ಕೆಂಪೇಗೌಡರು ದೂರದೃಷ್ಟಿಯುಳ್ಳ ಆಡಳಿತಗಾರರಾಗಿದ್ದರು

| Published : Jun 28 2024, 12:46 AM IST

ಸಾರಾಂಶ

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಸಚಿವ ಡಿ.ಸುಧಾಕರ್ ಉದ್ಘಾಟನೆ ಮಾಡಿ ಮಾತನಾಡಿದರು.

ನಾಡಪ್ರಭು ಕೆಂಪೇಗೌಡ ಜಯಂತಿ ಕಾಯಂತಿ ಕಾರ್ಯಕದಲ್ಲಿ ಸಚಿವ ಡಿ. ಸುಧಾಕರ್‌ ಅಭಿಮತ

ಕನ್ನಡಪ್ರಭ ವಾರ್ತೆ ಹಿರಿಯೂರು ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯ ಆಡಳಿತದ ಫಲವಾಗಿ ಬೆಂಗಳೂರು ಇಂದು ವಿಶ್ವದ ಪ್ರಮುಖ ನಗರವಾಗಿ ಬೆಳೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕೆಂಪೇಗೌಡರು ಭವಿಷ್ಯದ ಆಲೋಚನೆಯಿಟ್ಟುಕೊಂಡು ಆಡಳಿತ ನಡೆಸಿದ್ದರ ಪರಿಣಾಮದ ಪ್ರತಿಫಲ ನಮ್ಮ ಮುಂದಿದೆ. ಬೆಂಗಳೂರು ನಿರ್ಮಿಸುವಾಗಲೇ ಅವರು ಎಲ್ಲಾ ವರ್ಗದ ವ್ಯಾಪಾರಿಗಳ ಹಿತದೃಷ್ಟಿಯಿಂದ ಪೇಟೆಗಳನ್ನು ನಿರ್ಮಿಸಿದ ಮೇಧಾವಿಯಾಗಿದ್ದರು. ಅವರು ಕಟ್ಟಿದ ಬೆಂಗಳೂರು ಇಂದು ಇಡೀ ರಾಜ್ಯದಿಂದ ಬರುವ ಆದಾಯದ ಹತ್ತರಷ್ಟು ಬೆಂಗಳೂರು ನಗರ ತಂದು ಕೊಡುತ್ತಿದೆ. ಕೆಂಪೇಗೌಡರ ಆಡಳಿತದ ಶೈಲಿ ಮತ್ತು ಮುಂದಾಲೋಚನೆಯನ್ನು ರೂಡಿಸಿಕೊಳ್ಳಬೇಕಿದೆ ಎಂದರು.

ಕೆರೆಗಳ ನಿರ್ಮಾಣ, ದೇವಾಲಯಗಳ ನಿರ್ಮಾಣ ಸೇರಿದಂತೆ ಹತ್ತು ಹಲವು ಶಾಶ್ವತ ಕಾರ್ಯಗಳನ್ನು ಮಾಡಿದ ಕೆಂಪೇಗೌಡರ ಆಡಳಿತದ ಕಾಲ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದು. ಬೆಂಗಳೂರು ನಗರ ಉಸ್ತುವಾರಿಗಳಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಬೆಂಗಳೂರಿನ ಅಭಿವೃದ್ಧಿಗೆ ಪಣ ತೊಟ್ಟು ಕೆಲಸ ಮಾಡುತ್ತಿರುವುದನ್ನು ನಾವೆಲ್ಲಾ ನೋಡುತ್ತಿದ್ದೇವೆ. ರೈತರ ಹಿತ ಕಾಯುವ ದೃಷ್ಟಿಯಿಂದ ಕೆರೆ, ಜಲಾಶಯಗಳ ನಿರ್ಮಾಣದತ್ತ ಗಮನ ಹರಿಸಿದ ಕೆಂಪೇಗೌಡರು ಒಬ್ಬ ಸಮರ್ಥ, ದೂರದೃಷ್ಟಿಯುಳ್ಳ ನಾಯಕರಾಗಿದ್ದರು. ಅವರ ಸೇವಾ ಮನೋಭಾವ ಮತ್ತು ಅವರ ಆದರ್ಶಗಳ ಪಾಲನೆ ನಮ್ಮ ಕರ್ತವ್ಯವಾಗಬೇಕು ಎಂದರು.

ಉಪನ್ಯಾಸಕರಾದ ಕಾಂತರಾಜ್ ಮಾತನಾಡಿ, ಕೆಂಪೇಗೌಡರು ಮಹಾನ್ ಆಡಳಿತಗಾರರಷ್ಟೇ ಅಲ್ಲದೆ ಕೃಷಿ ತಜ್ಞ, ನೀರಾವರಿ ತಜ್ಞ, ಸಾಹಿತಿ, ಪರಿಸರ ವಿಜ್ಞಾನಿಯೂ ಆಗಿದ್ದರು. ವಿಜಯನಗರ ವೈಭವದಂತಹ ಮತ್ತೊಂದು ನಗರ ನಿರ್ಮಾಣ ಮಾಡುವ ಕನಸು ಕಂಡಿದ್ದರು. ಅದರಂತೆಯೇ ಅಧಿಕಾರ ವಹಿಸಿಕೊಂಡ ನಂತರ ಪೇಟೆ, ಕೋಟೆ, ಗುಡಿ, ಕೆರೆ, ಉದ್ಯಾನ ಎಂಬ ಐದು ಅಂಶಗಳನ್ನು ಇಟ್ಟುಕೊಂಡು ಸುಸಜ್ಜಿತ ನಗರ ನಿರ್ಮಿಸಿದರು. ಉತ್ತಮ ಆರ್ಥಿಕತೆಯ ಉದ್ದೇಶ ಇಟ್ಟುಕೊಂಡು 64 ಪೇಟೆಗಳನ್ನು ನಿರ್ಮಿಸಿದ್ದಾರೆ. ಆದ್ದರಿಂದ ಕೆಂಪೇಗೌಡರ ಕಾರ್ಯಗಳು ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿವೆ ಎಂದರು.

ಈ ವೇಳೆ ತಹಸೀಲ್ದಾರ್ ರಾಜೇಶ್ ಕುಮಾರ್, ಇಒ ಸತೀಶ್ ಕುಮಾರ್, ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ರಾಮಚಂದ್ರಪ್ಪ, ಕಾರ್ಯಾಧ್ಯಕ್ಷ ಜಯಕುಮಾರ್, ಉಪಾಧ್ಯಕ್ಷ ಜಲ್ದಪ್ಪ, ಪ್ರಧಾನ ಕಾರ್ಯದರ್ಶಿ ಏಕಾಂತಪ್ಪ, ರೈತ ಮುಖಂಡ ಕೆಸಿ ಹೊರಕೇರಪ್ಪ, ನಗರಸಭೆ ಸದಸ್ಯ ವಿಠ್ಠಲ್ ಪಾಂಡುರಂಗ, ನಾರಾಯಣಪ್ಪ, ಮಮತಾ ಕೃಷ್ಣಮೂರ್ತಿ, ಮಾನಸ ಗೌಡ, ರವಿಚಂದ್ರ, ಸುರೇಖಾ ಮಣಿ ಮುಂತಾದವರು ಇದ್ದರು.

ಸಮುದಾಯ ಭವನಕ್ಕೆ₹1ಕೋಟಿ

ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಂದಿಕೆರೆ ಜಗದೀಶ್ ಮಾತನಾಡಿ ತಾಲೂಕಿನಲ್ಲಿ ಒಕ್ಕಲಿಗ ಸಮುದಾಯ ನಿರ್ಮಿಸುತ್ತಿರುವ ಸಮುದಾಯ ಭವನ ಅನುದಾನದ ಕೊರತೆಯಿಂದ ಬಳಲುತ್ತಿದ್ದು ಕಾಮಗಾರಿ ಸ್ಥಗಿತಗೊಂಡಿದೆ. ಹಾಗಾಗಿ ಸರ್ಕಾರ ₹1ಕೋಟಿ ಅನುದಾನ ನೀಡಿ ಸಮುದಾಯ ಭವನ ಪೂರ್ಣಗೊಳ್ಳಲು ಸಹಕಾರ ನೀಡಬೇಕು. ಕೆಂಪೇಗೌಡರ ಜಯಂತಿ ದಿನವೇ ಸಚಿವರು ಸಮುದಾಯ ಭವನದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದರು.