ಮೈಸೂರು ಅರಮನೆ ಪ್ರವೇಶಿಸಿದ ಗಜಪಡೆ

| N/A | Published : Aug 11 2025, 12:31 AM IST / Updated: Aug 11 2025, 12:36 PM IST

ಸಾರಾಂಶ

ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆಗೆ ಮೈಸೂರು ಅರಮನೆಯಲ್ಲಿ ಭಾನುವಾರ ಸಂಜೆ 6.45ಕ್ಕೆ ಶುಭ ಮಕರ ಗೋಧೂಳಿ ಲಗ್ನದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

 ಮೈಸೂರು :  ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆಗೆ ಮೈಸೂರು ಅರಮನೆಯಲ್ಲಿ ಭಾನುವಾರ ಸಂಜೆ 6.45ಕ್ಕೆ ಶುಭ ಮಕರ ಗೋಧೂಳಿ ಲಗ್ನದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ತುಂತುರು ಮಳೆಯಲ್ಲೇ ಅಶೋಕಪುರಂನಲ್ಲಿರುವ ಅರಣ್ಯ ಭವನದಿಂದ ಅರಮನೆಯ ಜಯಮಾರ್ತಾಂಡ ದ್ವಾರಕ್ಕೆ ನಡಿಗೆಯಲ್ಲಿ ಆಗಮಿಸಿದ ಅಂಬಾರಿ ಆನೆ ಅಭಿಮನ್ಯು, ಪ್ರಶಾಂತ, ಭೀಮ, ಧನಂಜಯ, ಮಹೇಂದ್ರ, ಕಂಜನ್, ಏಕಲವ್ಯ, ಕಾವೇರಿ ಮತ್ತು ಲಕ್ಷ್ಮಿ ಆನೆಗಳಿಗೆ ಅರ್ಚಕ ಪ್ರಹ್ಲಾದ್ ರಾವ್ ಪೂಜೆ ಸಲ್ಲಿಸಿದರು. ಮಂಗಳವಾದ್ಯದೊಂದಿಗೆ ಆನೆಗಳ ಪಾದಕ್ಕೆ ಕುಂಕುಮ, ಅರಿಶಿಣ, ಗಂಧ, ಬಸ್ಮ, ವಿಭೂತಿ, ಅಕ್ಷತೆ, ವಿವಿಧ ಬಗೆಯ ಹೂಗಳು, ಗರಿಕೆ, ಬೆಲ್ಲ, ಕಬ್ಬು, ಮೋದಕ, ಕಡುಬು, ಪಂಚಕಜ್ಜಾಯ, ಎಲೆ, ಅಡಿಕೆಗಳನ್ನು ಇರಿಸಿ ಪೂಜೆ ಸಲ್ಲಿಸಲಾಯಿತು.

ಸಂಜೆ ಸ್ವಾಗತ ಇದೇ ಮೊದಲು:

ದಸರಾ ಆನೆಗಳನ್ನು ಸಾಮಾನ್ಯವಾಗಿ ಬೆಳಗ್ಗೆ ಅಥವಾ ಮಧ್ಯಾಹ್ನ ಹೊತ್ತಿನಲ್ಲಿ ಅರಮನೆಗೆ ಸ್ವಾಗತಿಸುವುದು ವಾಡಿಕೆ ಆಗಿದೆ. ಆದರೆ, ಇದೇ ಮೊದಲ ಬಾರಿಗೆ ದಸರಾ ಆನೆಗಳನ್ನು ಸಂಜೆ ಹೊತ್ತಿನಲ್ಲಿ, ಅದುವೂ ಸೂರ್ಯಾಸ್ತಮ ಆದ ಬಳಿಕ ಸ್ವಾಗತಿಸಲಾಯಿತು. ಆ ಮೂಲಕ ಹೊಸ ಸಂಪ್ರದಾಯಕ್ಕೆ ಈ ಬಾರಿ ನಾಂದಿ ಹಾಡಲಾಯಿತು.

ಬಳಿಕ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಪಶೋಸಂಗೋಪನೆ ಸಚಿವ ಕೆ. ವೆಂಕಟೇಶ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಅರಮನೆ ಆವರಣಕ್ಕೆ ಆನೆಗಳನ್ನು ಬರ ಮಾಡಿಕೊಂಡರು. ದಸರಾ ಆನೆಗಳು ಅರಮನೆ ಆವರಣಕ್ಕೆ ಪ್ರವೇಶಿಸುತ್ತಿದ್ದಂತೆ ಸಿಎಆರ್ ಪೊಲೀಸರು ಗೌರವ ರಕ್ಷೆ ಸಲ್ಲಿಸಿದರು.

ನಂತರ ಮಂಗಳವಾದ್ಯ, ಕಂಸಾಳೆ, ಡೊಳ್ಳು, ಚಂಡೆ, ಪೂಜಾ ಕುಣಿತ ಸೇರಿದಂತೆ ಜಾನಪದ ಕಲಾ ತಂಡಗಳು, ಪೂರ್ಣಕುಂಭದೊಂದಿಗೆ ಆನೆಗಳು ಅರಮನೆಯ ಮುಂಭಾಗದ ಆನೆ ಬಾಗಿಲಿಗೆ ಪ್ರವೇಶಿಸಿದವು. ಬಳಿಕ ಆನೆಗಳನ್ನು ಪೂರ್ವ ದಿಕ್ಕಿಗೆ ಸಾಲಾಗಿ ನಿಲ್ಲಿಸಿ, ವೇದ ಘೋಷಗಳೊಂದಿಗೆ ಪೂಜೆ ಸಲ್ಲಿಸಲಾಯಿತು.

Read more Articles on