ಸಾರಾಂಶ
ರಾಮನಗರ: ಚನ್ನಪಟ್ಟಣ ತಾಲೂಕು ವಂದಾರಗುಪ್ಪೆ ಗ್ರಾಮದ ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದ 2025ನೇ ಸಾಲಿನ ಜಾನುವಾರು ಜಾತ್ರೆ ಹಾಗೂ ಬ್ರಹ್ಮರಥೋತ್ಸವ ಜ.11ರಿಂದ 21ವರೆಗೂ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ತಿಳಿಸಿದರು.
ರಾಮನಗರ: ಚನ್ನಪಟ್ಟಣ ತಾಲೂಕು ವಂದಾರಗುಪ್ಪೆ ಗ್ರಾಮದ ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದ 2025ನೇ ಸಾಲಿನ ಜಾನುವಾರು ಜಾತ್ರೆ ಹಾಗೂ ಬ್ರಹ್ಮರಥೋತ್ಸವ ಜ.11ರಿಂದ 21ವರೆಗೂ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜ.18ರಂದು ಶ್ರೀ ಕೆಂಗಲ್ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ನಡೆಯಲಿದೆ. ಜಾತ್ರಾ ಸಂದರ್ಭದಲ್ಲಿ ನಿರಂತರವಾಗಿ ವಿದ್ಯುತ್ ಪೂರೈಸಬೇಕು, ಸಾರ್ವಜನಿಕ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್ ಕೈಗೊಳ್ಳಬೇಕು. ದನಗಳ ಜಾತ್ರಾ ಸಮಯದಲ್ಲಿ ಹಾಗೂ ರಥೋತ್ಸವ ದಿನದಂದು ಹೆಚ್ಚುವರಿಯಾಗಿ ಪೊಲೀಸ್ ಸಿಬ್ಬಂದಿಗಳನ್ನು ದೇವಸ್ಥಾನಕ್ಕೆ ನಿಯೋಜಿಸಲು ಕ್ರಮವಹಿಸುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು.ಜಾತ್ರೆ ವೇಖೆ ಅಗ್ನಿ ಮತ್ತಿತರ ಯಾವುದೇ ಅವಘಡಗಳು ಸಂಭವಿಸದಂತೆ ಅಗ್ನಿಶಾಮಕ ದಳ ಕಟ್ಟೆಚ್ಚರ ವಹಿಸಬೇಕು. ಜಾನುವಾರು ಜಾತ್ರೆ ಹಾಗೂ ಬ್ರಹ್ಮರಥೋತ್ಸವ ಸಂದರ್ಭದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ದೀಪಾಲಂಕಾರ ಮಾಡುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸ್ಥಳದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆಂಬ್ಯುಲೆನ್ಸ್ ವ್ಯವಸ್ಥೆ ಮತ್ತು ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಬೇಕು ಹಾಗೂ ರಾಸುಗಳಿಗೆ ಚಿಕಿತ್ಸೆ ನೀಡಲು ಪಶುಪಾಲನಾ ಇಲಾಖೆಯಿಂದ ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಬೇಕು. ಪ್ರಸಾದ ತಯಾರಿಸುವ ಸ್ಥಳದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು, ಅಲ್ಲಿ ಕಡ್ಡಾಯವಾಗಿ ಸಿಸಿಟಿವಿಗಳನ್ನು ಅಳವಡಿಸಬೇಕು. ಪ್ರಸಾದ ಮತ್ತು ಕುಡಿಯುವ ನೀರು ಆರೋಗ್ಯ ಸಂರಕ್ಷಣಾಧಿಕಾರಿಗಳಿಂದ ಪರೀಕ್ಷಿಸಿ ವಿತರಿಸಬೇಕು, ಸ್ವಚ್ಛತೆಗೆ ಆದ್ಯತೆ ನೀಡುಬೇಕು. ಮೂಲ ಸೌಕರ್ಯಗಳಲ್ಲಿ ಯಾವುದೇ ಲೋಪ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಹೇಳಿದರು.ಜಾತ್ರೆಗೆ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ ರಾಜ್ಯ ಸಾರಿಗೆ ಸಂಸ್ಥೆಯ ವೇಗದೂತ ಬಸ್ಸುಗಳು ದೇವಸ್ಥಾನದ ಬಳಿ ಕೋರಿಕೆ ನಿಲುಗಡೆಯನ್ನು ನೀಡುವಂತೆ ಹಾಗೂ ರಾಮನಗರ-ಚನ್ನಪಟ್ಟಣ ಬಸ್ ನಿಲ್ದಾಣದಿಂದ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡುವಂತೆ ಚಂದ್ರಯ್ಯ ತಿಳಿಸಿದರು.
ಸಭೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ತಹಸೀಲ್ದಾರ್ ಎಂ. ಜಿಶಾನ್ ಖಾನ್, ದೇವಸ್ಥಾನದ ಇಒ ರಘು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು, ಅರ್ಚಕರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.6ಕೆಆರ್ ಎಂಎನ್ 4.ಜೆಪಿಜಿ
ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಅಧ್ಯಕ್ಷತೆಯಲ್ಲಿ ಪೂರ್ವ ಸಿದ್ಧತಾ ಸಭೆ ನಡೆಯಿತು.