ಕೆರಗೋಡು ಸಂಪೂರ್ಣ ಶಾಂತ: ನಿಷೇಧಾಜ್ಞೆ ಮುಂದುವರಿಕೆ

| Published : Feb 05 2024, 01:46 AM IST

ಸಾರಾಂಶ

ವಿವಾದಿತ ಧ್ವಜ ಸ್ತಂಭದ ಬಳಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಒಂದು ಕೆಎಸ್‌ಆರ್‌ಪಿ ತುಕಡಿ, ಒಂದು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸುಮಾರು ೫೦ ಮಂದಿ ಪೊಲೀಸರು ಕಾವಲು ಕಾಯುತ್ತಿದ್ದಾರೆ. ಪೊಲೀಸರು ಎರಡು ಪಾಳಿಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಹಾಗೇ ಶ್ರೀಆಂಜನೇಯಸ್ವಾಮಿ ಧ್ವಜದ ಪರವಾಗಿಯೇ ಗ್ರಾಮಸ್ಥರು ಒಗ್ಗಟ್ಟು ಪ್ರದರ್ಶಿಸುತ್ತಿರುವುದರಿಂದ ಶಾಂತಿ ಸಭೆಗೆ ತೆರಳಿದ ಜಿಲ್ಲಾಡಳಿತ ಊರಿನ ಜನರ ನಿರ್ಧಾರಕ್ಕೆ ಬದ್ಧವಾಗಿರುವುದಕ್ಕೆ ಅಸಹಾಯಕವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ವಿವಾದಿತ ಧ್ವಜ ಸ್ತಂಭದ ಬಳಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಒಂದು ಕೆಎಸ್‌ಆರ್‌ಪಿ ತುಕಡಿ, ಒಂದು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸುಮಾರು ೫೦ ಮಂದಿ ಪೊಲೀಸರು ಕಾವಲು ಕಾಯುತ್ತಿದ್ದಾರೆ. ಪೊಲೀಸರು ಎರಡು ಪಾಳಿಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಬೆಳಗ್ಗೆ ೮ ರಿಂದ ರಾತ್ರಿ ೮ ಗಂಟೆಯವರೆಗೆ, ರಾತ್ರಿ ೮ ಗಂಟೆಯಿಂದ ಬೆಳಗ್ಗೆ ೮ ಗಂಟೆಯವರೆಗೆ ಧ್ವಜಸ್ತಂಭದ ಬಳಿಯ ರಂಗಮಂದಿರ, ಸಮೀಪದ ಅಂಗಡಿಗಳು, ಮನೆಗಳ ಬಳಿ ಕುಳಿತು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಧ್ವಜಸ್ತಂಭದ ಮೇಲೆ ರಾಷ್ಟ್ರಧ್ವಜ ಹಾರಾಡುತ್ತಿದ್ದರೆ ಕೆಳಭಾಗದಲ್ಲಿ ಶ್ರೀರಾಮನ ಭಾವಚಿತ್ರ, ಕೇಸರಿ ಬಾವುಟವನ್ನು ಕಟ್ಟಲಾಗಿದೆ. ಧ್ವಜಸ್ತಂಭದ ಬಳಿಗೆ ಊರಿನ ಜನರು ಸುಳಿಯುತ್ತಿಲ್ಲ. ಪಕ್ಕದಲ್ಲೇ ಇರುವ ಶ್ರೀ ಗಣಪತಿ ದೇವಸ್ಥಾನದ ಬಳಿ ಜನರು ಕುಳಿತು ಅವರಷ್ಟಕ್ಕೆ ಅವರು ಮಾತನಾಡಿಕೊಳ್ಳುತ್ತಿದ್ದಾರೆ.

ಜನಜೀವನ, ವಾಹನಗಳ ಸಂಚಾರ, ವ್ಯಾಪಾರ-ವಹಿವಾಟು ಮಾಮೂಲಿನಂತೆಯೇ ನಡೆದಿದೆ. ಕೆರಗೋಡಿನಲ್ಲಿ ಸಂಪೂರ್ಣ ಶಾಂತಿಯುತ ಪರಿಸ್ಥಿತಿ ಇದ್ದರೂ ನಿಷೇಧಾಜ್ಞೆಯನ್ನು ಮುಂದುವರೆಸಲಾಗಿದೆ. ಪರಿಸ್ಥಿತಿ ಯಾವ ಕ್ಷಣದಲ್ಲಿ ಗಂಭೀರ ಸ್ವರೂಪಕ್ಕೆ ಹೋಗಬಹುದೆಂಬುದನ್ನು ಜಿಲ್ಲಾಡಳಿತವೂ ಊಹಿಸಲಾಗುತ್ತಿಲ್ಲ. ಗ್ರಾಮದ ಜನರಲ್ಲಿ ಹನುಮ ಧ್ವಜದ ಪರವಾಗಿರುವ ಒಗ್ಗಟ್ಟಿನಿಂದ ಅಧಿಕಾರಿಗಳು ಯಾವುದೇ ತೀರ್ಮಾನಕ್ಕೆ ಬರಲಾಗುತ್ತಿಲ್ಲವೆಂದು ಹೇಳಲಾಗುತ್ತಿದೆ. ಜೊತೆಗೆ ಕಾನೂನನ್ನು ಮೀರಿ ತೀರ್ಮಾನ ತೆಗೆದುಕೊಳ್ಳುವುದಕ್ಕೂ ಅವರಿಂದ ಸಾಧ್ಯವಾಗದಿರುವುದರಿಂದ ಯಥಾಸ್ಥಿತಿಯನ್ನು ಮುಂದುವರೆಸಿದ್ದಾರೆ. ಪರಿಸ್ಥಿತಿಯನ್ನು ಇನ್ನಷ್ಟು ದಿನಗಳವರೆಗೆ ಕಾದುನೋಡಲು ನಿರ್ಧರಿಸಿರುವಂತೆ ಕಂಡುಬರುತ್ತಿದ್ದಾರೆ.ಗ್ರಾಮಸ್ಥರ ಒಗ್ಗಟ್ಟು: ಜಿಲ್ಲಾಡಳಿತ ಅಸಹಾಯಕಶ್ರೀಆಂಜನೇಯಸ್ವಾಮಿ ಧ್ವಜದ ಪರವಾಗಿಯೇ ಗ್ರಾಮಸ್ಥರು ಒಗ್ಗಟ್ಟು ಪ್ರದರ್ಶಿಸುತ್ತಿರುವುದರಿಂದ ಶಾಂತಿ ಸಭೆಗೆ ತೆರಳಿದ ಜಿಲ್ಲಾಡಳಿತ ಊರಿನ ಜನರ ನಿರ್ಧಾರಕ್ಕೆ ಬದ್ಧವಾಗಿರುವುದಕ್ಕೆ ಅಸಹಾಯಕವಾಗಿದೆ.ಊರಿನಲ್ಲಿ ಒಂಬತ್ತು ದಿನಗಳಿಂದ ನಿಷೇಧಾಜ್ಞೆ ಜಾರಿಯಲ್ಲಿದೆ. ಧ್ವಜಸ್ತಂಭದ ಸುತ್ತಲೂ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪೊಲೀಸ್ ಕಾವಲು ಹಾಕಲಾಗಿದೆ. ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಹಾರಾಡುತ್ತಿದೆ. ನಿಷೇಧಾಜ್ಞೆ ನಡುವೆಯೂ ಊರಿನ ಜನರು ನಿರಾಳವಾಗಿ ಓಡಾಡಿಕೊಂಡಿದ್ದಾರೆ. ನಿಷೇಧಾಜ್ಞೆ ಜಾರಿಯಾದಂದಿನಿಂದ ಒಂದೇ ಒಂದು ಸಣ್ಣ ಗಲಾಟೆಯೂ ಗ್ರಾಮದಲ್ಲಿ ನಡೆದಿಲ್ಲ. ಪರಿಸ್ಥಿತಿ ಸಂಪೂರ್ಣವಾಗಿ ಶಾಂತಿಯುತವಾಗಿದೆ. ಆದರೆ, ಧ್ವಜಸ್ತಂಭದಲ್ಲಿ ಹಾರಾಡಬೇಕಾದ ಹನುಮಧ್ವಜದ ವಿಚಾರದಲ್ಲಿ ಮಾತ್ರ ಗ್ರಾಮದ ಜನರ ನಿಲುವು ಬದಲಾಗುತ್ತಿಲ್ಲ. ಇದು ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ.ಗ್ರಾಮಸ್ಥರ ಮನವೊಲಿಸಲು ಜಿಲ್ಲಾಧಿಕಾರಿ, ಜಿಪಂ ಸಿಇಒ, ಜಿಲ್ಲಾ ಪೊಲೀಸ್ ಅಧೀಕ್ಷಕರು ನಡೆಸಿರುವ ಕಸರತ್ತುಗಳೆಲ್ಲವೂ ವಿಫಲವಾಗುತ್ತಿವೆ. ಈ ವಿವಾದವನ್ನು ಬಗೆಹರಿಸುವ ಮಾರ್ಗವೇ ಅಧಿಕಾರಿಗಳಿಗೆ ತಿಳಿಯದಂತಾಗಿದೆ. ಇನ್ನುಳಿದಂತೆ ಜನಪ್ರತಿನಿಧಿಗಳು ಕೆರಗೋಡಿಗೆ ಹೋಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.