ಶ್ರೀ ರಾಮ ಮಂದಿರ ಕೆಸರ್ ಗದ್ದೆ ಇಲ್ಲಿ ಹದಿನಾಲ್ಕನೇ ವರ್ಷದ ಜಿಎಸ್‌ಬಿ ಸ್ಪರ್ಧಾ ಕಾರ್ಯಕ್ರಮ, ಸಾಧಕರಿಗೆ ಸಮ್ಮಾನ, ಪ್ರತಿಭಾ ಪುರಸ್ಕಾರ ಸಂಭ್ರಮ
ಮೂಡುಬಿದಿರೆ: ಶ್ರೀ ರಾಮ ಮಂದಿರ ಕೆಸರ್ ಗದ್ದೆ ಇಲ್ಲಿ ಹದಿನಾಲ್ಕನೇ ವರ್ಷದ ಜಿಎಸ್‌ಬಿ ಸ್ಪರ್ಧಾ ಕಾರ್ಯಕ್ರಮ, ಸಾಧಕರಿಗೆ ಸಮ್ಮಾನ, ಪ್ರತಿಭಾ ಪುರಸ್ಕಾರ ಸಂಭ್ರಮ ಇಲ್ಲಿನ ಸುನಂದಾ ಮಾಧವ ಪ್ರಭು ಸಭಾಂಗಣದಲ್ಲಿ ಜರುಗಿತು. ಸಮಾರೋಪ ಸಮಾರಂಭದಲ್ಲಿ ಕಳೆದ ಮೂರೂವರೆ ದಶಕಗಳಿಂದ ಪುತ್ತಿಗೆ ಶ್ರೀ ಸೋಮನಾಥೇಶ್ವರ ಚಿಕ್ಕ ಮೇಳದ ಭಾಗವತ ರಾಗಿ ಸಂಚಾಲಕರಾಗಿಯೂ ಸೇವೆ ಸಲ್ಲಿಸಿರುವ ಯಕ್ಷ ರಂಗದ ಸಂಪಿಗೆ ಸುರೇಂದ್ರ ಪೈ ಪುತ್ತಿಗೆ ಅವರನ್ನು ಸಮ್ಮಾನಿಸಲಾಯಿತು.
ಸಮ್ಮಾನಕ್ಕೆ ಪ್ರತಿಯಾಗಿ ಭಾಗವತಿಕೆಯ ಕಂಠ ಸಿರಿಯೊಂದಿಗೆ ಪೈಯವರು ಯಕ್ಷಗಾನದ ಹಾಡೊಂದನ್ನು ಪ್ರಸ್ತುತಪಡಿಸುವ ಮೂಲಕ ಕೃತಜ್ಞತೆ ಸಲ್ಲಿಸಿದರು. ಸ್ಥಳೀಯ ಶ್ರೀ ರಾಮ ಭಜನಾ ಭಜನಾ ಮಂಡಳಿಯ ಪ್ರಮುಖ ಸದಸ್ಯರು, ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳನ್ನು ಇದೇ ವೇಳೆ ಗೌರವಿಸಲಾಯಿತು. ಸ್ಪರ್ಧಾ ಸಂಭ್ರಮ: ಜಿ.ಎಸ್.ಬಿ. ಸಮಾಜ ಬಾಂಧವರಿಗಾಗಿ ಜರಗಿದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಕಿರಿಯರಿಂದ ಹಿರಿಯರವರೆಗೆ ಸ್ಪರ್ಧಿಗಳು ಪಾಲ್ಗೊಂಡು ಸಂಭ್ರಮಿಸಿದರು. ಭಗವದ್ಗೀತಾ-ರಾಮರಕ್ಷಾ-ಹನುಮಾನ್ ಚಾಲೀಸಾ-ವಿಷ್ಣು ಸಹಸ್ರನಾಮ ಹೀಗೆ ಅನೇಕ ದೇವತಾ ಸ್ತೋತ್ರಗಳ ಕಂಠಪಾಠ ಸ್ಪರ್ಧೆ, ಭಕ್ತಿಗೀತಾ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಹಾಗೂ ಅನೇಕ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ಸ್ಪರ್ಧಾ ಕಾರ್ಯಕ್ರಮದಲ್ಲಿ ವಿಶೇಷ ಸಾಧನೆ ಮಾಡಿದ ಲಾವಣ್ಯ ಕಾಮತ್ ಮೂಡುಬಿದಿರೆ ( 1 ರಿಂದ 5 ನೇ ತರಗತಿ ವಿಭಾಗ) ರಚನಾ ಪೈ ಕಾರ್ಕಳ ( 6 ರಿಂದ 10 ನೇ ತರಗತಿ ವಿಭಾಗ) ಎಂ. ಸುಧೀಂದ್ರ ಕಾಮತ್ ಮೂಡುಬಿದಿರೆ ( ಕಾಲೇಜು ಮತ್ತು ಸಮಾಜ ಬಾಂಧವರ ವಿಭಾಗ ) ಅವರನ್ನು ವೈಯಕ್ತಿಕ ಸಾಧನೆ ಪ್ರಶಸ್ತಿಯೊಂದಿಗೆ ಪುರಸ್ಕರಿಸಲಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕೆಸರಗದ್ದೆ ಶ್ರೀ ರಾಮ ಮಂದಿರದ ವಿಶ್ವನಾಥ ಮಾಧವ ಪ್ರಭು ಮಂಗಳೂರು, ವಿದ್ವಾನ್ ಹರಿಪ್ರಸಾದ್ ಶರ್ಮ, ಸಾಣೂರು ನರಸಿಂಹ ಕಾಮತ್, ಮಿತ್ತಬೈಲ್ ಶಶಿಧರ್ ನಾಯಕ್ , ಭಜನಾ ಮಂಡಳಿ ಅಧ್ಯಕ್ಷ ರಾಜೇಶ್ ಕಾಮತ್, ಮೂಡುಬಿದಿರೆ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಮೊಕ್ತೇಸರರಾದ ದಯಾನಂದ ಪೈ, ಟಿ. ರಘುವೀರ ಶೆಣೈ, ಮನೋಜ್ ಶೆಣೈ, ಅಶೋಕ್ ಮಲ್ಯ, ಪಾಂಡುರಂಗಪೈ, ಹಾಗೂ ಮಿತ್ತಬೈಲ್ ರಾಮ ಮಂದಿರದ ಶಶಿಧರ್ ನಾಯಕ್ ಉಪಸ್ಥಿತರಿದ್ದರು.ವಿವಿಧ ಹಂತಗಳಲ್ಲಿ ನಡೆದ ಗೌರವಾರ್ಪಣೆಯಲ್ಲಿ ದಾನಿಗಳು, ಪ್ರಾಯೋಜಕರು ಪಾಲ್ಗೊಂಡಿದ್ದರು. ಕಾರ್ಯಕ್ರಮ ಸಂಯೋಜಕ ಕೆ. ಸುಧೇಶ್ ಭಟ್ ಕಾರ್ಯಕ್ರಮದ ಸವಿವರ ನೀಡಿದರು. ಕೆ. ದಯಾನಂದ ಭಟ್ ಸ್ವಾಗತಿಸಿದರು. ಸುವರ್ಣಿ ಪೈ ಹಾಗು ನಿರ್ಮಲಾ ಕಾಮತ್ ಸನ್ಮಾನ ಪತ್ರ ವಾಚನ ವಾಚಿಸಿದರು.