ಸಾರಾಂಶ
ಕೊಳ್ಳೇಗಾಲ ತಾಲೂಕಿನ ಸುರಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಕೆಂಪೇಗೌಡರ ಜಯಂತಿ ಸಮಾರಂಭದಲ್ಲಿ ಶಿಕ್ಷಕ ಗೋವಿಂದರಾಜು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನಾಡಪ್ರಭು ಕೆಂಪೇಗೌಡರ ಕನಸಿನ ರಾಜಧಾನಿ ಇಂದಿಗೆ ತಂತ್ರಜ್ಞಾನದಲ್ಲಿ ವಿಶ್ವದ ಗಮನ ಸೆಳೆದಿದೆ. ಆದರೆ, ಸ್ವಚ್ಛತೆ ವಿಷಯದಲ್ಲಿ ನಾವು ಇನ್ನಷ್ಟು ಹಿಂದುಳಿದಿದ್ದೇವೆ. ಅದನ್ನು ಸ್ವಚ್ಛ ಸುಂದರ ನಗರ ಮಾಡುವುದ ಮೂಲಕ ಕೆಂಪೇಗೌಡರಿಗೆ ಗೌರವ ಸಲ್ಲಿಸಬೇಕಿದೆ ಎಂದು ಕನ್ನಡ ಭಾಷಾ ಶಿಕ್ಷಕ ಲಿಂಗರಾಜು ಹೇಳಿದರು. ಸುರಾಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಕೆಂಪೇಗೌಡ ಜಯಂತಿಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಕೆಂಪೇಗೌಡರು ಅಂದು ಬೆಂಗಳೂರು ನಗರ ಕಟ್ಟಲು ಭೂಮಿಪೂಜೆಗೆ ರೈತ ಸಂಗಾತಿ ಹಸುಗಳ ಮೂಲಕ ನೆರವೇರಿಸಿದ್ದು ಸ್ಮರಣೀಯವಾಗಿದೆ. ಇಲ್ಲಿ ದುಡಿಯುವ ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಜಯಂತಿ ಆಚರಣೆ ಜೊತೆಗೆ ಗಣ್ಯ ಮಹನೀಯರ ಆದರ್ಶಗಳನ್ನು ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕಿದೆ ಎಂದರು. ಪ್ರಭಾರ ಮುಖ್ಯ ಶಿಕ್ಷಕ ಗೋವಿಂದರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಂಪೇಗೌಡರ ಹಾದಿಯಾಗಿ ಹಲವಾರು ಮಹನೀಯರು ಬೆಂಗಳೂರನ್ನು ಬಹು ದೊಡ್ಡನಗರವಾಗಿ ಬೆಳೆಸಿದ್ದಾರೆ. ಹೀಗೆ ಮಹನೀಯರು ಹಾಕಿಕೊಟ್ಟ ಅಡಿಪಾಯ ಮುಂದೆ ಬಹುದೊಡ್ಡದಾಗಿ ಬೆಳೆಯುತ್ತದೆ ಎಂಬುದಕ್ಕೆ ಈ ನಗರ ನಿದರ್ಶನವಾಗಿದೆ ಎಂದರು. ಸಾಹಿತಿ ಪಳನಿಸ್ವಾಮಿ ಜಾಗೇರಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಕೆಂಪೇಗೌಡರು ನಾಡಕಟ್ಟುವಲ್ಲಿ ಅವರಲ್ಲಿದ್ದ ಕಷ್ಟ ಸಹಿಷ್ಣುತೆ, ಮುಂದಾಲೋಚನೆ, ಸೇವಾ ಭಾವನೆ, ಧೈರ್ಯ ಈಗಿನ ಮಕ್ಕಳಲ್ಲೂ ಸಾಧನೆಗೆ ಮಾದರಿಯಾಗಿ ಬೆಳೆಯಬೇಕಿದೆ. ಇಂತಹ ಜಯಂತಿಗಳಲ್ಲಿ ಅವರ ಹೆಜ್ಜೆ ಗುರುತುಗಳನ್ನು ಹೆಚ್ಚೆಚ್ಚು ಓದಿ ಕಲ್ಪಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಶಿಕ್ಷಕಿ ದೇವಿಕ, ಹರೀಶ್, ರಾಮು, ಲಕ್ಷ್ಮಿ, ಉಮಾ ಮನೋಜ್ ಇನ್ನಿತರರು ಇದ್ದರು.