ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಕೆಂಪೇಗೌಡ ಜಯಂತಿ ಆಚರಣೆಯಲ್ಲಿ ಶಾಸಕ ವೀರೇಂದ್ರ ಪಪ್ಪಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬೆಂಗಳೂರು ಕಟ್ಟುವಾಗ ಕೆಂಪೇಗೌಡರು ಅಳವಡಿಸಿಕೊಂಡ ದೂರದೃಷ್ಠಿ ಗುಣ ಇಂದಿನ ಆಡಳಿತಗಾರರಿಗೆ ಪ್ರೇರಣೆ ಆಗಬೇಕೆಂದು ಶಾಸಕ ವೀರೇಂದ್ರ ಪಪ್ಪಿ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಸಮಾರಂಭದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಕೆಂಪೇಗೌಡ ಅವರ ದೂರದೃಷ್ಟಿ ವ್ಯವಸ್ಥಿತ ಆಡಳಿತ ವೈಖರಿಯನ್ನು ಇಂದಿನ ರಾಜಕಾರಣಿಗಳು, ಆಡಳಿತಗಾರರು ಮತ್ತು ಅಧಿಕಾರಿಗಳು ತಮ್ಮ ಆಡಳಿತದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕೆಂಪೇಗೌಡರು ಅಂದು ಬೆಂಗಳೂರನ್ನು ಕಟ್ಟುವಾಗ ರೂಪಿಸಿದ ನೀಲನಕ್ಷೆ ಹಾಗೂ ಯೋಜನಾಬದ್ಧ ವಿನ್ಯಾಸ ಇಂದಿಗೂ ನಮಗೆಲ್ಲ ಮಾರ್ಗದರ್ಶಿ. ಜಾಗತಿಕ ಮಟ್ಟದಲ್ಲಿ ಭಾರತದ ಸಿಲಿಕಾನ್ ಸಿಟಿ ಎಂದು ಹೆಮ್ಮೆಯಿಂದ ಕರೆಯಲ್ಪಡುವ ಬೆಂಗಳೂರಿಗೆ ಅವರೇ ಭದ್ರವಾದ ಅಡಿಪಾಯ ಹಾಕಿದವರು. ಪ್ರತಿಯೊಂದು ವ್ಯಾಪಾರ-ವಹಿವಾಟಿಗೂ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.ಅಂದಿನ ಕಾಲದ ಅತ್ಯಂತ ವೈಭವೋಪೇತ ಹಾಗೂ ಮಾದರಿ ನಗರವಾಗಿದ್ದ ವಿಜಯನಗರ ಸಾಮ್ರಾಜ್ಯದ ಹಂಪಿಯಿಂದ ಪ್ರೇರಿತರಾಗಿದ್ದ ಕೆಂಪೇಗೌಡರು, ಹಂಪಿ ಮಾದರಿಯಲ್ಲೇ ಬೆಂಗಳೂರನ್ನು ಸುಂದರ ನಗರಿಯನ್ನಾಗಿ ಕಟ್ಟಲು ಸಂಕಲ್ಪ ಮಾಡಿ ಯಶಸ್ವಿಯಾದರು. ಕೇವಲ ವ್ಯಾಪಾರವಷ್ಟೇ ಅಲ್ಲದೆ ಪರಿಸರ ಸಂರಕ್ಷಣೆಗೂ ಒತ್ತು ನೀಡಿ, ನಗರದ ನೀರಿನ ದಾಹ ನೀಗಿಸಲು ಬೃಹತ್ ಕೆರೆಗಳನ್ನೂ ನಿರ್ಮಿಸಿದ್ದರು ಎಂದು ತಿಳಿಸಿದರು.
ಒಕ್ಕಲಿಗರ ಅಭಿವೃದ್ಧಿ ನಿಗಮದ ವತಿಯಿಂದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಸುಮಾರು 18ಕ್ಕೂ ಹೆಚ್ಚು ಅರ್ಹ ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿ ಒಟ್ಟು 19 ಫಲಾನುಭವಿಗಳಿಗೆ ಉಚಿತ ಕೊಳವೆಬಾವಿ ಸೌಲಭ್ಯ ಕಲ್ಪಿಸಿಕೊಡಲಾಗಿದೆ ಎಂದರು.ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಇಂದಿನ ಸುಸಜ್ಜಿತ ಹಾಗೂ ಬೃಹತ್ ಬೆಂಗಳೂರು ನಗರಕ್ಕೆ ನೂರಾರು ವರ್ಷಗಳ ಹಿಂದೆಯೇ ಶಾಶ್ವತ ಭದ್ರಬುನಾದಿ ಹಾಕಿದ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಮತ್ತು ಆಡಳಿತ ವೈಖರಿ ಇಂದಿನ ಆಡಳಿತಗಾರರಿಗೆ ದೊಡ್ಡ ಮಾದರಿಯಾಗಿದೆ ಎಂದರು.
ಕೆಂಪೇಗೌಡರು ನಾಡಪ್ರಭು ಮಾತ್ರವಲ್ಲದೆ, ಮೂಲತಃ ಕೃಷಿಕರಾಗಿದ್ದ ಅವರು ಕೃಷಿ ಚಟುವಟಿಕೆಗಳ ಜೊತೆಗೆ ವ್ಯಾಪಾರೀಕರಣಕ್ಕೂ ಒತ್ತು ನೀಡಿದರು. ನಗರದಲ್ಲಿ ವಿವಿಧ ವೃತ್ತಿಗಳಿಗೆ ಅನುಗುಣವಾಗಿ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿದ್ದು, ಕೆರೆ-ಕಟ್ಟೆಗಳನ್ನು ಕಟ್ಟಿಸಿದ್ದು ಅವರ ಆಡಳಿತಾತ್ಮಕ ದೂರದೃಷ್ಟಿಗೆ ಸಾಕ್ಷಿಯಾಗಿದೆ. ಇದು ಇಂದಿನ ಆಡಳಿತಗಾರರಿಗೆ ಒಂದು ಪಾಠವಾಗಿದೆ ಎಂದರು.ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ.ಎಸ್.ಸೌಮ್ಯ ಉಪನ್ಯಾಸ ನೀಡಿ, ಜಾಗತಿಕ ಮಟ್ಟದ ಅತ್ಯುನ್ನತ ವ್ಯಾಪಾರ ಕೇಂದ್ರ ಹಾಗೂ ತಾಂತ್ರಿಕ ಕೌಶಲ್ಯದ ವಿಶ್ವವಿದ್ಯಾಲಯವಾಗಿ ಬೆಳೆದು ನಿಂತಿರುವ ಇಂದಿನ ಬೆಂಗಳೂರಿನ ಯಶಸ್ಸಿನ ಹಿಂದೆ ನಾಡಪ್ರಭು ಕೆಂಪೇಗೌಡರ ಜನಪರ ಕಾಳಜಿ ಅಡಗಿದೆ ಎಂದು ತಿಳಿಸಿದರು.
ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಅಂಗವಾಗಿ ಕೆಂಪೇಗೌಡರ ಜೀವನ ಮತ್ತು ಸಾಧನೆ ಕುರಿತು ಹಮ್ಮಿಕೊಂಡಿದ್ದ ಪ್ರಬಂಧ, ಕವನ ವಾಚನ, ಚಿತ್ರಕಲೆ ಹಾಗೂ ಆಶು ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ತಹಶೀಲ್ದಾರ್ ಬಿ.ಎಂ.ಗೋವಿಂದರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಜಾ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಪಿ.ಚೇತನ್, ಕಾರ್ಯದರ್ಶಿ ಎಸ್.ಜಗನ್ನಾಥ್, ಮುಖಂಡರಾದ ಲಕ್ಷ್ಮೀಕಾಂತ್, ಕಂದಿಕೆರೆ ಸುರೇಶ್ ಬಾಬು, ಪ್ರಸನ್ನ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಇದ್ದರು. ಹೊಸದುರ್ಗದ ಶಬೀನಾ ಬಾನು ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು. ಡಾ.ನವೀನ್ ಮಸ್ಕಲ್ ನಿರೂಪಿಸಿದರು.