Kempegowda is worthy of visionary and capable leadership: Dr. K. Sudhakar

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಕೆಂಪೇಗೌಡರು ಸಮರ್ಥ ಹಾಗೂ ದೂರದರ್ಶಿತ್ವವುಳ್ಳ ನಾಯಕರು. ಆದರ್ಶ. ಜನಸ್ನೇಹಿ ಹಾಗೂ ಉತ್ತಮ ಆಡಳಿತದ ಮೂಲಕ ಬಹುವರ್ಗದ ಆಶೋತ್ತರಗಳಿಗೆ ಸ್ಪಂದಿಸಿ ಸಶಕ್ತ ನಾಡು ಕಟ್ಟಿದ ನಾಯಕ ಎಂದು ಸಂಸದ ಡಾ.ಕೆ.ಸುಧಾಕರ್‌ ಹೇಳಿದರು.

ಇಲ್ಲಿನ ಕೆಂಪೇಗೌಡ ಜಯಂತ್ಯುತ್ಸವ ಆಚರಣಾ ಸಮಿತಿಯಿಂದ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ 517ನೇ ಜನ್ಮದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಕುವೆಂಪು ಅವರ ವಿಶ್ವಮಾನವ ಸಂದೇಶ ಸಾರುವ ಮುನ್ನ, 500 ವರ್ಷದ ಹಿಂದೆಯೇ ಅದನ್ನು ಪಾಲಿಸುವ ಮೂಲಕ ಎಲ್ಲಾ ಜಾತಿ ವರ್ಗದವರನ್ನು ಸಮಾಜದ ಮನ್ನೆಲೆಗೆ ತರಲು ಶ್ರಮಿಸಿ, ಉತ್ತಮ ಆಡಳಿತ ನೀಡಿದ ಕೆಂಪೇಗೌಡರ ಆಡಳಿತ ಹಾಗೂ ಜಾತ್ಯತೀತ ಪರಿಕಲ್ಪನೆ ಇಂದಿನ ಜನಪ್ರತಿನಿಧಿಗಳಿಗೆ ಆದರ್ಶವಾಗಬೇಕು. ಬೆಂಗಳೂರು ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರಲು ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಯೋಜನೆಗಳ ಫಲ ಕಾರಣ ಎಂದು ಹೇಳಿದರು.


ಶಾಸಕ ಧೀರಜ್ ಮುನಿರಾಜು, ಕೆಂಪೇಗೌಡರು ಕೆರೆ, ಕುಂಟೆ ಕಟ್ಟಿಸಿ ಹಾಗೂ ವಿವಿಧ ಸೌಲಭ್ಯ ನೀಡುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿದ್ದರು. ಇಂತಹ ಮಹಾಮಹಿಮರ ವಿಚಾರ ಅರಿಯಬೇಕಿದೆ ಎಂದರು.

ಪಕ್ಷ ಯಾವುದೇ ಇರಲಿ, ಒಕ್ಕಲಿಗ ಸಮುದಾಯ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಿರುವುದು ಹೆಮ್ಮೆಯ ವಿಚಾರ. ಎರಡು ವರ್ಷದಲ್ಲಿ ಬಯಲು ಸೀಮೆಯ ಜಿಲ್ಲೆಗಳಿಗೆ ಕುಡಿಯುವ ಹಾಗೂ ಕೃಷಿಗೆ ನೀರುಣಿಸುವ ಎತ್ತಿನ ಹೊಳೆ ಯೋಜನೆ ಪೂರ್ಣಗೊಳಿಸುವಂತೆ ಅವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ವಿ.ಕೃಷ್ಣಪ್ಪ ಮಾತನಾಡಿದರು. ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ ಅವರಿಗೆ ಸಂತಾಪ ಸೂಚಿಸಲಾಯಿತು.

ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 90ಕ್ಕೂ ಹೆಚ್ಚು ಅಂಕ ಪಡೆದ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ತಹಸೀಲ್ದಾರ್ ಮಲ್ಲಪ್ಪ.ಕೆ.ಯರಗೋಳ, ನಗರಸಭೆ ಉಪಾಧ್ಯಕ್ಷ ಬಂತಿ ವೆಂಕಟೇಶ್, ವೈದ್ಯ ಡಾ.ಟಿ.ಎಚ್‌. ಆಂಜಿನಪ್ಪ, ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಸಮಿತಿ ಅಧ್ಯಕ್ಷ ಟಿ.ವಿ. ಲಕ್ಷ್ಮೀನಾರಾಯಣ, ಟಿಎಪಿಎಂಸಿಎಸ್ ಅಧ್ಯಕ್ಷ ಡಿ. ಸಿದ್ದರಾಮಯ್ಯ, ನಿರ್ದೇಶಕ ವಿಶ್ವಾಸ್‌ಗೌಡ, ಎ.ನರಸಿಂಹಯ್ಯ, ಹರೀಶ್‌ಗೌಡ, ವೆಂಕಟೇಶ್‌ಬಾಬು, ಬಿ.ಸಿ.ವೆಂಕಟೇಶ್, ಬಿ.ಸಿ.ನಾರಾಯಣಸ್ವಾಮಿ, ತಿ.ರಂಗರಾಜು, ತಿಪ್ಪೂರು ಬೈರೇಗೌಡ, ಶಿವಣ್ಣ, ಗೋವಿಂದರಾಜು, ಶಶಿಧರ್, ಕೆಂಪೇಗೌಡ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶಾಂತಮ್ಮ, ಗೌರವ ಅಧ್ಯಕ್ಷೆ ಎಚ್.ಎಸ್.ರೇವತಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ನೆಲದಾಂಜನೇಯಸ್ವಾಮಿ ದೇವಾಲಯದ ಬಳಿಯಿಂದ ಒಕ್ಕಲಿಗರ ಭವನದವರೆಗೆ ನಗರದ ಪ್ರಮುಖ ಬೀದಿಗಳಲ್ಲಿ ಕೆಂಪೇಗೌಡ ಮೂರ್ತಿಯ ಉತ್ಸವ ವಿವಿಧ ಕಲಾತಂಡಗಳೊಡನೆ ನಡೆಯಿತು.