ಸಾರಾಂಶ
ಮೂಲಸೌಲಭ್ಯಗಳಿಲ್ಲದೆ ಸೊರಗುತ್ತಿರುವ ಕೇರಳಾಪುರ ಕೆಎಸ್‌ಆರ್‌ಟಿ ಬಸ್ ತಂಗುದಾಣ । ಅನೇಕ ಊರುಗಳಿಗೆ ತಾಣದಿಂದ ಸಂಪರ್ಕ
ಶೇಖರ್ ಯಲಗತವಳ್ಳಿಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನ ಕೇರಳಾಪುರ ಕೆಎಸ್‌ಆರ್‌ಟಿ ಬಸ್ ನಿಲ್ದಾಣ ಉದ್ಘಾಟನೆಯಾಗಿ 6 ವರ್ಷ ಕಳೆದರೂ ಮೂಲ ಸೌಲಭ್ಯಗಳನ್ನು ಹೊಂದದೆ ಅಭಿವೃದ್ಧಿಯಿಂದ ಸಂಪೂರ್ಣ ವಂಚಿತಗೊಂಡಿದೆ.ವಾಣಿಜ್ಯ ಪಟ್ಟಣವಾಗಿ ಬೆಳವಣಿಗೆ ಕಂಡಿದ್ದ ಕೇರಳಾಪುರ ಮಲ್ಲಿಗೆ ಹೂವು ಮಾರಾಟಕ್ಕೆ ಹಾಗೂ ಹಿಂದು ಮಿಲಿಟರಿ ಹೋಟೆಲ್‌ಗಳಿಗೂ ಎಲ್ಲೆಡೆ ಅಪಾರ ಪ್ರಸಿದ್ಧಿ ಪಡೆದಿದೆ. ಹೊಳೆನರಸೀಪುರ, ಕೆ.ಆರ್.ನಗರ ಮತ್ತು ಪಿರಿಯಾಪಟ್ಟಣ ತಾಲೂಕಿಗೆ ಸಂಪರ್ಕ ಕಲ್ಪಿಸುವ ಸಂಗಮ ಸ್ಥಳವಾಗಿದೆ. ಇಲ್ಲಿ ಬಸ್ ನಿಲ್ದಾಣ ನಿರ್ಮಿಸಬೇಕೆಂಬುದು ಜನರ ಅನೇಕ ವರ್ಷಗಳ ಬೇಡಿಕೆಯಾಗಿತ್ತು. ಗ್ರಾಮದ ಮುಖಂಡರ ಶ್ರಮದ ಫಲವಾಗಿ ಹೊಸ ಬಸ್ ನಿಲ್ದಾಣ ಕೂಡ ತಲೆ ಎತ್ತಿದೆ. ದುರಾದೃಷ್ಟವಶಾತ್ ನಿಲ್ದಾಣ ಉದ್ಘಾಟನೆ ಭಾಗ್ಯ ಕಂಡು ಹಲವಾರು ವರ್ಷಗಳು ಗತಿಸಿದರೂ ಮೂಲ ಸೌಕರ್ಯ ಕಾಣದೆ ಸೊರಗುತ್ತಿದೆ.
ತಾಲೂಕಿನ ಗಡಿ ಭಾಗದಲ್ಲಿರುವ ಕೇರಳಾಪುರದಲ್ಲಿ ಬಸ್ ನಿಲ್ದಾಣ ಇಲ್ಲದೆ ಹಲವು ದಶಕಗಳ ಕಾಲ ಜನರು ಅನುಭವಿಸುತ್ತಿದ್ದ ಗೋಳು ಅಷ್ಟಿಷ್ಟಲ್ಲ. ಊರಿನ ಹೃದಯ ಭಾಗದಲ್ಲಿದ್ದ ಅರಳಿಕಟ್ಟೆ ಸರ್ಕಲ್‌ನಲ್ಲೇ ಪ್ರಯಾಣಿಕರು ಬಸ್‌ಗಾಗಿ ಗಂಟೆಗಟ್ಟಲೆ ಕಾಯುತ್ತಿದ್ದರು. ನಿಲ್ಲಲು ನೆರಳು, ಶೌಚಗೃಹ ಸಹ ಇಲ್ಲದೆ ಮಹಿಳೆಯರಂತೂ ಪರದಾಡುವಂತಾಗಿತ್ತು. ಹೊಳೆನರಸೀಪುರ, ಮೈಸೂರು, ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ, ಬೆಟ್ಟದಪುರ ಕಡೆಗೆ ತೆರಳುವ ಏಳೆಂಟು ಬಸ್‌ಗಳು ರಾತ್ರಿ ವೇಳೆ ಅರಳಿಕಟ್ಟೆ ಸರ್ಕಲ್‌ನಲ್ಲೇ ನಿಲುಗಡೆಯಾಗುತ್ತಿದ್ದವು. ಚಾಲಕರು, ನಿರ್ವಾಹಕರು ಸೊಳ್ಳೆಗಳ ಕಾಟ ಎದುರಿಸಿ ಅದೆಷ್ಟೋ ಸಲ ಬಸ್‌ನೊಳಗೆ ನಿದ್ರಿಸುತ್ತಿದ್ದರು.2015ರ ಮೇ ತಿಂಗಳಲ್ಲಿ ಅಂದಿನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬಸ್ ನಿಲ್ದಾಣ ಸ್ಥಾಪನೆಗೆ ಶಂಕುಸ್ಥಾಪನೆ ಮಾಡಿದ್ದರು. ಬಳಿಕ ನಿಲ್ದಾಣ ಸ್ಥಾಪನೆಗೆ ಇದ್ದ ಜಾಗದ ಅಡೆತಡೆಗಳನ್ನು ಎದುರಿಸಿ ಶಾಸಕ ಎ. ಮಂಜು ಗ್ರಾಮಸ್ಥರ ಮನವಿ ಮೇರೆಗೆ ಹೊಸ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲಾಯಿತು. 2018ರ ಮಾರ್ಚ್‌ನಲ್ಲಿ ಅಂದಿನ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಬಸ್ ನಿಲ್ದಾಣದ ಉದ್ಘಾಟನೆ ನೆರವೇರಿಸಿದರು. ಆದರೆ ಉದ್ಘಾಟನೆಯಾಗಿ 6 ವರ್ಷ ಕಳೆದರೂ ನಿಲ್ದಾಣಕ್ಕೆ ಆಗಬೇಕಾದ ಅಭಿವೃದ್ಧಿ ಕಾರ್ಯಗಳು ಇಂದಿಗೂ ಮರೀಚಿಕೆಯಾಗೇ ಉಳಿದಿವೆ.
ಬಸ್ ನಿಲ್ದಾಣ ಪ್ರವೇಶಿಸಿದೊಡನೆ ಮಳೆಗಾಲದಲ್ಲಿ ಕೆಸರು ಹಾಗೂ ಬೇಸಿಗೆಯಲ್ಲಿ ಧೂಳಿನ ಅಭಿಷೇಕವಾಗುತ್ತದೆ. ಬಸ್‌ಗಳ ನಿಲುಗಡೆ ಪಾರ್ಕಿಂಗ್ ಆವರಣಕ್ಕೆ ಸಿಮೆಂಟ್ ಕಾಂಕ್ರಿಟ್ ಕೂಡ ಹಾಕಿಲ್ಲ. ನಿಲ್ದಣ ಸುತ್ತಲೂ ಕಾಂಪೌಂಡ್ ವ್ಯವಸ್ಥೆ ಆಗಿಲ್ಲ. ಮಳೆಗಾಲದಲ್ಲಿ ನಿಲ್ದಾಣಕ್ಕೆ ಬಸ್ ಹತ್ತಲು ಬರುವ ಪ್ರಯಾಣಿಕರು ಕೆಸರು ಮಣ್ಣು ತುಳಿದು ಸಾಗಬೇಕು. ಬೇಸಿಗೆ ಸಮಯದಲ್ಲಿ ಧೂಳು ನಿಲ್ದಾಣವನ್ನು ಆವರಿಸುತ್ತದೆ.ಕೇರಳಾಪುರ ಬಸ್ ನಿಲ್ದಾಣ ಮುಂಭಾಗ ಮಾಗಡಿ- ಸೋಮವಾರಪೇಟೆ ಮಾರ್ಗದ ರಸ್ತೆ ಹಾದು ಹೋಗಿದೆ. ಕೇರಳಾಪುರ ಬಸ್ ನಿಲ್ದಾಣ ಮುಂಭಾಗ ಹಾದು ಹೋಗಿರುವ ರಸ್ತೆಗೆ ವಿಭಜಕ ಅಳವಡಿಸಿ ಚತುಷ್ಪತವಾಗಿ ಅಭಿವೃದ್ಧಿ ಪಡಿಸದೆ ವಿಸ್ತೀರ್ಣ ಕಡಿತಗೊಳಿಸಲಾಗಿದೆ.
ಕೇರಳಾಪುರದಲ್ಲಿ ಗ್ರಾಮಸ್ಥರು, ಶಾಸಕರ ಶ್ರಮದಿಂದಾಗಿ ಬಸ್ ನಿಲ್ದಾಣ ಸ್ಥಾಪಿಸಲಾಗಿದೆ. ಆದರೆ ನಿಲ್ದಾಣಕ್ಕೆ ಆಗಬೇಕಾದ ಸೌಲಭ್ಯಗಳು ಇಂದಿಗೂ ದಕ್ಕಿಲ್ಲ. ಸಂಬಂಧಪಟ್ಟ ಮೇಲಾಧಿಕಾರಿಗಳು ಇತ್ತ ಗಮನ ಹರಿಸಿ ನಿಲ್ದಾಣ ಅಭಿವೃದ್ಧಿ ಪಡಿಸಿ ಪ್ರಯಾಣಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು.ಡಿ. ಬಾಲಮುರುಳಿ, ಗ್ರಾಮಸ್ಥ.
ಅರಕಲಗೂಡಿನ ಕೇರಳಾಪುರ ಬಸ್ ನಿಲ್ದಾಣಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿ ಪಡಿಸುವ ಸಂಬಂಧ ಚುನಾವಣೆ ಕಳೆದ ಬಳಿಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.ದೀಪಕ್ ಕುಮಾರ್, ಕೆಎಸ್‌ಆರ್‌ಟಿಸಿ ವಿಭಾಗ ನಿಯಂತ್ರಣಾಧಿಕಾರಿ, ಹಾಸನ.