ನಾಡು ಕಂಡ ಶ್ರೇಷ್ಠ ನಾಯಕ ಕೆಂಪೇಗೌಡರು

| Published : Jun 28 2024, 12:55 AM IST

ಸಾರಾಂಶ

ಕೆಂಪೇಗೌಡರ ಆಡಳಿತ ನಮಗೆ ಮಾದರಿಯಾಗಿದೆ. ನಾಡಿನಲ್ಲಿ ಅವರ ಉತ್ತಮ ಆಡಳಿತದಿಂದ ಹಲವಾರು ಅಭಿವೃದ್ಧಿ ಕೆಲಸಗಳು ಆಗಿವೆ.

ಹುಬ್ಬಳ್ಳಿ:

ಬೆಂಗಳೂರು ನಗರ ನಿರ್ಮಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಅವರು ಈ ನಾಡು ಕಂಡ ಶ್ರೇಷ್ಠ ನಾಯಕ ಎಂದು ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್‌ ಪ್ರಕಾಶ ನಾಶಿ ಹೇಳಿದರು.

ಅವರು ಇಲ್ಲಿನ ತಹಸೀಲ್ದಾರ್‌ ಕಾರ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೆಂಪೇಗೌಡರ ಆಡಳಿತ ನಮಗೆ ಮಾದರಿಯಾಗಿದೆ. ನಾಡಿನಲ್ಲಿ ಅವರ ಉತ್ತಮ ಆಡಳಿತದಿಂದ ಹಲವಾರು ಅಭಿವೃದ್ಧಿ ಕೆಲಸಗಳು ಆಗಿವೆ ಎಂದು ಬಣ್ಣಿಸಿದರು.

ಗಮನ ಸೆಳೆದ ವಿದ್ಯಾರ್ಥಿಗಳ ನೃತ್ಯ:

ವಿದ್ಯಾರ್ಥಿಗಳಾದ ಪಲ್ಲವಿ ಹಾಗೂ ಸುವರ್ಣ ಅವರು ಜಾನಪದ ಗೀತೆಗೆ ನೃತ್ಯ ಪ್ರದರ್ಶಿಸಿದರು. ಸೋಮು ಕಬ್ಬೂರು ಮತ್ತು ತಂಡದವರು ಕಲ್ಲಾದರೆ ನಾನು ಬೇಲೂರಿನ ಗುಡಿಯಲ್ಲಿರುವೆ, ಹಾಡಿಗೆ ನೃತ್ಯ ಪ್ರದರ್ಶಿಸಿ, ನೋಡುಗರ ಗಮನ ಸೆಳೆದರು. ಇದೇ ವೇಳೆ ವಿವಿಧ ಸ್ಪರ್ಧೆ ವಿಜೇತರನ್ನು ಸನ್ಮಾನಿಸಲಾಯಿತು.

ಈ ವೇಳೆ ಅಪರ ತಹಸೀಲ್ದಾರ್‌ ಜಿ.ವಿ. ಪಾಟೀಲ, ಶಿವಾನಂದ ಹೆಬ್ಬಳ್ಳಿ, ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪಗೌಡ್ರ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, ಮಕ್ಕಳ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಸಂಜೀವ ಧುಮಕನಾಳ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು. ಶಿಕ್ಷಣ ಸಂಯೋಜಕ ಮೃತ್ಯುಂಜಯ ಜಡಿಮಠ ನಿರೂಪಿಸಿದರು. ಶಿಕ್ಷಣ ಸಂಯೋಜಕ ಪ್ರಭಾಕರ್ ವಂದಿಸಿದರು.ಮೆರವಣಿಗೆಗೆ ಚಾಲನೆ:

ಸ್ಥಳೀಯ ತಾಲೂಕು ಆಡಳಿತ ಸೌಧದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಕೆಂಪೇಗೌಡ ಭಾವಚಿತ್ರದ ಮೆರವಣಿಗೆಗೆ ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್‌ ಪ್ರಕಾಶ ನಾಶಿ ಚಾಲನೆ ನೀಡಿದರು. ಮೆರವಣಿಗೆಯು ತಾಲೂಕು ಆಡಳಿತ ಸೌಧದಿಂದ ಹೊರಟು ಅಂಬೇಡ್ಕರ್ ವೃತ್ತ, ರಾಣಿ ಚೆನ್ನಮ್ಮ ವೃತ್ತ ತಲುಪಿ ಬಳಿಕ ತಾಲೂಕು ಆಡಳಿತ ಸೌಧಕ್ಕೆ ಬಂದು ಕೊನೆಗೊಂಡಿತು.