ಸಾರಾಂಶ
ನಾಡಪ್ರಭು ಕೆಂಪೇಗೌಡರ ಜಯಂತಿಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಭಿಮತ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ ಬೆಂಗಳೂರು ಸಿಲಿಕಾನ್ ಸಿಟಿಯಾಗಲು ಕೆಂಪೇಗೌಡರ ದೂರದೃಷ್ಟಿಯೇ ಕಾರಣವೆಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಭಿಪ್ರಾಯಪಟ್ಟರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಸಮಾರಂಭದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ರಾಜ್ಯ ರಾಜಧಾನಿ ಬೆಂಗಳೂರು ಕಟ್ಟಿದ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ ಎಂದರು.
ರಾಜ್ಯದಲ್ಲಿ ಶ್ರೀಮಂತವಾಗಿ ಆಳ್ವಿಕೆ ಮಾಡಿದ ರಾಜಮನೆತನಗಳಲ್ಲಿ ಮೈಸೂರು ಒಡೆಯರು ಹಾಗೂ ವಿಜಯನಗರ ಸಂಸ್ಥಾನದವರು ಪ್ರಮುಖರು. ವಿಜಯನಗರ ಕೃಷ್ಣದೇವರಾಯರ ನಂತರ ಅವರ ಸಹೋದರ ಅಚ್ಯುತರಾಯ ಆಳ್ವಿಕೆಗೆ ಬಂದಾಗ ಸ್ಥಳೀಯ ಆಡಳಿತ ಸುಧಾರಣೆಗಾಗಿ ಅಚ್ಯುತರಾಯರು, 12 ಹೋಬಳಿಗಳಿಗಳನ್ನು ಒಳಗೊಂಡ ಹಳೆಯ ಬೆಂಗಳೂರನ್ನು 50 ಸಾವಿರ ವರಹಗಳಿಗೆ ಹಿರಿಯ ಕೆಂಪೇಗೌಡರಿಗೆ ಕೊಡುತ್ತಾರೆ. ಅಂದಿನ ಆಡಳಿತ ವ್ಯವಸ್ಥೆಯಲ್ಲಿ ಕೇವಲ 30 ಪಗೋಡಗಳು ಆದಾಯ ಲಭಿಸುತ್ತಿತ್ತು. ಅಂತಹ ಸಂದರ್ಭದಲ್ಲಿ ಹಳೆಯ ಬೆಂಗಳೂರನ್ನು ಆಡಳಿತದ ವಶಕ್ಕೆ ಪಡೆದು ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣವಾಗಿ ಕಾವಲು ಗೋಪುರ ನಿರ್ಮಾಣ ಮಾಡಿ, ಕೋಟೆ ಕೊತ್ತಲುಗಳು, ಕೆರೆ ಕಟ್ಟೆಗಳನ್ನು ನಿರ್ಮಿಸಿದ್ದಾರೆ. ಬೃಹತ್ ಬೆಂಗಳೂರು ಬೆಳವಣಿಗೆಗೆ ನಾಡಪ್ರಭು ಕೆಂಪೇಗೌಡರು ಕಾರಣರಾಗಿದ್ದಾರೆ ಎಂದು ಹೇಳಿದರು.ನಿವೃತ್ತ ಪ್ರಾಂಶುಪಾಲ ಡಾ.ಸಿ.ಶಿವಲಿಂಗಪ್ಪ ಮಾತನಾಡಿ, 16ನೇ ಶತಮಾನದ ಅತ್ಯುನ್ನತ ಮಾದರಿಯ ಯೋಜನಾಬದ್ಧ ಶೈಲಿ ನಗರವಾಗಿ ಬೆಂಗಳೂರನ್ನು ಕೆಂಪೇಗೌಡರು ವಿಸ್ತರಿಸಿದರು. ನಾಡು ಮತ್ತು ಜನರ ಹಿತರಕ್ಷಣೆಗಾಗಿ ಕೋಟೆ ಮತ್ತು ಗುಡಿಗೋಪುರಗಳ ನಿರ್ಮಾಣದ ಜೊತೆಗೆ ನಗರ ಹಾಗೂ ಕೃಷಿ ನೀರಿನ ಸಂಪನ್ಮೂಲ ವ್ಯವಸ್ಥೆ ಮಾಡಿದರು. ಸಾಲದೆಂಬಂತೆ ವಾಣಿಜ್ಯ ನಗರವಾಗಿ ಅಭಿವೃದ್ಧಿ ಮಾಡಿದರು. ಜನಹಿತ ಕಾರ್ಯಗಳಿಂದ ಲೋಕ ಪ್ರಸಿದ್ಧಿಯಾದ ನಾಡಪ್ರಭು ಕೆಂಪೇಗೌಡ ಅಜರಾಮರವಾಗಿದ್ದಾರೆ. ಕೆಂಪೇಗೌಡರ ಆತ್ಮಸ್ಥೈರ್ಯ, ಪರಿಶ್ರಮ, ಬದ್ಧತೆ, ನೈತಿಕತೆ, ಸ್ವಾಭಿಮಾನ, ಜನಹಿತ ಇಚ್ಚಾಶಕ್ತಿ, ಅನುಪಮ ವ್ಯಕ್ತಿತ್ವ, ನಾಯಕತ್ವದ ಒಳನೋಟಗಳು ಈಗಿನ ಜನಪ್ರತಿನಿಧಿಗಳಿಗೆ ಮತ್ತು ಆಡಳಿತಗಾರರಿಗೆ ಪ್ರೇರಕಶಕ್ತಿಯಾಗಿ ಮಾದರಿಯಾಗಬೇಕಿದೆ. ವರ್ತಮಾನ ಬದುಕಿನ ಒಳಿತಿಗಾಗಿ ಮತ್ತು ಭವಿಷ್ಯತ್ತಿನ ಸುಭದ್ರತೆಗಾಗಿ ಚರಿತ್ರೆಯೊಂದಿಗೆ ನಾವೆಲ್ಲರೂ ಮುಖಾಮುಖಿಯಾಗಬೇಕಿದೆ ಎಂದು ಹೇಳಿದರು.
ಬೆಂಗಳೂರಿಗೆ, ಉದ್ಯಾನ ಮತ್ತು ವಾಣಿಜ್ಯ ನಗರಿ ಹಾಗೂ ಮಾಯಾ ನಗರಿ ಎಂಬ ಪ್ರತೀತಿ ಇದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜ್ಞಾನ ಮತ್ತು ಕೌಶಲ್ಯಗಳ ಹಾಗೂ ಐಟಿ, ಬಿಟಿಗಳ ಕೇಂದ್ರ, ಆರ್ಥಿಕ ಶಕ್ತಿಯ ತೊಟ್ಟಿಲು, ಸಾಂಸ್ಕೃತಿಕ, ಸೃಜನಶೀಲತೆ, ಚಲನಶೀಲ ಪರಂಪರೆಯ ಸೀಮೆ ಹಾಗೂ ಪ್ರಭುತ್ವದ ಅಡಳಿತಾತ್ಮಕ ಅಧಿಕಾರದ ಮೈದಾನವಾಗಿದೆ. ಬಹುಭಾಷೆಗಳ, ಬಹು ಸಂಸ್ಕೃತಿಗಳ, ಬಹು ವೃತ್ತಿಗಳ ಬಹುತ್ವಗಳ ಊರು ಬೆಂಗಳೂರು. ಕೆಂಪೇಗೌಡರ ಶೌರ್ಯ, ತ್ಯಾಗ, ಅಭಿವೃದ್ಧಿ ಸಂಕೇತವಾಗಿದೆ ಎಂದು ಶಿವಲಿಂಗಪ್ಪ ಹೇಳಿದರು.ಒಕ್ಕಲಿಗರ ಸಂಘದ ನಿರ್ದೇಶಕ ಡಾ.ವೀರಣ್ಣ ಮಾತನಾಡಿ, ಮಹನೀಯರ ಜಯಂತಿಗಳು ಕೇವಲ ಜಯಂತಿಗಳಿಗೆ ಸೀಮಿತವಾಗದೆ, ಅವರ ದೂರದೃಷ್ಠಿಯ ಕನಸುಗಳು ನಮ್ಮೆಲ್ಲರಿಗೂ ಅನುಕರಣೀಯವಾಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಕೆಂಪೇಗೌಡ ಜಯಂತಿ ಪ್ರಯುಕ್ತ ಕೆಂಪೇಗೌಡರ ಜೀವನ, ಸಾಧನೆ ಕುರಿತು ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ನೀಡಿ ಗೌರವಿಸಲಾಯಿತು.
ಪ್ರಬಂಧ ಸ್ಪರ್ಧೆಯಲ್ಲಿ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆಯ ಕೀರ್ತನ ಪ್ರಥಮ ಸ್ಥಾನ, ಶ್ರೀ ಕಬೀರಾನಂದಾ ಪ್ರೌಢಶಾಲೆಯ ಸಿದ್ದೇಶ್ ದ್ವಿತೀಯ ಹಾಗೂ ಬೃಹನ್ಮಠ ಪ್ರೌಢಶಾಲೆಯ ಪಿ.ಸಿ.ಬಿಂದು ತೃತೀಯ ಸ್ಥಾನ ಪಡೆದರು.ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ತಹಸೀಲ್ದಾರ್ ಡಾ.ನಾಗವೇಣಿ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಪಿ.ಚೇತನ್, ಕಾರ್ಯದರ್ಶಿ ಎಸ್.ಜಗನ್ನಾಥ್, ಗೌರವಾಧ್ಯಕ್ಷ ಪ್ರೊ.ಎನ್.ಈರಣ್ಣ, ನಿರ್ದೇಶಕರಾದ ಹನುಮಂತಪ್ಪ, ದ್ಯಾಮಪ್ಪ, ಪರಮೇಶ್ವರ್, ವಿನಯ್, ಲೋಕೇಶ್, ಚಿದಾನಂದ, ನಗರಸಭೆ ವ್ಯವಸ್ಥಾಪಕಿ ಮಂಜುಳಾ ಇದ್ದರು.
ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಚಿತ್ರಕಲಾ ಸ್ಪರ್ಧೆಯಲ್ಲಿ ವಾಸವಿ ಆಂಗ್ಲ ಶಾಲೆಯ ವಿನೇಶ್ ಚಂದ್ರ, ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಎಸ್.ವರುಣ್ ಹಾಗೂ ವಾಸವಿ ವಿದ್ಯಾಸಂಸ್ಥೆಯ ಎಸ್.ಎನ್ ಅಮಿತ್ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ. ಭಾಷಣ ಸ್ಪರ್ಧೆಯಲ್ಲಿ ಸಂತ ಜೋಸೆಫ್ ಪ್ರೌಢಶಾಲೆಯ ಸಹನಾ ಪ್ರಥಮ, ಬೃಹನ್ಮಠ ಪ್ರೌಢ ಶಾಲೆಯ ನಿತ್ಯಾ ದ್ವಿತೀಯ ಹಾಗೂ ಬಾಲಕಿಯರ ಪ್ರೌಢಶಾಲೆಯ ಡೀನಾ ಎಸ್ ಜೈನ್ ತೃತೀಯ ಸ್ಥಾನ ಪಡೆದಿದ್ದಾರೆ. ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಪ್ರಮಾಣ ಪತ್ರ ಮತ್ತು ಪುಸ್ತಕ ಬಹುಮಾನ ವಿತರಿಸುವ ಮೂಲಕ ಅಭಿನಂದಿಸಿದರು.