ಕೆಂಪೇಗೌಡರು ನಾಡು ಕಂಡ ಅಪ್ರತಿಮ ನಾಯಕರು-ಗಾಜಿಗೌಡ್ರ

| Published : Jun 28 2024, 12:46 AM IST

ಸಾರಾಂಶ

ನಾಡಪ್ರಭು ಕೆಂಪೇಗೌಡರು ಅಪ್ರತಿಮ ನಾಯಕರು ಹಾಗೂ ಬೆಂಗಳೂರು ನಗರ ನಿರ್ಮಾಣ ಮಾಡಿದವರು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ ಹೇಳಿದರು.

ಹಾವೇರಿ: ನಾಡಪ್ರಭು ಕೆಂಪೇಗೌಡರು ಅಪ್ರತಿಮ ನಾಯಕರು ಹಾಗೂ ಬೆಂಗಳೂರು ನಗರ ನಿರ್ಮಾಣ ಮಾಡಿದವರು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ ಹೇಳಿದರು.ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಉದ್ಘಾಟಿಸಿ, ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆಮಾಡಿ ಅವರು ಮಾತನಾಡಿದರು. ನೂರಾರು ಕೆರೆಗಳನ್ನು ಹಾಗೂ ಹಲವಾರು ದೇವಸ್ಥಾನಗಳನ್ನು ಅವರು ಕಟ್ಟಿಸಿದ್ದರು. ಅವರು ಉತ್ತಮ ಆಡಳಿತಗಾರರಾಗಿದ್ದರು. ಅವರ ದೂರದೃಷ್ಟಿಯಿಂದ ಬೆಂಗಳೂರು ಇಂದು ವ್ಯವಸ್ಥಿತವಾಗಿ ಬೆಳೆದಿದೆ. ವಿದ್ಯಾರ್ಥಿಗಳು ಇಂತಹ ಮಹಾನ್ ನಾಯಕರ ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.ರಾಣಿಬೆನ್ನೂರ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಕಾಂತೇಶರೆಡ್ಡಿ ಗೋಡಿಹಾಳ ಮಾತನಾಡಿ, ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯುಳ್ಳವರಾಗಿದ್ದು, ಬೆಂಗಳೂರನ್ನು ನಾಲ್ಕು ದಿಕ್ಕುಗಳಲ್ಲಿ ವಿಸ್ತಾರವಾಗಿ ನಿರ್ಮಾಣ ಮಾಡಿದ್ದಾರೆ ಹಾಗೂ ೬೪ ಪೇಟೆಗಳನ್ನು ನಿರ್ಮಾಣಮಾಡಿದ್ದಾರೆ. ಸರಣಿ ಕೆರೆಗಳನ್ನು ನಿರ್ಮಾಣ ಮಾಡುವ ಮೂಲಕ ಸಾವಿರ ಕೆರೆಗಳ ಸರದಾರ ಎಂಬ ಬಿರುದು ಸಹ ಪಡೆದಿದ್ದು, ಕೆಂಪೇಗೌಡರ ಆದರ್ಶಗಳನ್ನು ತಿಳಿದುಕೊಳ್ಳಬೇಕು ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಸೇರಿದಂತೆ ಹಲವಾರು ಮಹನೀಯರ ಜಯಂತಿ ಆಚರಣೆ ಮಾಡುವ ಅವರ ಸಾಧನೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವುದು ಸರ್ಕಾರದ ಉದ್ದೇಶವಾಗಿದೆ. ವಿಶ್ವದಲ್ಲೇ ಎಲ್ಲರನ್ನೂ ಕೈಬಿಸಿ ಕರೆಯುವ ಸುಂದರ ಬೆಂಗಳೂರ ನಗರವನ್ನು ಕೆಂಪೇಗೌಡರು ನಿರ್ಮಾಣ ಮಾಡಿದ್ದಾರೆ. ಅವರ ದೂರದೃಷ್ಟಿಯಂತೆ ನಾವು ನಮ್ಮ ಊರು ಹಾಗೂ ನಗರ ಕಟ್ಟಬೇಕು ಎಂದು ಹೇಳಿದರು. ಎಂ.ಎಸ್. ಕೋರಿಶೆಟ್ಟರ ಅವರು ಮಾತನಾಡಿ, ಕೆಂಪೇಗೌಡರು ಇಡಿ ಜಗತ್ತೇ ನೋಡುವ ರೀತಿಯಲ್ಲಿ ಬೆಂಗಳೂರು ನಗರ ನಿರ್ಮಾಣ ಮಾಡಿದ್ದಾರೆ. ಅದೇ ರೀತಿ ಹಾವೇರಿ ನಗರ ಅಭಿವೃದ್ಧಿಯಾಗಬೇಕು ಎಂದು ಹೇಳಿದರು.ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ವಿವಿಧ ಶಾಲಾ-ಕಾಲೇಜುಗಳಲ್ಲಿ ಆಯೋಜಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಆಕರ್ಷಕ ಮೆರವಣಿಗೆ:ಕಾರ್ಯಕ್ರಮಕ್ಕೂ ಮೊದಲು ನಗರದ ತಾಲೂಕು ಪಂಚಾಯಿತಿ ಆವರಣದಿಂದ ನಾಡಪ್ರಭು ಕೆಂಪೇಗೌಡ ಭಾವಚಿತ್ರ ಮೆರವಣಿಗೆ ಜರುಗಿತು. ಕೆಂಪೇಗೌಡರ ಛದ್ಮವೇಷಧಾರಿ, ಮಹಿಳಾ ಡೊಳ್ಳು ತಂಡ ನೋಡುಗರ ಗಮನ ಸೆಳೆಯಿತು.ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ, ಸರ್ಕಾರಿ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ ಅಮೃತಗೌಡ ಪಾಟೀಲ, ತಹಸೀಲ್ದಾರ್ ಶಂಕರ ಜಿ.ಎಸ್., ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ, ನಿರಂಜನಮೂರ್ತಿ, ಉಮೇಶ, ಆರ್.ಎಚ್.ದೊಡ್ಡಮನಿ, ಕೆ.ಎಚ್. ಸಿದ್ದಣ್ಣನವರ ಇತರರು ಇದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಡುವಿನಮಠ ಕಾರ್ಯಕ್ರಮ ನಿರೂಪಿಸಿದರು.