ನಾಡಪ್ರಭು ಶ್ರೀ ಕೆಂಪೇಗೌಡರ 517ನೇ ಜಯಂತಿ ಕಾರ್ಯಕ್ರಮವನ್ನು ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಂದು ಬೆಂಗಳೂರು ವಿಶ್ವದಾದ್ಯಂತ ಸಾಫ್ಟ್‌ವೇರ್‌ ನಗರವಾಗಿ ಗುರುತಿಸಿಕೊಂಡಿದ್ದರೆ, ಅದರ ಭದ್ರ ಅಡಿಪಾಯವನ್ನು ನಾಡಪ್ರಭು ಕೆಂಪೇಗೌಡರು ಹಾಕಿಕೊಟ್ಟಿದ್ದಾರೆ. ಅಧಿಕಾರಗಳು ಶಾಶ್ವತವಲ್ಲ, ಆದರೆ ಜನಪರವಾಗಿ ಮಾಡಿದ ಉತ್ತಮ ಕೆಲಸಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ. ಶಾಸಕರಾಗಿ ಎಲ್ಲರ ಸಲಹೆ, ಸೂಚನೆಗಳನ್ನು ಪಡೆದು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಸಾರ್ವಜನಿಕರ ಸಹಕಾರದೊಂದಿಗೆ ಸಕಲೇಶಪುರ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಕೆಂಪೇಗೌಡರು ತೋರಿದ ಅಭಿವೃದ್ಧಿಯ ಹಾದಿಯಲ್ಲಿ ನಾವು ಸಾಗಬೇಕು,” ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯ ಆಡಳಿತ, ಜನಪರ ಚಿಂತನೆ ಹಾಗೂ ಅಭಿವೃದ್ಧಿ ಕಾರ್ಯಗಳು ಇಂದಿನ ಪೀಳಿಗೆಗೆ ದಾರಿದೀಪವಾಗಿದ್ದು, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಕಲೇಶಪುರ- ಆಲೂರು- ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕ ಸಿಮೆಂಟ್ ಮಂಜುನಾಥ್ ಹೇಳಿದರು.ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಶ್ರೀ ಕೆಂಪೇಗೌಡರ 517ನೇ ಜಯಂತಿ ಕಾರ್ಯಕ್ರಮವನ್ನು ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಂದು ಬೆಂಗಳೂರು ವಿಶ್ವದಾದ್ಯಂತ ಸಾಫ್ಟ್‌ವೇರ್‌ ನಗರವಾಗಿ ಗುರುತಿಸಿಕೊಂಡಿದ್ದರೆ, ಅದರ ಭದ್ರ ಅಡಿಪಾಯವನ್ನು ನಾಡಪ್ರಭು ಕೆಂಪೇಗೌಡರು ಹಾಕಿಕೊಟ್ಟಿದ್ದಾರೆ. ಅಧಿಕಾರಗಳು ಶಾಶ್ವತವಲ್ಲ, ಆದರೆ ಜನಪರವಾಗಿ ಮಾಡಿದ ಉತ್ತಮ ಕೆಲಸಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ. ಶಾಸಕರಾಗಿ ಎಲ್ಲರ ಸಲಹೆ, ಸೂಚನೆಗಳನ್ನು ಪಡೆದು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಸಾರ್ವಜನಿಕರ ಸಹಕಾರದೊಂದಿಗೆ ಸಕಲೇಶಪುರ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಕೆಂಪೇಗೌಡರು ತೋರಿದ ಅಭಿವೃದ್ಧಿಯ ಹಾದಿಯಲ್ಲಿ ನಾವು ಸಾಗಬೇಕು,” ಎಂದು ಹೇಳಿದರು.ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಎಂ. ವಿಶ್ವನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೆಂಪೇಗೌಡ ಜಯಂತಿ ಕೇವಲ ಆಚರಣೆಗೆ ಸೀಮಿತವಾಗಬಾರದು. ಅವರ ಆದರ್ಶಗಳು, ಮೌಲ್ಯಗಳು ಮತ್ತು ಜನಪರ ಆಡಳಿತವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದ ದಿನವಾಗಬೇಕು. ಎಲ್ಲ ವರ್ಗದ ಜನರನ್ನು ಸಮಾನವಾಗಿ ಕಂಡು ಉತ್ತಮ ಆಡಳಿತ ನೀಡಿದ ಮಹಾನ್ ನಾಯಕ ಕೆಂಪೇಗೌಡರು. ಬೆಂಗಳೂರು ನಿರ್ಮಾಣದ ಮೂಲಕ ತಮ್ಮ ದೂರದೃಷ್ಟಿ ಮತ್ತು ಆಡಳಿತ ಸಾಮರ್ಥ್ಯವನ್ನು ಅವರು ಸಾಬೀತುಪಡಿಸಿದ್ದಾರೆ. ಇಂದಿನ ಜನಪ್ರತಿನಿಧಿಗಳು ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಸಂಘದ ವತಿಯಿಂದ 25 ವಿದ್ಯಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆ ಕಲ್ಪಿಸಿ ಶಿಕ್ಷಣಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದರು.ಮಾಜಿ ಶಾಸಕ ಎಚ್. ಕೆ. ಕುಮಾರಸ್ವಾಮಿ ಮಾತನಾಡಿ, ಮಹಾಪುರುಷರ ಜಯಂತಿಗಳ ಉದ್ದೇಶ ಕೇವಲ ಅವರನ್ನು ಸ್ಮರಿಸುವುದಲ್ಲ. ಅವರ ಆದರ್ಶಗಳನ್ನು ಸಮಾಜದಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಗೌರವ. ಯಾವುದೇ ಆಧುನಿಕ ತಂತ್ರಜ್ಞಾನವಿಲ್ಲದ ಕಾಲದಲ್ಲಿಯೇ ಕೆಂಪೇಗೌಡರು ದೂರದೃಷ್ಟಿಯಿಂದ ಬೆಂಗಳೂರು ನಿರ್ಮಿಸಿರುವುದು ಇಂದಿಗೂ ಪ್ರೇರಣೆಯಾಗಿದೆ ಎಂದರು.ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಮುರುಳಿ ಮೋಹನ್ ಮಾತನಾಡಿ, ಕೆಂಪೇಗೌಡರು ದೂರದೃಷ್ಟಿಯುಳ್ಳ ಧೀಮಂತ ನಾಯಕರು. ಅವರು ನಿರ್ಮಿಸಿದ ಬೆಂಗಳೂರು ಇಂದು ಕೋಟ್ಯಂತರ ಜನರ ಬದುಕಿಗೆ ಆಧಾರವಾಗಿದೆ. ಅವರು ನಿರ್ಮಿಸಿದ ದೇವಸ್ಥಾನಗಳು, ರಸ್ತೆಗಳು ಹಾಗೂ ಮೂಲಸೌಕರ್ಯಗಳು ಇಂದಿಗೂ ಮಾದರಿಯಾಗಿದ್ದು, ಅವರ ಆದರ್ಶಗಳನ್ನು ಪಾಲಿಸಿ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಕರ್ನಾಟಕದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಸಾಧನೆಗಳನ್ನು ಮಾಡಿದ್ದಾರೆ. ‘ಕುಳಿತು ಕುಣಿಗಲ್, ನಿಂತು ಮಾಗಡಿ, ಮಾತನಾಡುತ್ತಾ ನಾಡನ್ನೇ ಗೆದ್ದವರು’ ಎಂಬ ಮಾತು ಅವರ ವ್ಯಕ್ತಿತ್ವಕ್ಕೆ ಸೂಕ್ತವಾಗಿದೆ. ಸುಮಾರು 500 ವರ್ಷಗಳ ಹಿಂದೆಯೇ 64 ಕುಲಕಸುಬುಗಳಿಗೆ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸುವ ದೂರದೃಷ್ಟಿ ಹೊಂದಿದ್ದರು. ಬೆಂಗಳೂರು ಕೇವಲ ನಗರವಲ್ಲ, ಜನರ ಬದುಕಿಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಒಳಗೊಂಡ ಯೋಜಿತ ನಗರವಾಗಿತ್ತು. ಅವರ ಆದರ್ಶಗಳು ನಮಗೆ ಸದಾ ದಾರಿದೀಪವಾಗಬೇಕು ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಟೋಲ್‌ಗೇಟ್ ಸಮೀಪದ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಒಕ್ಕಲಿಗ ಸಮುದಾಯದವರು ಡೊಳ್ಳು, ಡಿಜೆ ಸಂಗೀತದೊಂದಿಗೆ ಕೆಂಪೇಗೌಡರ ಭಾವಚಿತ್ರದ ಮೆರವಣಿಗೆಯನ್ನು ಹಳೆ ಬಸ್ ನಿಲ್ದಾಣದವರೆಗೆ ನಡೆಸಿ, ಅಲ್ಲಿಂದ ಒಕ್ಕಲಿಗರ ಸಮುದಾಯ ಭವನಕ್ಕೆ ಆಗಮಿಸಿದರು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಐದು ಗಣ್ಯರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ತಹಸೀಲ್ದಾರ್ ಸುಪ್ರೀತಾ ಕೆ.ಎಸ್, ಸಕಲೇಶಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಮುಫೀಜ್, ಪುರಸಭೆ ಮುಖ್ಯಾಧಿಕಾರಿ ಮಹೇಶ್ವರಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಂಗಾಧರ್‌, ಜೆಡಿಎಸ್ ತಾಲೂಕು ಅಧ್ಯಕ್ಷ ದೊಡ್ಡದಿಣ್ಣೆ ಸ್ವಾಮಿಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಅಶ್ವಥ್ ವಳಲಹಳ್ಳಿ, ಕಾಂಗ್ರೆಸ್ ತಾಲೂಕು ಅಧ್ಯಕ್ಷ ಬಿ.ಎನ್. ರಾಮಚಂದ್ರ (ಬೈರುಮಡಿ ಚಂದ್ರು), ವಿವಿಧ ಸಂಘಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.