳೆಲ್ಲವನ್ನೂ ನಮೂದಿಸಿದ್ದಾರೆ. ತನಿಖೆಯಲ್ಲಿ ಬೆಳಕಿಗೆ ಬಂದ ಅಂಶಗಳು, ಅಕ್ರಮ ನಡೆದಿರುವ ಬಗ್ಗೆ ಬಲವಾದ ಶಂಕೆ ವ್ಯಕ್ತಪಡಿಸಿದೆ.* ಅಕ್ರಮಕೋರರ ಗೋಡೌನ್ಗೆ ಅಕ್ಕಿ, ಗೋದಿ..!?: ಆಹಾರಧಾನ್ಯಗಳನ್ನು ಸುರಕ್ಷಿತವಾಗಿ ತಲುಪಿಸಬೇಕಾದ ಪ್ರಾಂಶುಪಾಲರು/ವಾರ್ಡನ್ರ ಕರ್ತವ್ಯ ನಿರ್ಲಕ್ಷ್ಯ ಹಾಗೂ ಸದರಿ ಆಹಾರಧಾನ್ಯಗಳನ್ನು ಕೆಂಭಾವಿ ಗ್ರಾಮದ ಖಾಸಗಿ ವ್ಯಕ್ತಿಗೆ ಮಾರಾಟ ಮಾಡಿರುವ ಬಗ್ಗೆ ಸ್ಥಳೀಯರ ಮಾಹಿತಿ ಮೇರೆಗೆ ತಿಳಿದುಬಂದ ಅಂಶ, ನ.4 ರಂದು ಗೂಡ್ಸ್ ವಾಹನದಲ್ಲಿ ಆಹಾರಧಾನ್ಯಗಳ ತಂದಿಳಿಸುವಾಗ ಮಾಡಲಾದ ವೀಡಿಯೋದಲ್ಲಿ ಖಾಸಗಿ ವ್ಯಾಪಾರಿಗಳಿಬ್ಬರ ಪಾತ್ರವು ಅಕ್ರಮಕ್ಕೆ ಪುಷ್ಟಿ ನೀಡುವಂತಿದೆ ಎಂಬಂಶಗಳು ಆಹಾರ ಇಲಾಖೆಯ ಉಪ ನಿರ್ದೇಶಕ ಸೊಮಶೇಖರ ವರದಿಯಲ್ಲಿದೆ.
===ಬಾಕ್ಸ್:3====* ಪೊಲೀಸ್, 112 ಸಿಬ್ಬಂದಿಗಳಿಗೆ ಮಾಹಿತಿ ಕೊರತೆ !
ನ.4 ರಂದು ಸಂಜೆ ವಸತಿ ಶಾಲೆಗೆ ಆಹಾರಧಾನ್ಯಗಳ ತಂದಿದ್ದ ಗೂಡ್ಸ್ ವಾಹನ (ಕೆಎ28- ಡಿ3321)ವನ್ನು ಸಾರ್ವಜನಿಕರು ತಡೆದು ನಿಲ್ಲಿಸಿ, ಪೊಲೀಸ್ ಠಾಣೆ ಹಾಗೂ 112 ಗೆ ಕರೆ ಮಾಡಿ ದೂರು ದಾಖಲಿಸಿದ್ದರು. ಸ್ಥಳಕ್ಕೆ ಬಂದಿದ್ದ ಪೊಲೀಸರು ಹಾಗೂ 112 ಸಿಬ್ಬಂದಿ ಮತ್ತು ಕಂದಾಯ ಇಲಾಖೆಯ ಸ್ಥಳೀಯ ಗ್ರಾಮಾಡಳಿತ ಅಧಿಕಾರಿಗಳು ವಾಹನದ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ, ಆಹಾರಧಾನ್ಯಗಳನ್ನು ವಸತಿನಿಲಯದಲ್ಲಿ ಇಳಿಸಲು ಅವಕಾಶ ಮಾಡಿಕೊಟ್ಟು, ಕಳುಹಿಸಿದ್ದಾರೆ. ಮಾಹಿತಿ ಕೊರತೆ ಹಿನ್ನೆಲೆಯಲ್ಲಿ, ಸದರಿ ಅಧಿಕಾರಿಗಳು ವಾಹನದ ಮೇಲೆ ಪ್ರಕರಣ ದಾಖಲಿಸದೆ ಕರ್ತವ್ಯ ನಿರ್ಲಕ್ಷ್ಯ ವಹಿಸಿದ್ದು, ಅವರಿಗೆ ಸರಿಯಾಗಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವಂತೆ ಎಚ್ಚರಿಕೆ ನೀಡಬಹುದಾಗಿದೆ ಎಂದು ತನಿಖಾ ವರದಿಯಲ್ಲಿ ತಿಳಿಸಲಾಗಿದೆ.----ಫೋಟೊ------
13ವೈಡಿಆರ್5 : ಕನ್ನಡಪ್ರಭದಲ್ಲಿ ಈ ಕುರಿತು ನ.6 ರಂದು ಪ್ರಕಟಗೊಂಡಿದ್ದ ವರದಿ.---000---