ಸಾರಾಂಶ
ಚಾಮರಾಜನಗರದ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೆಂಪೇಗೌಡರ ಜಯಂತಿ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ದೇವಾಲಯಗಳು, ಕೆರೆ ,ಕಾಲುವೆ , ಉದ್ಯಾನ,ಕೋಟೆ ವ್ಯಾಪಾರ ,ವಾಣಿಜ್ಯ, ಸಂಸ್ಕೃತಿ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ಕೆಂಪೇಗೌಡರು ಸರ್ವ ಜನಾಂಗದ ನಾಡಪ್ರಭುಗಳಾಗಿದ್ದರು ಎಂದು ಅಖಿಲ ಕರ್ನಾಟಕ ಕನ್ನಡ ಮಹಾಸಭಾ ರಾಜ್ಯಾಧ್ಯಕ್ಷ ಶ್ರೀನಿವಾಸ್ ಗೌಡರವರು ತಿಳಿಸಿದರು. ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೆಂಪೇಗೌಡರ ಜಯಂತಿ ಹಾಗೂ ಕೊಡುಗೆಗಳ ಬಗ್ಗೆ ಮಾತನಾಡುತ್ತಾ ಕೆಂಪೇಗೌಡರ ದೂರದೃಷ್ಟಿ ಇಂದಿಗೂ ಅವರ ಹೆಸರು ಶಾಶ್ವತವಾಗಿ ಉಳಿಯಲು ಕಾರಣವಾಗಿದೆ. ಸಮಾಜಕ್ಕೆ ಅರ್ಪಿಸಿಕೊಂಡ ಕೆಂಪೇಗೌಡರು ಬೆಂಗಳೂರು ನಿರ್ಮಾಣ ಮಾಡುವ ಮೂಲಕ ಕನ್ನಡ ನಾಡು, ನುಡಿ, ಜಲ, ಭಾಷೆ, ಸಂಸ್ಕೃತಿಯ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು ಎಂದರು.ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ್ ಋಗ್ವೇದಿ ಮಾತನಾಡಿ, ಸುಂದರ ಬೆಂಗಳೂರು ನಿರ್ಮಿಸಿ ವಿಶ್ವಕ್ಕೆ ನೀಡಿದ ಶ್ರೀ ಕೆಂಪೇಗೌಡರು ಮರೆಯಲಾಗದ ಮಾಣಿಕ್ಯ. ನಾಡಪ್ರಭುವಾಗಿ , ಧರ್ಮ ಪ್ರಭುವಾಗಿ ಜನಸಾಮಾನ್ಯರ ಹಾಗೂ ಸಮಗ್ರ ಅಭಿವೃದ್ಧಿಯ ಪ್ರಭುವಾಗಿ ಸದಾ ಕಾಲ ಜನರ ಹೃದಯ ಸಾಮ್ರಾಜ್ಯದಲ್ಲಿ ಶಾಶ್ವತ ನೆಲೆ ನಿಂತಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿದ್ದ ಕೊಳ್ಳೇಗಾಲ ತಾಲೂಕು ಕಸಾಪ ಅಧ್ಯಕ್ಷ ಕೊಂಗರಹಳ್ಳಿ ನಾಗರಾಜು ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಸಾಮಂತ ದೊರೆಯಾಗಿ ನಂಬಿಕೆ ಹಾಗೂ ನಿಷ್ಠೆಗೆ ಹೆಸರಾದವರು ಕೆಂಪೇಗೌಡರು. ಕೆಂಪೇಗೌಡರ ಅಭಿವೃದ್ಧಿ ಸದಾಕಾಲ ಸ್ಮರಣೀಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಪಣ್ಯದಹುಂಡಿ ರಾಜು, ಮಹೇಶ್ ಗೌಡ ,ರವಿಚಂದ್ರಪ್ರಸಾದ್, ಬಿಕೆ ಆರಾಧ್ಯ, ಶಿವಲಿಂಗ ಮೂರ್ತಿ ,ಸರಸ್ವತಿ ,ಪದ್ಮ ಪುರುಷೋತ್ತಮ್ ,ಸುರೇಶ್ ಗೌಡ, ಎಸ್ ಲಕ್ಷ್ಮೀನರಸಿಂಹ ,ಬೊಮ್ಮಾಯಿ, ನಂಜುಂಡಸ್ವಾಮಿ, ಕಾರ್ ಕುಮಾರ್ ಉಪಸ್ಥಿತರಿದ್ದರು.