ಶ್ರೀಧರ ಗಸ್ತಿ ಓರ್ವ ಶಿಕ್ಷಕರಾಗಿ ಸೃಜನಶೀಲ ಬರಹಗಾರರು. ಪ್ರಯೋಗಶೀಲ ಗುಣವುಳ್ಳ ಅವರಲ್ಲಿ ಅಪಾರವಾದ ಕಲ್ಪನಾಶಕ್ತಿ ಇದೆ. ಸಮಾಜದ ವಾಸ್ತವ ಸಂಗತಿಗಳನ್ನು ವಾಸ್ತವತೆ ಮೀರಿ ತಮ್ಮ 7ನೇ ‘ಕೆಂಡದ ಧೂಳೋ’ ಕಥಾ ಸಂಕಲನ ರಚಿಸಿದ್ದಾರೆ.
ಧಾರವಾಡ:
ಸಾಹಿತ್ಯವನ್ನು ಸಮಾಜದ ಕನ್ನಡಿ ಎಂದು ನಂಬಿರುವ ಶ್ರೀಧರ ಗಸ್ತಿ ಬರಹದ ಮೂಲಕ ಬದುಕಿನ ಸಣ್ಣ ಸಣ್ಣ ಸತ್ಯಗಳನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ ಎಂದು ಹಿರಿಯ ಸಾಹಿತಿ ಡಾ. ರಾಘವೇಂದ್ರ ಪಾಟೀಲ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘವು ಲೇಖಕ ಶ್ರೀಧರ ಗಸ್ತಿ ಅವರ ‘ಕೆಂಡದ ಧೂಳೋ’ ಕೃತಿ ಬಿಡುಗಡೆ ಮಾಡಿದ ಅವರು, ಶ್ರೀಧರ ಗಸ್ತಿ ಓರ್ವ ಶಿಕ್ಷಕರಾಗಿ ಸೃಜನಶೀಲ ಬರಹಗಾರರು. ಪ್ರಯೋಗಶೀಲ ಗುಣವುಳ್ಳ ಅವರಲ್ಲಿ ಅಪಾರವಾದ ಕಲ್ಪನಾಶಕ್ತಿ ಇದೆ. ಸಮಾಜದ ವಾಸ್ತವ ಸಂಗತಿಗಳನ್ನು ವಾಸ್ತವತೆ ಮೀರಿ ತಮ್ಮ 7ನೇ ‘ಕೆಂಡದ ಧೂಳೋ’ ಕಥಾ ಸಂಕಲನ ರಚಿಸಿದ್ದಾರೆ. ಪ್ರತಿಭೆ ಅವರ ವ್ಯಕ್ತಿತ್ವದಲ್ಲಿದೆ. ಆದರೆ, ಪ್ರತಿಭೆ ಇರುವವರೆಲ್ಲ ಲೇಖಕರಾಗುವುದು ಅಪರೂಪ. ಪ್ರತಿಭಾವಂತ ಲೇಖಕರಲ್ಲಿ ಬದ್ಧತೆ, ಕಾರ್ಯತತ್ಪರತೆ ಇರಬೇಕಾಗುತ್ತದೆ. ಅವರ ಸಾಹಿತ್ಯ ಸೇವೆ ಹೀಗೆ ಮುಂದುವರಿಯಲಿ ಎಂದು ಹಾರೈಸಿದರು.ಲೇಖಕಿ ಡಾ. ಪ್ರಜ್ಞಾ ಮತ್ತಿಹಳ್ಳಿ ಕೃತಿ ಪರಿಚಯಿಸಿ, ಈ ಕೃತಿ ಸಮಕಾಲಿನ ಬದುಕಿನ ಸಂಕಟಗಳನ್ನು ಹೊಂದಿದ್ದು ಇಂದಿನ ಯುವ ಶಕ್ತಿಯು ನೈಜ ಜ್ವಲ್ವಂತ ಸಮಸ್ಯೆಗಳಿಗೆ ಗಟ್ಟಿಯಾಗಿ ಧ್ವನಿ ಎತ್ತಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಾಣುವ ಜಾತಿ, ಅಂತಸ್ತು, ನಿರುದ್ಯೋಗ, ಭಾವನಾತ್ಮಕ ಸಂಬಂಧ, ಪ್ರೀತಿ-ಪ್ರೇಮ, ಅಮಾಯಕ ಮಹಿಳೆಯರ ಮೇಲಾಗುವ ಅತ್ಯಾಚಾರ, ಮೌಲ್ಯಗಳ ಅವನತಿ, ಭ್ರಷ್ಟಾಚಾರ, ಧಾರ್ಮಿಕ ದ್ವೇಷ, ಅಂತರ್ಜಾತಿಯ ವಿವಾಹಗಳೆಲ್ಲ ಕಥಾ ಸಂಕಲನದಲ್ಲಿ ಮನೋಜ್ಞವಾಗಿ ಹೆಣೆಯಲಾಗಿದೆ. ನೀಲಿಕಣ್ಣಿನ ಹುಡುಗಿ, ಗೋರಿಯೊಳಗಿನ ಗುಲಾಬಿ, ಜಾತಕ ಜೋಳಿಗೆ, ಮನೆ ಮಾರಾಟಕ್ಕಿದೆ ಎಂಬ ಕಥೆಗಳು ಓದುಗರ ಗಮನ ಸೆಳೆಯುತ್ತವೆ ಎಂದು ಹೇಳಿದರು.ಲೇಖಕ ಶ್ರೀಧರ ಗಸ್ತಿ ಮಾತನಾಡಿದರು. ಸಾಹಿತಿ ಶ್ರೀನಿವಾಸ ವಾಡಪ್ಪಿ ಅಧ್ಯಕ್ಷತೆ ವಹಿಸಿದ್ದರು. ಶಂಕರ ಹಲಗತ್ತಿ, ವೀರಣ್ಣ ಒಡ್ಡೀನ, ಡಾ. ಜಿನದತ್ತ ಹಡಗಲಿ, ಶಿವಾನಂದ ಭಾವಿಕಟ್ಟಿ ಮತ್ತಿತರರು ಇದ್ದರು. 28ಡಿಡಬ್ಲೂಡಿ7