ಸ್ವಾತಂತ್ರ್ಯ ಹೋರಾಟಗಾರರ ತರಬೇತಿ ಕೇಂದ್ರ ಹರಪನಹಳ್ಳಿ

| Published : Aug 15 2024, 01:50 AM IST

ಸಾರಾಂಶ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ದಾವಣಗೆರೆಯಿಂದ ಹರಪನಹಳ್ಳಿ ಮಾರ್ಗವಾಗಿ ಬಳ್ಳಾರಿ ಜಿಲ್ಲಾ ಸಂಚಾರ ಕೈಗೊಂಡಿದ್ದರು.

ಬಿ.ರಾಮಪ್ರಸಾದ್ ಗಾಂಧಿ

ಹರಪನಹಳ್ಳಿ: ಸ್ವಾತಂತ್ರ್ಯ ಸಂಗ್ರಾಮಕ್ಕೆ ಹರಪನಹಳ್ಳಿ ತಾಲೂಕಿನ ಕೊಡುಗೆ ಅಪಾರ. ಪಟ್ಟಣವು ಸ್ವಾತಂತ್ರ್ಯ ಹೋರಾಟಗಾರರ ತರಬೇತಿ ಕೇಂದ್ರವಾಗಿತ್ತು ಎನ್ನುವುದನ್ನು ಇತಿಹಾಸದ ಪುಟದಲ್ಲಿ ಉಲ್ಲೇಖಗೊಂಡಿದೆ. ಹರಪನಹಳ್ಳಿಯು ಬಳ್ಳಾರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಉಗಮ ಸ್ಥಾನ, ಯೋಧರ ತರಬೇತಿ ಕೇಂದ್ರವಾಗಿತ್ತು ಎನ್ನುವುದು ಹಿರಿಯರ ಅಭಿಮತ.

ಮಹಾತ್ಮ ಗಾಂಧೀಜಿಯವರ ಶಾಂತಿಮಾರ್ಗ, ಸುಭಾಶ್ಚಂದ್ರ ಬೋಸ್ ಅವರ ಕ್ರಾಂತಿಮಾರ್ಗ ಇವೆರಡರ ಸಂಯೋಜನೆ ಹರಪನಹಳ್ಳಿ ಸ್ವಾತಂತ್ರ ಹೋರಾಟಗಾರರಲ್ಲಿ ಇದ್ದುದು ಒಂದು ವಿಶೇಷ. ತಾಲೂಕಿನಲ್ಲಿ ಒಟ್ಟು 69 ಮಂದಿ ಸ್ವಾತಂತ್ರ್ಯ ಹೋರಾಟಗಾರರು ಇದ್ದರು. ಅದರಲ್ಲಿ ಈಗ ಯಾರೂ ಇಲ್ಲ.

ಗಾಂಧೀಜಿ ತಂಗಿದ್ದರು:

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ದಾವಣಗೆರೆಯಿಂದ ಹರಪನಹಳ್ಳಿ ಮಾರ್ಗವಾಗಿ ಬಳ್ಳಾರಿ ಜಿಲ್ಲಾ ಸಂಚಾರ ಕೈಗೊಂಡಿದ್ದರು. ಆ ಸಂದರ್ಭದಲ್ಲಿ 1934ರ ಮಾರ್ಚ್ 2ರಂದು ಸಂಜೆ ಸುಮಾರು 4 ಗಂಟೆಗೆ ಗಂಗಾಧರ ರಾವ್ ದೇಶಪಾಂಡೆ, ಠಕ್ಕರ್ ಬಾಪಾ ಅವರೊಂದಿಗೆ ಪಟ್ಟಣದ ಈಗಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಒಂದು ಕೋಣೆಯಲ್ಲಿ ವಾಸ್ತವ್ಯ ಹೂಡಿದ್ದರು. ಇಲ್ಲಿಯ ಜನರಿಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಸ್ಫೂರ್ತಿ ತುಂಬಿದ್ದರು. ಈ ಕುರಿತ ಮಾಹಿತಿಯು ಹಿರಿಯ ಸಾಹಿತಿ, ಸಂಶೋಧಕ ದಿ.ಕುಂ.ಬಾ.ಸದಾಶಿವಪ್ಪ ಬರೆದ ಹರಪನಹಳ್ಳಿ ತಾಲೂಕು ಪರಿಚಯ ಎಂಬ ಪುಸ್ತಕದಲ್ಲಿ ದೊರಕುತ್ತದೆ.

ಮಹಾತ್ಮ ಗಾಂದೀಜಿ ಇಲ್ಲಿಗೆ ಬಂದು ಹೋದ ಸವಿನೆನಪಿಗಾಗಿ ಗಾಂಧೀಜೀ ವಿಶ್ರಾಂತಿ ಪಡೆಯುತ್ತಿರುವ ಏಕಶಿಲಾ ಮೂರ್ತಿಯನ್ನು ಕೃಷ್ಣ ಶಿಲೆಯಲ್ಲಿ ಬೆಂಗಳೂರು ಹಾಗೂ ಕೋಲಾರದ ಶಿಲ್ಪ ಕಲಾವಿದೆ ಎಂ.ಸಂಜಿತಾ ಹಾಗೂ ತಂಡದವರಿಂದ ತಯಾರಿಸಲ್ಪಟ್ಟಿದೆ. ಸ.ಪ.ಪೂ ಕಾಲೇಜಿನ ಒಂದು ಕೋಣೆಯ ಮಧ್ಯ ಭಾಗದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸುಂದರವಾದ ಗಾಂಧೀಜಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಗಾಂಧಿ ಮೆಮೋರಿಯಲ್ ಹಾಲ್ ಎಂದು ಮಾಜಿ ಶಾಸಕ ದಿ. ಎಂ.ಪಿ. ರವೀಂದ್ರ 2017ರ ಅಕ್ಟೋಬರ್ 1ರಂದು ಲೋಕಾರ್ಪಣೆಗೊಳಿಸಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹರಪನಹಳ್ಳಿಯ ಇತಿಹಾಸ ಅಚ್ಚಳಿಯದೇ ಉಳಿದಿದೆ.

ಮಹಾತ್ಮ ಗಾಂಧೀಜಿ ತಂಗಿದ್ದ ಸವಿನೆನಪಿಗಾಗಿ ಹರಪನಹಳ್ಳಿ ಪಟ್ಟಣದ ಸ.ಪ.ಪೂ ಕಾಲೇಜಿನ ಗಾಂಧಿ ಮೆಮೋರಿಯಲ್ ಹಾಲ್ ನಲ್ಲಿ ವಿಶ್ರಾಂತಿ ಸ್ಥಿತಿಯಲ್ಲಿರುವ ಸುಂದರವಾದ ಗಾಂಧೀಜಿ ಮೂರ್ತಿ.