ಮಾನಸಿಕ ಅಸ್ವಸ್ಥನಿಂದ ಕೆಂಪೇಗೌಡರ ಪ್ರತಿಮೆಗೆ ಹಾನಿ

| Published : Aug 15 2024, 01:50 AM IST

ಸಾರಾಂಶ

ಪಟ್ಟಣ ಹೊರವಲಯದ ಪುಂಗನೂರು ಕ್ರಾಸ್‌ನಲ್ಲಿದ್ದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಮಾನಸಿಕ ಅಸ್ವಸ್ಥನಿಂದ ಧ್ವಂಸವಾಗಿರುವ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರ

ಪಟ್ಟಣ ಹೊರವಲಯದ ಪುಂಗನೂರು ಕ್ರಾಸ್‌ನಲ್ಲಿದ್ದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಮಾನಸಿಕ ಅಸ್ವಸ್ಥನಿಂದ ಧ್ವಂಸವಾಗಿರುವ ಘಟನೆ ನಡೆದಿದೆ.

ಬುಧವಾರ ಬೆಳಗ್ಗೆ ಮಾನಸಿಕ ಅಸ್ವಸ್ಥ ಯರ್ರಂವಾರಪಲ್ಲಿ ಮೂಲದ ತಿರುಮಳಪ್ಪ (೫೫) ಆಲಿಯಾಸ್ ಗಾಂಧಿ ಎಂಬ ವ್ಯಕ್ತಿಯು ಧ್ವಂಸಗೊಳಿಸಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಕಂಬಕ್ಕೆ ಕಟ್ಟಿ ಹಾಕಿದ್ದು, ವಿಷಯ ತಿಳಿದ ತಕ್ಷಣ ಶ್ರೀನಿವಾಸಪುರ ಪಟ್ಟಣದ ಪೊಲೀಸ್ ನಿರೀಕ್ಷಕ ಎಂ.ಬಿ.ಗೂರವಕೊಳ್ಳ ತಂಡ ಸ್ಥಳಕ್ಕೆ ಭೇಟಿ ನೀಡಿ ಮಾನಸಿಕ ಅಸ್ವಸ್ಥನನ್ನು ವಶಕ್ಕೆ ಪಡೆದು ಸ್ಥಳೀಯರನ್ನು ಸಮಾಧಾನಪಡಿಸಿದರು.

ಪೊಲೀಸರು ದೂರು ದಾಖಲಿಸಿಕೊಂಡು ನಂತರ ಮಾನಸಿಕ ಅಸ್ವಸ್ಥನನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಒಕ್ಕಲಿಗ ಸಮುದಾಯದ ಯುವ ಮುಖಂಡರು ನ್ಯಾಯಕ್ಕಾಗಿ ಘೋಷಣೆ ಕೂಗಿ, ಪ್ರತಿಭಟನೆ ನಡೆಸುವ ವೇಳೆ ಕೆಲಕಾಲ ಸ್ಥಳದಲ್ಲಿ ಪೊಲೀಸರಿಗೂ ಹಾಗೂ ಸಮುದಾಯದ ಯುವ ಮುಖಂಡರ ಮಧ್ಯೆ ವಾಕ್ಸಮರ ನಡೆಯಿತು. ಘಟನೆಯ ಬಗ್ಗೆ ನ್ಯಾಯ ಒದಗಿಸಬೇಕು ಎಂದು ಸಮುದಾಯದ ಮುಖಂಡರು ಆಗ್ರಹಿಸಿದರು.

ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ವೇಣುಗೋಪಾಲರೆಡ್ಡಿ ಮಾತನಾಡಿ, ಪಟ್ಟಣದಿಂದ ೨ ಕಿಲೋ ಮೀಟರ್ ದೂರದಲ್ಲಿರುವ ಪುಂಗನೂರು ಕ್ರಾಸ್‌ನಲ್ಲಿ ಪ್ರತಿಸ್ಥಾಪಿಸಲಾದ ಕೆಂಪೇಗೌಡರ ಪ್ರತಿಮೆ ಧ್ವಂಸ ಮಾಡಿರುವುದು ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದರು. ಈ ಕೃತ್ಯದ ಹಿಂದೆ ಯಾರಿದ್ದಾರೆಂಬುದನ್ನು ಪೊಲೀಸರು ತನಿಖೆ ನಡೆಸಬೇಕಾಗಿದೆ. ಆರೋಪಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳವಂತೆ ಆಗ್ರಹಿಸಿದರು.

ಮುಖಂಡರಾದ ಶೇಷಾಪುರ ಗೋಪಾಲ್, ಜಿಪಂ ಮಾಜಿ ಸದಸ್ಯ ಶ್ರೀನಿವಾಸ್, ನೀಲಟೂರು ಚಂದ್ರಶೇಖರ್, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ವೇಣುಗೋಪಾಲ ರೆಡ್ಡಿ, ಮಾವು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪರೆಡ್ಡಿ ಇದ್ದರು.