ನಾಯಕನಹಟ್ಟಿಯಲ್ಲಿ ಕೆರೆ ಗಂಗಮ್ಮ ಆಚರಣೆ

| Published : Aug 30 2024, 01:03 AM IST

ಸಾರಾಂಶ

ಹಿರೇಕೆರೆಯಲ್ಲಿ ಗುರುವಾರ ಊರಿನ ಹಿರಿಯರು ಸಾಂಪ್ರದಾಯಿಕ ಕೆರೆಗಂಗಮ್ಮ ಉತ್ಸವ ಆಚರಿಸಿದರು. ಕೆರೆ ಗಂಗಮ್ಮ ಉತ್ಸವ ಕೃಷಿ ಪ್ರಧಾನ ಆಚರಣೆ ಆಗಿದ್ದು, ಹಿರೇಕರೆ ಏರಿ ಮಧ್ಯದಲ್ಲಿ ಜೋಡಿ ವಿಗ್ರಹಗಳಿಗೆ ಕೆರೆಯ ನೀರಿನಿಂದ 108 ಕೊಡಗಳಿಂದ ಅಭಿಷೇಕ ಮಾಡಲಾಗುತ್ತದೆ.

ಕನ್ನಡ ಪ್ರಭ ವಾರ್ತೆ ನಾಯಕನಹಟ್ಟಿಹಿರೇಕೆರೆಯಲ್ಲಿ ಗುರುವಾರ ಊರಿನ ಹಿರಿಯರು ಸಾಂಪ್ರದಾಯಿಕ ಕೆರೆಗಂಗಮ್ಮ ಉತ್ಸವ ಆಚರಿಸಿದರು. ಕೆರೆ ಗಂಗಮ್ಮ ಉತ್ಸವ ಕೃಷಿ ಪ್ರಧಾನ ಆಚರಣೆ ಆಗಿದ್ದು, ಹಿರೇಕರೆ ಏರಿ ಮಧ್ಯದಲ್ಲಿ ಜೋಡಿ ವಿಗ್ರಹಗಳಿಗೆ ಕೆರೆಯ ನೀರಿನಿಂದ 108 ಕೊಡಗಳಿಂದ ಅಭಿಷೇಕ ಮಾಡಲಾಗುತ್ತದೆ.

ಉತ್ತರ ಹಾಗೂ ದಕ್ಷಿಣ ದಿಕ್ಕಿನಲ್ಲಿ ಇರುವ ಕೆರೆಯ ಕೋಡಿ ಸ್ಥಳದಲ್ಲಿ ಎಡೆ ಇಟ್ಟು ವಿಶೇಷ ಪೂಜೆ ನಡೆಸುವ ಧಾರ್ಮಿಕ ಉತ್ಸವ ಆಗಿದೆ. ಹಿರೇಕೆರೆಯಲ್ಲಿ ನೀರು ಸಂಗ್ರಹಗೊಂಡರೆ ಈ ಉತ್ಸವಕ್ಕೆ ಮೆರುಗು ಕೂಡ ಹೆಚ್ಚುತ್ತದೆ. ಒಂದು ದಶಕ ಕಾಲ ಹಿರೇಕೆರೆ ನೀರಿಲ್ಲದೇ ಬರಡಾಗಿತ್ತು. ಆಗೆಲ್ಲಾ ಹಟ್ಟಿ ಜನರಿಗೆ ಕೆರೆಗಂಗಮ್ಮ ಉತ್ಸವ ಅಷ್ಟಾಗಿ ಸಂಭ್ರಮ ನೀಡಿರಲಿಲ್ಲ. ಆದರೆ, ಈ ಸಲದ ಕೆರೆಗಂಗಮ್ಮ ಆಚರಣೆ ಸಂದರ್ಭದಲ್ಲಿ ಹಿರೇಕೆರೆಯಲ್ಲಿ 8 ಅಡಿಯಷ್ಟು ನೀರಿನ ಸಂಗ್ರಹ ಇರುವುದು ಜನರ ಸಂಭ್ರಮವನ್ನು ಇಮ್ಮಡಿಸಿದೆ.

ಗುರುವಾರ ಶ್ರೀಗುರು ತಿಪ್ಪೇರುದ್ರಸ್ವಾಮಿ ಒಳಮಠದಿಂದ ಮಠದ ಗೂಳಿಯನ್ನು (ಬಸವಣ್ಣ) ಪಟ್ಟಪೀತಾಂಬರದಿಂದ ಅಲಂಕರಿಸಲಾಗಿತ್ತು. ಬಸವಣ್ಣನ ಜತೆಗೆ ಕುಂಭಹೊತ್ತ ಮಹಿಳೆಯರು, ಊರ ಜನರು ಹಟ್ಟಿಯಿಂದ 6ಕಿ.ಮೀ. ದೂರದ ಹಿರೇಕೆರೆಯತ್ತ ಹೆಜ್ಜೆಹಾಕಿದರು. ಡೋಲು-ಡಮರುಗ, ಶಹನಾಯಿ, ನಂದಿಕೋಲು ಸಹಿತ ಹಟ್ಟಿ ಜನರು ಹಿರೆಕೆರೆಯಲ್ಲಿ ವಿವಿಧ ಧಾರ್ಮಿಕ ಕೈಂಕರ್ಯ ನಡೆಸಿದರು. ನಂತರ ಜನರಿಗೆ ಅನ್ನಪ್ರಸಾದ ವಿತರಣೆ ಮಾಡಲಾಯಿತು. ವ್ಯಾಪ್ತಿಯಲ್ಲಿ ಸಮೃದ್ಧ ಮಳೆ, ಬೆಳೆ ಆಗಲೆಂದು ಹಟ್ಟಿ ಜನರು ದೇವರಲ್ಲಿ ಪ್ರಾರ್ಥಿಸಿಕೊಂಡರು.ಹಿರಿಯ ಮುಖಂಡ ಕಾವಲಪ್ಪರ ತಿಪ್ಪೇರುದ್ರಪ್ಪ ಮಾತನಾಡಿ, ಶ್ರಾವಣ ಮಾಸದಲ್ಲಿ ಕೆರೆಗಂಗಮ್ಮ ಉತ್ಸವವನ್ನು ನಮ್ಮ ಪೂರ್ವಜನರು ನಡೆಸಿಕೊಂಡು ಬಂದಿದ್ದಾರೆ. ಅವರ ಹಾದಿಯಲ್ಲಿ ಈಗಿನ ಹಟ್ಟಿ ಜನರು ಕೆರೆ ಉತ್ಸವ ಹಮ್ಮಿಕೊಂಡು ಆಚರಿಸುತ್ತಿದ್ದಾರೆ. ಬಸವಮೂರ್ತಿಗಳ ಜತೆಗೆ ಕೆರೆಪೂಜೆ ಇಲ್ಲಿ ಪ್ರಧಾನ ಆಗಿರುತ್ತದೆ ಎಂದರು.ಪಪಂ ಸದಸ್ಯ ಜಿ.ಆರ್. ರವಿಕುಮಾರ್, ರುದ್ರೇಶ್ ಗೌಡ್ರು, ಕೆ.ಟಿ.ಸ್ವಾಮಿ, ಗಿರಿಯಪ್ಪ, ಉಮೇಶ್, ಅಂಬರೀಶ್, ಮಹದೇವಿ ಬಸ್ ಮಾಲೀಕ ರಾಜಣ್ಣ, ವಿಜಯ್ ಕುಮಾರ್, ಮಹಾಂತಣ್ಣ ಹಾಜರಿದ್ದರು.