ಸಾರಾಂಶ
ರು ಆಹಾರ ಉದ್ದಿಮೆಗಳ ಅಭಿವೃದ್ಧಿ ಯೋಜನೆ ಮೂಲಕ ಯಶಸ್ವಿ ಉದ್ಯಮಿಯಾದ ವಿಜಯಪುರದ ಸಿದ್ದಪ್ಪ ಆರ್ ಪೂಜಾರಿ ಅವರು ವಿಜಯಪುರ ಜಿಲ್ಲಾದ್ಯಂತ ಕಪೆಕ್ ಯೋಜನೆಗಳ ಸಂಪನ್ಮೂಲ ವ್ಯಕ್ತಿಯಾಗಿ ಬೆಳೆದು ನಿಂತಿದ್ದಾರೆ
ಕರ್ನಾಟಕ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮವು ಪ್ರಧಾನಮಂತ್ರಿಗಳ ಕಿರು ಆಹಾರ ಉದ್ದಿಮೆಗಳ ಅಭಿವೃದ್ಧಿ ಯೋಜನೆ ಮೂಲಕ ಸಾವಿರಾರು ಆಹಾರೋದ್ಯಮಿಗಳನ್ನು ಸೃಷ್ಟಿಸಿದೆ.
ಇದೇ ಯೋಜನೆ ಮೂಲಕ ಯಶಸ್ವಿ ಉದ್ಯಮಿಯಾದ ವಿಜಯಪುರದ ಸಿದ್ದಪ್ಪ ಆರ್ ಪೂಜಾರಿ ಅವರು ವಿಜಯಪುರ ಜಿಲ್ಲಾದ್ಯಂತ ಕಪೆಕ್ ಯೋಜನೆಗಳ ಸಂಪನ್ಮೂಲ ವ್ಯಕ್ತಿಯಾಗಿ ಬೆಳೆದು ನಿಂತಿದ್ದಾರೆ. ಗ್ರಾಮೀಣಾಭಿವೃದ್ಧಿ ಪೂರಕವಾದ ಪವರ್ ಎಂಬ ಎನ್ಜಿಓ ನಡೆಸುತ್ತಿದ್ದ ಸಿದ್ದಪ್ಪ ಪೂಜಾರಿ ಅವರು 2022ರಲ್ಲಿ ಪೂಜಾರಿ ಎಂಟರ್ ಪ್ರೈಸಸ್ ಮೂಲಕ ಉದ್ಯಮಿಯಾಗಲು ಹೊರಟು. ನಿಂಬೆಹಣ್ಣಿನ ಉತ್ಪನ್ನಗಳ ತಯಾರಿಗೆ ಕೈ ಹಾಕಿದ ಸಿದ್ದ್ಪಪ್ಪ, ಅದರಲ್ಲಿ ಯಶಸ್ವಿಯಾಗಿದ್ದಲ್ಲದೇ ಪಿಎಂಎಫ್ಎಂಇ ಯೋಜನೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿಯೂ ಕೆಲಸ ಮಾಡಿ ವಿಜಯಪುರ ಜಿಲ್ಲೆಯ 100ಕ್ಕೂ ಹೆಚ್ಚು ಜನರಿಗೆ ಪಿಎಂಎಫ್ಎಂಇ ಯೋಜನೆಯ ಸಾಲ, ಸಬ್ಸಿಡಿ ಪಡೆಯಲು ಮಾರ್ಗದರ್ಶಕರಾಗಿದ್ದಾರೆ.
ಜೊತೆಗೆ ಈರುಳ್ಳಿ, ನಿಂಬೆಹಣ್ಣು ಮತ್ತು ತರಕಾರಿ ಬೆಳೆಯೋ 1018 ರೈತರನ್ನು ಸಂಘಟಿಸಿ ಪಲ್ಲಂದು ರೈತ ಉತ್ಪಾದಕ ಸಂಸ್ಥೆ ಕಟ್ಟಿ ಮುನ್ನಡೆಸಿದ್ದಾರೆ. ಪೂಜಾರಿ ಎಂಟರ್ ಪ್ರೈಸಸ್ ಮೂಲಕ ನಿಂಬೆಹಣ್ಣಿನ ಗಟ್ಟಿ ರಸ, ನಿಂಬೆಹಣ್ಣಿನ ಸ್ಕ್ವಾಷ್, ನಿಂಬೆ ಜ್ಯೂಸ್, ನಿಂಬೆ ಜ್ಯೂಸ್ ಪೌಡರ್, ಇನ್ಸಟೆಂಟ್ ನಿಂಬೆ ಜ್ಯೂಸ್ ಪೌಡರ್, ನಿಂಬೆ ಸಿಪ್ಪೆ ಪುಡಿ, ಬ್ಲ್ಯಾಕ್ ಲೆಮನ್, ಮೂರು ಬಗೆಯ ನಿಂಬೆ ಉಪ್ಪಿನ ಕಾಯಿ ಸೇರಿದಂತೆ ಒಟ್ಟು 11 ಬಗೆಯ ನಿಂಬೆ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಇವರ ಎಲ್ಲ ಉತ್ಪನ್ನಗಳನ್ನು ಪಲ್ಲಂದು ರೈತ ಉತ್ಪಾದಕ ಸಂಸ್ಥೆಯು ಮಾರ್ಕೆಟಿಂಗ್ ಮಾಡುತ್ತಿದೆ. ವಿಜಾಯ್ ಹೆಸರಿನಲ್ಲಿ ಪೂಜಾರಿ ಎಂಟರ್ಪ್ರೈಸಸ್ ಮತ್ತು ಪಲ್ಲಂದು ರೈತ ಉತ್ಪಾದಕ ಸಂಸ್ಥೆಯ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಒಣ ತರಕಾರಿ: ಇದಲ್ಲದೆ ತರಕಾರಿಗಳ ಬೆಲೆ ಕುಸಿದಾಗ ಅಂತಹ ತರಕಾರಿಗಳನ್ನು ಖರೀದಿಸಿ ಒಣ ತರಕಾರಿಯಾಗಿ ಪರಿವರ್ತಿಸಿ ಮಾರಲಾಗುತ್ತಿದೆ. ಕೆಲವೊಮ್ಮೆ ತರಕಾರಿ ಒಣಗಿಸಿ ಪುಡಿ ಮಾಡಿ ಮಾರುವುದಕ್ಕೂ ಬೇಡಿಕೆ ಇದೆ. ಈರುಳ್ಳಿ, ಟಮೋಟ ಹೀಗೆ ಸ್ಥಳೀಯವಾಗಿ ಬೆಳೆಯುವ ತರಕಾರಿಗಳನ್ನು ಒಣತರಕಾರಿಯಾಗಿ ಪರಿವರ್ತಿಸುವ ತಾಂತ್ರಿಕತೆ ನಮ್ಮಲ್ಲಿದೆ. ಸಂಸ್ಕರಿಸಿದ ಒಣ ತರಕಾರಿ ಮತ್ತು ತರಕಾರಿ ಪೌಡರ್ಗೆ ಸ್ಥಳೀಯವಾಗಿ ಮತ್ತು ರೆಡಿ ಟು ಕುಕ್ ಆಹಾರ ತಯಾರಿಸುವ ಕಂಪನಿಗಳಿಂದ ಬೇಡಿಕೆ ಇದೆ.
ನಿಂಬೆಹಣ್ಣಿನ ಬೀಜಗಳನ್ನು ಗಿಡ ಬೆಳಸುವ ನರ್ಸರಿಗಳಿಗೂ ಹಾಗೂ ನಿಂಬೆ ಬೀಜದಿಂದ ಎಣ್ಣೆ ತೆಗೆದು ಆಯುರ್ವೇದ ಔಷಧ ಉತ್ಪಾದಕರಿಗೂ ನೀಡುತ್ತಿದ್ದೇವೆ. ನಿಂಬೆ ಸಿಪ್ಪೆಯ ಪೌಡರ್ ಅನ್ನು ನಿತ್ಯ ಬಿಸಿ ನೀರಿಗೆ ಬೆರಸಿ ಕುಡಿದರೆ ಕ್ಯಾನ್ಸರ್ ನಿರೋಧಕತೆ ಹೆಚ್ಚಲಿದೆ. ಕ್ರಿಕೆಟಿಗ ಯುವರಾಜ್ ಸಿಂಗ್ ಕ್ಯಾನ್ಸರ್ ಪೀಡಿತರಾಗಿದ್ದಾಗ ಈ ಕುರಿತು ಸಂದರ್ಶನದಲ್ಲಿ ಹೇಳಿದ್ದನ್ನು ಕೇಳಿ ನಿಂಬೆ ಸಿಪ್ಪೆ ಪುಡಿ ಪೌಡರ್ ಮಾಡಿ ಮಾರ್ಕೆಟ್ಗೆ ಬಿಟ್ಟಿದ್ದೇವೆ. ಆದರೆ, ಸಾಮಾನ್ಯ ಜನರಿಗೆ ಇದರ ಅರಿವು ಕಡಿಮೆ. ನಿಂಬೆ ಸಿಪ್ಪೆಯ ಪೌಡರ್ಗೆ ಬಟ್ಟೆ ಒಗೆವ ಡಿಟರ್ಜೆಂಟ್ ತಯಾರಿಕರಿಂದ ಭಾರೀ ಬೇಡಿಕೆ ಇದೆ. ಅವರಿಗೆ ಅದನ್ನು ಸರಬರಾಜು ಮಾಡುತ್ತಿದ್ದೇವೆ. ಇನ್ನು ಅರಬ್ ರಾಷ್ಟ್ರಗಳಲ್ಲಿ ಹಿಡಿ ನಿಂಬೆಹಣ್ಣು ಒಣಗಿಸಿ, ಬೇಯಿಸಿ ಬ್ಲ್ಯಾಕ್ ನಿಂಬೆ ತಯಾರಿಸಲಾಗುತ್ತದೆ. ಅದನ್ನೂ ಕೂಡ ಆರ್ ಅಂಡ್ ಮಾಡಿಟ್ಟುಕೊಂಡಿದ್ದೇವೆ. ಸದ್ಯ ಬೆಂಗಳೂರಿನಲ್ಲಿರುವ ಜಿಐ ಟ್ಯಾಗ್ಡ್ ಸ್ಟೋರ್ನಲ್ಲಿ ನಮ್ಮ ಎಲ್ಲ ಉತ್ಪನ್ನಗಳು ದೊರೆಯುತ್ತವೆ. ಕಪೆಕ್ ನವರು ನೀಡಿದ ವಿವಿಧ ಮೇಳಗಳಲ್ಲಿನ ಮಳಿಗೆ ಅವಕಾಶಗಳು ನಮಗೆ ದೇಶಾದ್ಯಂತ ಗ್ರಾಹಕರನ್ನು ಒದಗಿಸಿವೆ. ಫೋನ್ ಮೂಲಕ ಬುಕ್ ಮಾಡಿ ತರಿಸಿಕೊಳ್ಳುವವರೇ ಹೆಚ್ಚಿದ್ದಾರೆ. ಅಲ್ಲದೇ ಸ್ಥಳೀಯವಾಗಿ ಹಾಗೂ ವಿವಿಧ ಆಹಾರ ಕಂಪನಿಗಳು ನಮ್ಮ ಪ್ರಮುಖ ಗ್ರಾಹಕರಾಗಿದ್ದಾರೆ ಎಂದೂ ಪೂಜಾರಿ ಎಂಟರ್ಪ್ರೈಸಸ್ನ ಸಿದ್ದಪ್ಪ, ಕನ್ನಡಪ್ರಭಕ್ಕೆ ವಿವರಿಸಿದರು.
3 ಕೋಟಿ ವಹಿವಾಟು: 2022ರಲ್ಲಿ ಪೂಜಾರಿ ಎಂಟರ್ ಪ್ರೈಸಸ್ ಶುರು ಮಾಡಿದೆವು. ಕಳೆದ ವರ್ಷ 60 ಲಕ್ಷ ರೂಪಾಯಿ ವಹಿವಾಟು ನಡೆಸಿದೆ. ನಮ್ಮ ವಸ್ತುಗಳನ್ನು ಮಾರ್ಕೆಟಿಂಗ್ ಮಾಡುವ ಪಲ್ಲಂದು ರೈತ ಉತ್ಪಾದಕ ಸಂಸ್ಥೆಯು ಕಳೆದ ವರ್ಷ 3 ಕೋಟಿ ವಹಿವಾಟು ದಾಖಲಿಸಿದೆ.
ಮೈಸೂರಿನ ಸಿಎಫ್ಟಿಆರ್ಐನ ನಿವೃತ್ತ ಅಧಿಕಾರಿ ಅನು ಅಪ್ಪಯ್ಯ ಹಾಗೂ ರಾಯಚೂರು ಕೃಷಿ ವಿವಿ ಆಹಾರ ಸಂಸ್ಕರಣಾ ವಿಭಾಗದ ಮುಖ್ಯಸ್ಥರಾದ ಉದಯ್ ಕುಮಾರ್ ನಿಡೋಣಿ ಅವರ ಮಾರ್ಗದರ್ಶನದಲ್ಲಿ ಮುನ್ನಡೆದಿದ್ದೇವೆ. VJOY ನಮ್ಮ ಬ್ರ್ಯಾಂಡ್ ನೇಮ್. ವಿ ಅಂದ್ರೆ ವಿಜಯಪುರ ಜಾಯ್ ಫುಲ್ ಆಗಿರಲಿ ಎಂದು ಈ ಹೆಸರಿಟ್ಟಿದ್ದೇವೆ. ಪಿಎಂಎಫ್ಎಂಇ ಯೋಜನೆ ಮೂಲಕ ಶುರುವಾದ ಕೆಲವು ಉದ್ದಿಮೆಗಳು ಸೋತಿದ್ದವು. ಅಂತಹುವುಗಳನ್ನು ಗುರುತಿಸಿ ಗೆಲ್ಲಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಖುಷಿ ಹಂಚಿಕೊಂಡರು ಸಿದ್ದಪ್ಪ ಪೂಜಾರಿ. 28 ಲಕ್ಷ ಲೋನ್ ಪಡೆದಿದ್ದೆವು ಸಬ್ಸಿಡಿಯೂ ಬಂದಿದೆ. ಪೂರ್ತಿ ಸಾಲ ತೀರಿಸಿ. ಈ ಮೂರು ವರ್ಷಗಳಲ್ಲಿ 2 ಕೋಟಿ ರೂ.ಗೂ ಹೆಚ್ಚು ಹೊಸ ಹೂಡಿಕೆ ಮಾಡಿದ್ದೇವೆ. ಸದ್ಯದಲ್ಲೇ ದುಬೈ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಪ್ರವಾಸ ತೆರಳಿ ವಿವಿಧ ಕಂಪನಿಗಳಿಗೆ ನಮ್ಮ ಉತ್ಪನ್ನಗಳನ್ನು ಸರಬರಾಜು ಮಾಡುವ ಪ್ರಯತ್ನ ಶುರುವಾಗಲಿದೆ. ಜೊತೆಗೆ ಆನ್ಲೈನ್ ಮಾರಾಟಕ್ಕೂ ಇಷ್ಟರಲ್ಲೇ ಕಾಲಿರಿಸಲಿದ್ದೇವೆ ಎಂದು ಭವಿಷ್ಯದ ಯೋಜನೆಗಳ ವಿವರ ನೀಡಿದರು ಸಿದಪ್ಪ.
ವಿಜಾಯ್ ಉತ್ಪನ್ನಗಳಿಗೆ ಸಂಪರ್ಕಿಸಿ - 7019268550 ಅಥವಾ 9448472075 15 ಲಕ್ಷ ರೂ. ಸಬ್ಸಿಡಿ ಪಡೆಯಿರಿ
ಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ರಾಜ್ಯ ಸರ್ಕಾರ 9 ಲಕ್ಷ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ಸೇರಿ ಒಟ್ಟು 15 ಲಕ್ಷ ರೂಪಾಯಿವರೆಗೂ ಸಹಾಯಧನ ದೊರೆಯಲಿದೆ. ಹೊಸ ಉದ್ಯಮ ಅಥವಾ ಉದ್ಯಮ ವಿಸ್ತರಣೆಗೂ ಯೋಜನೆಯಲ್ಲಿ ಅವಕಾಶವಿದೆ. ಬೆಲ್ಲ ತಯಾರಿಕೆ ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳು ಇದರ ಲಾಭ ಪಡೆಯಬಹುದು. ಆಹಾರ ಉದ್ಯಮಿಗಳಾಗಲು ಸಾಲ ಸಬ್ಸಿಡಿ ಪಡೆಯಲು ಹಾಗೂ ಮತ್ತಿತರ ವಿವರಗಳಿಗಾಗಿ ಕಪೆಕ್ ಹೆಲ್ಪ್ಲೈನ್ ಸಂಪರ್ಕಿಸಿ - 080 – 22271192 ಅಥವಾ 22271193. ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ. www.kappec.karnataka.gov.in ವೆಬ್ಸೈಟ್ನಲ್ಲೂ ಮಾಹಿತಿ ಪಡೆಯಬಹುದು.