ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ನಾಡಪ್ರಭು ಕೆಂಪೇಗೌಡರ ಹಾಕಿಕೊಟ್ಟಿರುವ ಅಡಿಪಾಯಗಳು, ಕೈಗೊಂಡಿದ್ದ ಯೋಜನೆಗಳಿಂದ ನಾಡಿನ ಎಲ್ಲ ವರ್ಗದ ಜನರಿಗೆ ಬಹಳಷ್ಟು ಅನುಕೂಲವಾಗಿದೆ ಎಂದು ತಹಸೀಲ್ದಾರ್ ನಯೀಂಉನ್ನೀಸಾ ಹೇಳಿದರು.ಪಟ್ಟಣದ ಆಡಳಿತ ಸೌಧದ ನ್ಯಾಯಾಲಯ ಸಭಾಂಗಣಲ್ಲಿ ತಾಲೂಕು ಆಡಳಿತದಿಂದ ಗುರುವಾರ ನಡೆದ ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯುತ್ಸವದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಸಾಧನೆ ಮತ್ತು ದೂರದೃಷ್ಟಿಯನ್ನು ಮರೆಯಲು ಸಾಧ್ಯವಿಲ್ಲ. ಅಂದಿನ ಕನಸು ಮತ್ತು ದೂರದೃಷ್ಟಿಯಿಂದಾಗಿ ಬೆಂಗಳೂರು ಇಂದು ರಾಜ್ಯದ ರಾಜಧಾನಿಯಾಗಲು ಸಾಧ್ಯವಾಯಿತು ಎಂದರು.ಕೆಂಪೇಗೌಡರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಮಾಡಿರುವ ಸಾಧನೆಗಳನ್ನು ಐನೂರು ವರ್ಷ ಕಳೆದರೂ ಗುರುತಿಸಬಹುದು. ಈ ಮಹಾನ್ ವ್ಯಕ್ತಿಯ ಜಯಂತ್ಯುತ್ಸವವನ್ನು ಸರ್ಕಾರ ಆಚರಣೆಗೆ ತಂದಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದರು.
ನಾಡಪ್ರಭು ಕೆಂಪೇಗೌಡರೂ ಸೇರಿದಂತೆ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್, ಭಗೀರಥ, ಬಸವಣ್ಣ, ಕನಕದಾಸರು, ವಾಲ್ಮೀಕಿ ಅವರಂತಹ ಅನೇಕ ಮಹನೀಯರ ಜಯಂತಿ ಆಚರಿಸುವ ವೇಳೆ ಅವರು ಮಾಡಿರುವ ಸಾಧನೆಗಳನ್ನು ಬಹಳಷ್ಟು ತಿಳಿದುಕೊಳ್ಳಬಹುದು. ಈ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಸ್ವಾಸ್ತ್ಯ ಸಮಾಜ ನಿರ್ಮಾಣ ಮಾಡಬೇಕು ಎಂದರು.ಕೆಂಪೇಗೌಡರ ಜೀವನ ಚರಿತ್ರೆ ಕುರಿತು ಹಿರಿಯ ಸಾಹಿತಿ ಮಹಮ್ಮದ್ ಕಲೀಂಉಲ್ಲಾ ಮಾತನಾಡಿದರು. ಡಿವೈಎಸ್‌ಪಿ ಎ.ಆರ್.ಸುಮಿತ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಮಂಜುನಾಥ್, ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಎಚ್.ಟಿ.ಕೃಷ್ಣೇಗೌಡ, ತಾಪಂ ಮಾಜಿ ಅಧ್ಯಕ್ಷ ಆರ್.ಕೃಷ್ಣೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಯೋಗೇಶ್, ಸಹಾಯಕ ಕೃಷಿ ನಿರ್ದೇಶಕ ಹರೀಶ್, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕುಮಾರ್, ನಿವೃತ್ತ ದೈಹಿಕ ಪರೀಕ್ಷಕ ಶಿವಣ್ಣಗೌಡ, ಶಿರಸ್ತೇದಾರ್ ಮಲ್ಲಿಕಾರ್ಜುನಸ್ವಾಮಿ ಸೇರಿದಂತೆ ಹಲವರು ಇದ್ದರು.