ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಮಹೋತ್ಸವದ ಸಂಭ್ರಮದ ನಡುವೆಯೇ ಉಡುಪಿಯಲ್ಲಿ ಕೇರಳದ ಓಣಂ ಹಬ್ಬದ ವೈಭವವೂ ಕಳೆಗಟ್ಟಿತು. ಕೇರಳ ಸಮಾಜಂ ಉಡುಪಿ ವತಿಯಿಂದ ಅಂಬಾಗಿಲಿನ ಅಮೃತ್ ಗಾರ್ಡನಿನಲ್ಲಿ ಆಯೋಜಿಸಿದ್ದ 2ನೇ ವರ್ಷದ ಓಣಂ ಸಂಭ್ರಮಾಚರಣೆ ಸಾಂಸ್ಕೃತಿಕ ವೈವಿಧ್ಯ, ಸಂಗೀತ, ನೃತ್ಯ, ಕ್ರೀಡೆ ಹಾಗೂ ಆಹಾರ ಪದ್ಧತಿಗಳ ಮೂಲಕ ಕರಾವಳಿಗರ ಮನಸೆಳೆಯಿತು.

ಉಡುಪಿ : ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಮಹೋತ್ಸವದ ಸಂಭ್ರಮದ ನಡುವೆಯೇ ಉಡುಪಿಯಲ್ಲಿ ಕೇರಳದ ಓಣಂ ಹಬ್ಬದ ವೈಭವವೂ ಕಳೆಗಟ್ಟಿತು. ಕೇರಳ ಸಮಾಜಂ ಉಡುಪಿ ವತಿಯಿಂದ ಅಂಬಾಗಿಲಿನ ಅಮೃತ್ ಗಾರ್ಡನಿನಲ್ಲಿ ಆಯೋಜಿಸಿದ್ದ 2ನೇ ವರ್ಷದ ಓಣಂ ಸಂಭ್ರಮಾಚರಣೆ ಸಾಂಸ್ಕೃತಿಕ ವೈವಿಧ್ಯ, ಸಂಗೀತ, ನೃತ್ಯ, ಕ್ರೀಡೆ ಹಾಗೂ ಆಹಾರ ಪದ್ಧತಿಗಳ ಮೂಲಕ ಕರಾವಳಿಗರ ಮನಸೆಳೆಯಿತು.ಮಲಯಾಳಂ ಚಿತ್ರರಂಗದ ನಟಿ ನೀನಾ ಕುರುಪ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಓಣಂ ಕೇರಳದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಕೇರಳದಾದ್ಯಂತ ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕೇರಳದ ಹೊರಭಾಗದಲ್ಲಿಯೂ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಓಣಂ ಸಂಭ್ರಮಾಚರಣೆ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕೇರಳ ಸಮಾಜಂ ಉಡುಪಿ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಸಂಘಟನೆ ಆರಂಭವಾಗಿ ಕೆಲವೇ ವರ್ಷಗಳಾಗಿದ್ದರೂ ಮೊದಲ ವರ್ಷದ ಓಣಂ ಆಚರಣೆಗೆ ಅಭೂತಪೂರ್ವ ಬೆಂಬಲ ದೊರಕಿತ್ತು. ಇದೀಗ ಎರಡನೇ ವರ್ಷದ ಕಾರ್ಯಕ್ರಮಕ್ಕೂ ನಿರೀಕ್ಷೆಗೂ ಮೀರಿ ಕೇರಳ ಸಮಾಜಂ ಸದಸ್ಯರು ಹಾಗೂ ಉಡುಪಿ ಜಿಲ್ಲೆಯ ಜನತೆ ಭಾಗವಹಿಸಿ ಯಶಸ್ವಿಗೊಳಿಸಿರುವುದು ಸಂಘಟನೆಗೆ ಮತ್ತಷ್ಟು ಬಲ ನೀಡಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಕೇರಳದ ಅತಿ ಕಿರಿಯ ವಯಸ್ಸಿನ ಬಾಲ ಗಾಯಕಿ ರಾನಿಯಾ ರಫೀಕ್ ಅವರ ಸುಮಧುರ ಗಾಯನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.

ಕೇರಳದ ಸಾಂಪ್ರದಾಯಿಕ ನೃತ್ಯ ಪ್ರಕಾರಗಳಾದ ತಿರುವಾದಿರ ಮತ್ತು ಮೊಹಿಣಿಯಾಟ್ಟಂ ಪ್ರದರ್ಶನಗಳು ಪ್ರೇಕ್ಷಕರ ಗಮನ ಸೆಳೆದವು. ಇದರೊಂದಿಗೆ ಯುವ ಪೀಳಿಗೆಯ ಫ್ಯಾಷನ್ ಶೋ ಕಾರ್ಯಕ್ರಮದ ಮೆರಗನ್ನು ಮತ್ತಷ್ಟು ಹೆಚ್ಚಿಸಿತು.

ಮಡಿಕೆ ಒಡೆಯುವ ಸ್ಪರ್ಧೆ, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಹೊರಾಂಗಣ ಕ್ರೀಡೆಗಳಲ್ಲೂ ಸಮಾಜ ಬಾಂಧವರು ಹಾಗೂ ಯುವಜನರು ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.

ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದ ಟ್ರಸ್ಟಿ ಅಭಿಲಾಶ್ ಪಿ.ವಿ., ಬಾಲಕಲಾವಿದೆ ರಾನಿಯಾ ರಫೀಕ್, ಕೇರಳ ಸಮಾಜಂ ಕಾರ್ಯದರ್ಶಿ ಪ್ರಶಾಂತ್ ಕುಮಾರ್, ಬಿನ್ಸಿ ಎಂ. ಜಾರ್ಜ್ ಉಪಸ್ಥಿತರಿದ್ದರು.