ಸಾರಾಂಶ
ಹೊನ್ನಾವರ: ಕೆಂಪೇಗೌಡ ಕೇವಲ ಕರುನಾಡಿಗೆ ಅಷ್ಟೇ ಅಲ್ಲ ಇಡೀ ಜಗತ್ತಿಗೆ ಪ್ರೇರಣಾಶಕ್ತಿಯಾಗಿದ್ದರು. ಅವರ ಆದರ್ಶಗಳು ಅನುಕರಣೀಯವಾದುದು ಎಂದು ನಿವೃತ್ತ ಪ್ರಾಧ್ಯಾಪಕ ಎಂ.ಆರ್.ನಾಯಕ ಹೇಳಿದರು.
ಪಟ್ಟಣದ ನ್ಯೂ ಇಂಗ್ಲೀಷ್ ಸ್ಕೂಲ್ ಸಭಾಭವನದಲ್ಲಿ ತಾಲೂಕು ಆಡಳಿತ, ಶಾಲಾ ಶಿಕ್ಷಣ ಇಲಾಖೆ ಹಾಗೂ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.ಬೆಂಗಳೂರು ನಗರವು ಜಗತ್ತು ಗಮನ ಸೆಳೆಯುವ ರೀತಿಯಲ್ಲಿ ವೈಶಿಷ್ಟ್ಯಪೂರ್ಣವಾಗಿ ನಿಂತಿದೆ ಎಂದರೆ ಅದಕ್ಕೆ ಕೆಂಪೇಗೌಡರ ಕೊಡುಗೆ ದೊಡ್ಡದು. ಪ್ರಾರಂಭದಲ್ಲಿ ಪೇಟೆಗಳನ್ನು ನಿರ್ಮಾಣ ಮಾಡಿದ ಕೆಂಪೇಗೌಡರು ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಿದರು. ಪೇಟೆಗಳಿಗೆ ಬೇಕಾದ ತಂಗುದಾಣ ಹಾಗೂ ಮೂಲಭೂತ ವ್ಯವಸ್ಥೆಗಳನ್ನು ಒದಗಿಸಿದರು. ನೀರಿನ ವ್ಯವಸ್ಥೆಗಾಗಿ ೨೬೦ ಬೃಹತ್ ಕೆರೆಗಳನ್ನು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ವಿದ್ಯಾರ್ಥಿಗಳು ಅವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ನಿವೃತ್ತ ತಹಸೀಲ್ದಾರ ವಿ.ಆರ್.ಗೌಡ ಮಾತನಾಡಿ, ಕೆಂಪೇಗೌಡ ಜಯಂತಿ ಆಚರಣೆಯನ್ನು ತಾಲೂಕು ಆಡಳಿತವು ವ್ಯವಸ್ಥಿತವಾಗಿ ನಡೆಸಿದೆ. ಕೆಂಪೇಗೌಡರ ವ್ಯಕ್ತಿತ್ವ ಆದರ್ಶಮಯವಾದುದು. ಅನುಕರಣೀಯವಾದುದು ಎಂದರು.ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ತಿಮ್ಮಪ್ಪ ಗೌಡ ಮಾತನಾಡಿ, ಬೆಂಗಳೂರು ಜಾಗತಿಕ ಮಟ್ಟದಲ್ಲಿ ಬೆಳಯಲು ಕೆಂಪೇಗೌಡರು ಅಡಿಪಾಯ ಹಾಕಿದ್ದಾರೆ. ತಾಲೂಕು ಒಕ್ಕಲಿಗರ ಸಂಗವು ಕಾರ್ಯಕ್ರಮಕ್ಕೆ ಎಲ್ಲ ಸಹಕಾರ ನೀಡುವುದು ಎಂದರು.
ಕೆಂಪೇಗೌಡ ದಿನಾಚರಣೆ ಅಂಗವಾಗಿ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ತಹಸೀಲ್ದಾರ ಪ್ರವೀಣ ಕರಾಂಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ತಾಪಂ ಇಒ ಚೇತನಕುಮಾರ, ಗ್ಯಾರಂಟಿ ಸಮಿತಿ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಜಿಪಂ ಮಾಜಿ ಸದಸ್ಯ ಕೃಷ್ಣ ಗೌಡ, ವಿಎಸ್‌ಎಸ್ ಅಧ್ಯಕ್ಷ ಗಣಪಯ್ಯ ಗೌಡ, ಹೊನ್ನಾವರ ಉಳಿಸಿ ಬೆಳೆಸಿ ವೇದಿಕೆ ಅಧ್ಯಕ್ಷ ಜಿ.ಎನ್.ಗೌಡ, ಕರವೇ ಅಧ್ಯಕ್ಷ ಮಂಜುನಾಥ ಗೌಡ, ಕಸಾಪ ಅಧ್ಯಕ್ಷ ಎಸ್.ಎಚ್.ಗೌಡ, ಪ್ರಭಾರಿ ಬಿಇಒ ವಿನಾಯಕ ಅವಧಾನಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. ಸುಧೀಶ ನಾಯ್ಕ ನಿರ್ವಹಿಸಿದರು.