ಕನ್ನಡಪ್ರಭ ವಾರ್ತೆ ತುಮಕೂರು ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಅವರ ಜನಪರ ಆಡಳಿತ ಇಂದಿನ ರಾಜಕಾಣಿಗಳಿಗೆ ಮಾದರಿಯಾಗಿದೆ ಎಂದು ಶಾಸಕ ಬಿ. ಸುರೇಶ್‌ಗೌಡ ತಿಳಿಸಿದರು. ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಜಿಲ್ಲಾ ಕಸಾಪ ಹಾಗೂ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣಾ ಸಮಿತಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ದಕ್ಷ ಆಡಳಿತಗಾರರಾಗಿ ಅವರು ಮಾಡಿದ ಅಭಿವೃದ್ಧಿ ಇಂದು ಬೆಂಗಳೂರನ್ನು ವಿಶ್ವ ಮಟ್ಟಕ್ಕೆ ಪರಿಚಯಿಸಿದೆ ಎಂದರು. ಕೇಂದ್ರ ಸರ್ಕಾರ ನಾಡಪ್ರಭು ಕೆಂಪೇಗೌಡರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುವ ನಿಟ್ಟಿನಲ್ಲಿ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಟ್ಟು, ಅವರ ೧೦೫ ಅಡಿ ಎತ್ತರದ ಮೂರ್ತಿ ಸ್ಥಾಪಿಸಿ, ಇಡೀ ವಿಶ್ವಕ್ಕೆ ಕೆಂಪೇಗೌಡರನ್ನು ಪರಿಚಯಿಸುವ ಕೆಲಸ ಮಾಡಿದೆ. ಅವರು ನೀರಾವರಿ, ನೀರಿನ ನಿರ್ವಹಣೆಗೆ ಕೈಗೊಂಡ ಪದ್ದತಿಗಳೂ ಬೆಂಗಳೂರು ಗ್ರೀನ್ ಸಿಟಿಯಾಗಿ, ಐಟಿ-ಬಿಟಿ ಹಬ್ ಆಗಿ ಬೆಳೆಯಲು ಕಾರಣವಾಗಿದೆ. ಕುಲಕಸುಬಿನ ಆಧಾರದಲ್ಲಿ ವ್ಯಾಪಾರಕ್ಕೆ ಅನುಕೂಲವಾಗಲು ನಿರ್ಮಿಸಿದ ಪೇಟೆಗಳು ಇಂದಿಗೂ ಮಾದರಿ ಎಂದರು. ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಕೆಂಪೇಗೌಡರನ್ನು ಇಂದು ಕೇವಲ ಬೆಂಗಳೂರಿಗೆ ಸೀಮಿತಗೊಳಿಸಲಾಗಿದೆ. ಆದರೆ ಅವರು ಅಂದು ನೀಡಿದ ಯೋಜನೆಗಳನ್ನು ಹೇಗೆ ನಮ್ಮ ಜಿಲ್ಲೆಯ ಬೆಳವಣಿಗೆಗೆ ಬಳಕೆ ಮಾಡಬಹುದು ಎಂಬುದನ್ನು ಇಂದಿನ ಯುವಜನರು ಚಿಂತಿಸಬೇಕಿದೆ. ಅವರು ದೂರದೃಷ್ಟಿಯ ಯೋಜನೆಗಳು, ಅವುಗಳ ಉಪಯೋಗ ಕುರಿತು ಪುಸ್ತಕ ಮುದ್ರಿಸಿ ಎಲ್ಲರಿಗೂ ತಲುಪುವಂತೆ ಮಾಡಬೇಕು ಎಂದು ತಿಳಿಸಿದರು. ಇಂದು ಸಾಂಕೇತಿಕವಾಗಿ ಜಿಲ್ಲಾಡಳಿತ ಜಯಂತಿಯನ್ನು ಆಚರಿಸುತ್ತಿದ್ದು, ಕೆಲವೇ ದಿನಗಳಲ್ಲಿ ಬಿಜಿಎಸ್ ವೃತ್ತದಲ್ಲಿ ಅವರ ನಾಮಫಲಕ ಅನಾವರಣ ಮಾಡುವ ಮೂಲಕ ಅದ್ಧೂರಿಯಾಗಿ ಆಚರಿಸಲಾಗುವುದು ಎಂದರು.
ತಹಸೀಲ್ದಾರ್ ರಾಜೇಶ್ವರಿ ಮಾತನಾಡಿ, ಕೆಂಪೇಗೌಡ ಅವರು ಒಂದು ಸಮುದಾಯಕ್ಕೆ ಸಿಮೀತರಾದವರಲ್ಲ, ಅವರು ವಿಶ್ವಮಾನವರು. ಎಲ್ಲ ವರ್ಗದ ಜನರು ಅವರ ಕುಲ ಕಸುಬಿನಿಂದ ಬಂದ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆ ಒದಗಿಸಿ, ಜನರ ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ಕಾರಣರಾಗಿದ್ದರು. ನೂರಾರು ಕೆರೆ ಕಟ್ಟೆಗಳನ್ನು ನಿರ್ಮಿಸಿ, ಜನರ ಬದುಕಿಗೆ ಆಸರೆ ಒದಗಿಸಿದ್ದರು. ಇಂದಿಗೂ ಬೆಂಗಳೂರು ವಿಶ್ವದಲ್ಲಿಯೇ ಗಮನ ಸೆಳೆಯುವ ನಗರವಾಗಿದ್ದರೆ ಅದಕ್ಕೆ ಕೆಂಪೇಗೌಡರ ದೂರದೃಷ್ಠಿಯೇ ಕಾರಣ ಎಂದರು. ಮಾಜಿ ಶಾಸಕ ಎಚ್.ನಿಂಗಪ್ಪ ಮಾತನಾಡಿ, ಜನರಿಗೆ ಕುಲಕಸುಬಿನ ಆಧಾರದಲ್ಲಿ ವ್ಯಾಪಾರ ವಹಿವಾಟಿಗೆ ಅವಕಾಶ ಮಾಡಿಕೊಟ್ಟು, ಗಡಿಗಳನ್ನು ನಿರ್ಮಿಸಿ, ನಗರದ ಸಮಗ್ರ ಅಭಿವೃದ್ದಿಗೆ ಯೋಜನೆ ರೂಪಿಸಿದ ಕೆಂಪೇಗೌಡರು, ವಿಜಯನಗರದ ಅರಸರ ಒಪ್ಪಿಗೆ ಪಡೆದು ಸ್ವಂತ ನಾಣ್ಯ ಚಲಾವಣೆಗೆ ತಂದು, ನಾಡಿನ ಬೆಳವಣಿಗೆಗೆ ಪೂರಕ ವಾತಾವರಣದ ಸೃಷ್ಟಿ ಮಾಡಿದ್ದರು. ಇಂತಹವರ ಜಯಂತಿಯನ್ನು ಎಲ್ಲಾ ಸಮುದಾಯದವರು ಒಗ್ಗೂಡಿ ಆಚರಿಸುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದರು.ನಾಡಪ್ರಭು ಕೆಂಪೇಗೌಡರ ಕುರಿತು ವಿಶೇಷ ಉಪನ್ಯಾಸ ನೀಡಿದ ಸಂಶೋಧಕ ಡಾ.ಡಿ.ಎನ್.ಯೋಗೀಶ್ವರಪ್ಪ, ೧೫೩೨ರಿಂದ ೧೫೯೭ರವರೆಗೆ ಸುಮಾರು ೫೫ ವರ್ಷಗಳ ಕಾಲ ಯಲಹಂಕ ನಾಡಪ್ರಭುಗಳಾಗಿ ಆಳ್ವಿಕೆ ನಡೆಸಿದ ಕೆಂಪೇಗೌಡರು ವಿಜಯನಗರ ಅರಸ ಅಚ್ಯುತರಾಯನ ಅನುಮತಿ ಪಡೆದು ಕೋಟೆ ನಿರ್ಮಿಸಿ ಅಧಿಕಾರ ನಡೆಸಿದರು. ಕುಲಕಸುಬು ಆಧಾರಿತ ಪೇಟೆಗಳನ್ನು ನಿರ್ಮಿಸಿ, ಜನರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಅಗತ್ಯ ವಾತಾವರಣ ಸೃಷ್ಟಿಸಿದರು. ಕೃಷಿ ಮತ್ತು ನೀರಾವರಿಗೆ ಒತ್ತು ನೀಡಿದ ಕೆಂಪೇಗೌಡರು, ಬೆಂಗಳೂರಿನಲ್ಲಿ 547 ಕೆರೆಗಳು, ಒಂದು ಸಾವಿರಕ್ಕೂ ಹೆಚ್ಚು ಕುಂಟೆಗಳನ್ನು ನಿರ್ಮಿಸಿ, ಜನ-ಜಾನುವಾರು ಹಾಗೂ ಕೃಷಿಗೆ ನೀರಿನ ಸೌಲಭ್ಯ ಕಲ್ಪಿಸಿದ್ದರು. ಅವರ ಆಡಳಿತ ಮಾಗಡಿ, ಶಿವನಸಮುದ್ರ, ಕೊರಟಗೆರೆ, ಕುಣಿಗಲ್ ವರೆಗೆ ವಿಸ್ತರಣೆಗೊಂಡಿತ್ತು. ಕೆಂಪಾಪುರ ಮುಂತಾದ ಕಡೆಗಳಲ್ಲಿ ಇರುವ ಹಿರಿಯರ ಸಮಾಧಿಗಳನ್ನು ಸಂರಕ್ಷಿಸಿ, ಸ್ಮಾರಕವಾಗಿಸುವ ಕೆಲಸ ಆಗಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಜನಪರವಾಗಿ ಬೆಂಗಳೂರಿನ ಅಭಿವೃದ್ಧಿಗೆ ದುಡಿದ ಕೆಂಪೇಗೌಡರ ಜಯಂತಿಯನ್ನು ಎಲ್ಲರೂ ಆಚರಿಸುವಂತಾಗಬೇಕು. 16ನೇ ಶತಮಾನದ ನಾಡಪ್ರಭು ಕೆಂಪೇಗೌಡರ ಆಡಳಿತ ಇಂದಿಗೂ ಮಾದರಿಯಾಗಿದೆ. ಸರ್ಕಾರ ಅವರ ದೂರದೃಷ್ಟಿಯ ಯೋಜನೆಗಳನ್ನು ತಮ್ಮ ಅಡಳಿತದಲ್ಲಿಯೂ ಅಳವಡಿಸಿಕೊಳ್ಳುವಂತಾಗಬೇಕು. ಅವರ ಆದರ್ಶಗಳನ್ನು ನಾವು ಪಾಲಿಸಬೇಕಿದೆ ಎಂದರು. ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ ಕು.ಮಿರ್ಜಿ, ಹಿರಿಯರಾದ ಲಕ್ಕಪ್ಪಗೌಡ, ಲಲಿತಾ ಮಲ್ಲಪ್ಪ, ನರಸೇಗೌಡ, ಮನೋಹರಗೌಡ, ಸಿದ್ದರಾಜೇಗೌಡ, ಸಿದ್ದಲಿಂಗೇಗೌಡ, ಅಶ್ವಥಗೌಡ, ಡಿಡಿಪಿಐ ರಾಧಾ, ರೇವಣ್ಣ, ರಾಮಮೂರ್ತಿ ಗೌಡ ಮತ್ತಿತರರು ಉಪಸ್ಥಿತರಿದ್ದರು.ಕೆಂಪೇಗೌಡರ ದೂರದೃಷ್ಟಿ ರಾಜಕಾರಣಿಗಳಿಗೆ ಮಾದರಿ
ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಅವರ ಜನಪರ ಆಡಳಿತ ಇಂದಿನ ರಾಜಕಾಣಿಗಳಿಗೆ ಮಾದರಿಯಾಗಿದೆ ಎಂದು ಶಾಸಕ ಬಿ. ಸುರೇಶ್‌ಗೌಡ ತಿಳಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.