ಅರಸೀಕೆರೆಯ ಪ್ರಸನ್ನ ಗಣಪತಿ ಭಕ್ತ ಮಂಡಳಿಯ ವತಿಯಿಂದ ಆಯೋಜಿಸಲಾಗುತ್ತಿರುವ ಮಹೋತ್ಸವದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 68 ದಿನಗಳ ಸತತ ಪೂಜಾ ಕೈಂಕರ್ಯದ ಬಳಿಕ ನಡೆಯುವ ಈ ಮಹೋತ್ಸವವು ತಾಲೂಕಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ. ದಶಕಗಳ ಇತಿಹಾಸ ಹೊಂದಿರುವ ಪ್ರಸನ್ನ ಗಣಪತಿ ಉತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಲ್ಲಿ ಭಕ್ತರಿದ್ದು, ಪ್ರತಿವರ್ಷ ಲಕ್ಷಾಂತರ ಮಂದಿ ಭಾಗವಹಿಸಿ ಗಣಪತಿಯ ದರ್ಶನ ಪಡೆದು ಸಂಭ್ರಮಿಸುತ್ತಾರೆ ಎಂದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ರಾಜ್ಯದ ಪ್ರಸಿದ್ಧ ಶ್ರೀ ಪ್ರಸನ್ನ ಗಣಪತಿಯವರ 85ನೇ ವರ್ಷದ ವಿಸರ್ಜನಾ ಮಹೋತ್ಸವವನ್ನು ನವೆಂಬರ್ 20, 21 ಮತ್ತು 22ರಂದು ಮೂರು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.ನಗರದ ಪ್ರಸನ್ನ ಗಣಪತಿ ಭಕ್ತ ಮಂಡಳಿಯ ವತಿಯಿಂದ ಆಯೋಜಿಸಲಾಗುತ್ತಿರುವ ಮಹೋತ್ಸವದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 68 ದಿನಗಳ ಸತತ ಪೂಜಾ ಕೈಂಕರ್ಯದ ಬಳಿಕ ನಡೆಯುವ ಈ ಮಹೋತ್ಸವವು ತಾಲೂಕಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ. ದಶಕಗಳ ಇತಿಹಾಸ ಹೊಂದಿರುವ ಪ್ರಸನ್ನ ಗಣಪತಿ ಉತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಲ್ಲಿ ಭಕ್ತರಿದ್ದು, ಪ್ರತಿವರ್ಷ ಲಕ್ಷಾಂತರ ಮಂದಿ ಭಾಗವಹಿಸಿ ಗಣಪತಿಯ ದರ್ಶನ ಪಡೆದು ಸಂಭ್ರಮಿಸುತ್ತಾರೆ ಎಂದರು.ನವೆಂಬರ್ 20ರ ಶುಕ್ರವಾರದಿಂದ ಆರಂಭವಾಗುವ ಉತ್ಸವವು 22ರ ಭಾನುವಾರದವರೆಗೆ ಮೂರು ದಿನಗಳ ಕಾಲ ನಡೆಯಲಿದ್ದು, ಧರ್ಮ, ಜಾತಿ ಹಾಗೂ ರಾಜಕೀಯ ಪಕ್ಷಗಳ ಭೇದಭಾವ ಮರೆತು ಎಲ್ಲರೂ ಒಗ್ಗಟ್ಟಿನಿಂದ ಪಾಲ್ಗೊಂಡು ಮಹೋತ್ಸವವನ್ನು ಯಶಸ್ವಿಗೊಳಿಸಬೇಕು. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸ್ವಚ್ಛತೆ, ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು.ಮೂರು ದಿನಗಳ ಉತ್ಸವದ ವಿಶೇಷ ಕಾರ್ಯಕ್ರಮಗಳು:ನವೆಂಬರ್ 20ರಂದು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಶ್ರೀ ಪ್ರಸನ್ನ ಗಣಪತಿಗೆ ಮಹಾಮಂಗಳಾರತಿ ನೆರವೇರಿಸಲಾಗುವುದು. ಪೂಜಾ ಕೈಂಕರ್ಯದ ಬಳಿಕ ಗಣಪತಿ ಉತ್ಸವ ಮೂರ್ತಿಯನ್ನು ಮಂಟಪದಿಂದ ಎತ್ತಲಾಗುತ್ತದೆ. ಸಂಜೆ 7 ಗಂಟೆಗೆ ಫಲಪುಷ್ಪಗಳಿಂದ ಅಲಂಕರಿಸಲಾದ ದರ್ಬಾರ್ ಮಂಟಪದಲ್ಲಿ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಈ ಬಾರಿಯ ಮೆರವಣಿಗೆಯಲ್ಲಿ ಯುವಕರು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಡಿಜೆ ವ್ಯವಸ್ಥೆ ಮಾಡಲಾಗಿದೆ. ತಮಿಳುನಾಡಿನ ಕೀಲುಕುದುರೆ, ಕೇರಳದ ಚಂಡೆವಾದನ, ಮೈಸೂರಿನ ನಗಾರಿ, ಅಣ್ಣಮ್ಮ ತಮಟೆ ಸೇರಿದಂತೆ ವಿವಿಧ ರಾಜ್ಯಗಳ ಹಾಗೂ ಸ್ಥಳೀಯ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಉತ್ಸವಕ್ಕೆ ವಿಶೇಷ ಮೆರುಗು ನೀಡಲಿವೆ. ಶುಕ್ರವಾರ ತಡರಾತ್ರಿ ಸುಮಾರು 1 ಗಂಟೆಗೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಆಕರ್ಷಕ ಪಟಾಕಿ ಪ್ರದರ್ಶನ ಏರ್ಪಡಿಸಲಾಗಿದೆ.ನವೆಂಬರ್ 21ರಂದು ನಗರದ ವಿವಿಧ ಪ್ರಮುಖ ಬೀದಿಗಳಲ್ಲಿ ಗಣಪತಿ ಮೆರವಣಿಗೆ ಮುಂದುವರಿಯಲಿದೆ. ಬಳಿಕ ಎಪಿಎಂಸಿ ಆವರಣದಿಂದ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆಗೆ ಮತ್ತೊಮ್ಮೆ ಚಾಲನೆ ದೊರೆಯಲಿದೆ. ರಾತ್ರಿ 8 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಶ್ರೀ ಪ್ರಸನ್ನ ಗಣಪತಿಗೆ ವಿಶೇಷ ಗಂಗಾರತಿ ಕಾರ್ಯಕ್ರಮ ಆಯೋಜಿಸಲಾಗಿದೆ. ನವೆಂಬರ್ 22ರಂದು ಭಾನುವಾರ ಮೆರವಣಿಗೆಯು ಕಂತೆನಹಳ್ಳಿ ತಲುಪಲಿದ್ದು, ರಾತ್ರಿ 8 ಗಂಟೆಯಿಂದ ವಿಶೇಷ ಪಟಾಕಿ ಪ್ರದರ್ಶನ ಏರ್ಪಡಿಸಲಾಗಿದೆ. ಬಳಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀ ಪ್ರಸನ್ನ ಗಣಪತಿಯ ವಿಸರ್ಜನಾ ಮಹೋತ್ಸವ ನೆರವೇರಲಿದೆ.ಈ ಬಾರಿ ಉತ್ಸವದಲ್ಲಿ ವಿವಿಧ ರಾಜ್ಯಗಳ ಕಲಾತಂಡಗಳು, ಸಾಂಪ್ರದಾಯಿಕ ವಾದ್ಯಮೇಳಗಳು ಹಾಗೂ ವಿಶೇಷ ಆಕರ್ಷಣೆಗಳನ್ನು ಒಳಗೊಂಡ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಎಲ್ಲರೂ ಉತ್ಸವದಲ್ಲಿ ಪಾಲ್ಗೊಂಡು ಶ್ರೀ ಪ್ರಸನ್ನ ಗಣಪತಿಯ ಕೃಪೆಗೆ ಪಾತ್ರರಾಗಬೇಕು ಎಂದು ಸಚಿವರು ಮನವಿ ಮಾಡಿದರು.ಮಹೋತ್ಸವದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗುವುದು. ಜನಸಂದಣಿ ಹೆಚ್ಚಾಗುವ ಸ್ಥಳಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಭಕ್ತರ ಸುರಕ್ಷತೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.ಸಭೆಯಲ್ಲಿ ಸಮಿತಿ ಸಂಚಾಲಕ ಟಿ. ಆರ್. ನಾಗರಾಜು ಮಾತನಾಡಿದರು. ಆಸ್ಥಾನ ಮಂಟಪದ ಖಜಾಂಚಿ ನಾಗಭೂಷಣ್, ಮುಖಂಡರಾದ ಗಂಜಿಗೆರೆ ಚಂದ್ರಶೇಖರ್, ಅಶೋಕ್, ಅಗ್ಗುಂದ ಗಿರೀಶ್, ತಿರುಪತಿಹಳ್ಳಿ ಧರ್ಮಪ್ಪ, ಕಾಟೀಕೆರೆ ಉಮೇಶ್, ಜ್ಞಾನೇಶ್, ಲಕ್ಷ್ಮಣ್, ವಿಭವ್ ಇಟಗಿ, ಸಂತೋಷ್ ಮಠ, ಹೇಮಂತ್ ಕುಮಾರ್, ಪೃಥ್ವಿನಾಯಕ್, ಗೋಪಿ, ಮಲ್ಲಿಕಾರ್ಜುನ ಹಾಗೂ ಅರ್ಚಕ ವೆಂಕಟೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.