ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯನಾಗಮಂಗಲ ತಾಲೂಕು ಕಸಬಾ ಹೋಬಳಿ ಸರ್ವೇ ನಂ.೧೬೮ರಲ್ಲಿ ೧೯೮.೦೩ ಎಕರೆ ಡೀಮ್ಡ್ ಅರಣ್ಯ ಪ್ರದೇಶವಿದ್ದು, ಇದರಲ್ಲಿ ೧೫.೩೪ ಎಕರೆ ಪ್ರದೇಶದಲ್ಲಿ ಖಬರಸ್ಥಾನ್ ಸುನ್ನಿ ಕಟ್ಟಡಗಳಿರುವುದು ಕಂಡುಬಂದಿದೆ. ೧೧೭.೦೬ ಎಕರೆ ಪ್ರದೇಶವನ್ನು ವಿವಿಧ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಜಾಗವನ್ನು ಅರಣ್ಯ ಇಲಾಖೆ ಮರುವಶಕ್ಕೆ ಪಡೆಯಬಹುದೆಂದು ಜಿಲ್ಲಾಧಿಕಾರಿ ಆದೇಶವಿದ್ದರೂ ಇದುವರೆಗೂ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗದಿರುವುದು ಹಲವು ಅನುಮಾನಗಳು ಮೂಡುವಂತೆ ಮಾಡಿದೆ.
೨೦೧೬ರಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ನಾಗಮಂಗಲ ತಾಲೂಕು ವ್ಯಾಪ್ತಿಯ ಡೀಮ್ಡ್ ಫಾರೆಸ್ಟ್ ಸಂಚಲನಾ ಸಮಿತಿ ಸಭೆಯಲ್ಲಿ ಡೀಮ್ಡ್ ಅರಣ್ಯ ಜಾಗವನ್ನು ಗುರುತಿಸಿ ೧೧೯ ಎಕರೆ ಜಮೀನನ್ನು ಅರಣ್ಯ ಇಲಾಖೆಯಲ್ಲೇ ಮುಂದುವರೆಸಬಹುದು ಎಂದು ಆದೇಶಿಸಿದ್ದರೂ ಆ ಜಾಗದಿಂದ ಕಟ್ಟಡಗಳು ತೆರವಾಗಿಲ್ಲ. ಈ ಸಭೆಯಲ್ಲಿ ಆದ ನಿರ್ಣಯಕ್ಕೆ ಜಿಲ್ಲಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ವಲಯ ಅರಣ್ಯಾಧಿಕಾರಿ, ಜಿಲ್ಲಾಧಿಕಾರಿ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂ ದಾಖಲೆಗಳ ಉಪ ನಿರ್ದೇಶಕರು, ತಹಸೀಲ್ದಾರ್, ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಷರಾ ಬರೆದು ಸಹಿ ಹಾಕಿದ್ದರೂ ಆ ಜಾಗವನ್ನು ಅರಣ್ಯ ಇಲಾಖೆ ತನ್ನ ವಶಕ್ಕೆ ಪಡೆಯದಿರುವುದು ದಾಖಲೆಗಳಿಂದ ತಿಳಿದುಬಂದಿದೆ.೪ ಮಾರ್ಚ್ ೧೯೮೨ರಲ್ಲಿ ವಿಶೇಷ ಜಿಲ್ಲಾಧಿಕಾರಿಗಳು ಹೊರಡಿಸಿರುವ ಅಧಿಸೂಚನೆ ಆದೇಶದಲ್ಲಿ ನಾಗಮಂಗಲ ತಾಲೂಕು ಕಸಬಾ ಹೋಬಳಿ ನಾಗಮಂಗಲ ಸರ್ವೇ ನಂ.೧೬೮ರಲ್ಲಿ ಡೀಮ್ಡ್ ಮೀಸಲು ಅರಣ್ಯಕ್ಕೆ ೧೯೮.೦೩ ಎಕರೆ ಪ್ರದೇಶ ನೀಡಲಾಗಿದೆ. ಆಕಾರ್‌ಬಂದ್‌ನಂತೆ ೧೯೮.೦೪ ಎಕರೆ ವಿಸ್ತೀರ್ಣವಿದ್ದು, ಅರಣ್ಯ ಇಲಾಖೆಗೆ ೩೪ ಎಕರೆ ಆರ್‌ಟಿಸಿ ಇಂಡೀಕರಣವಾಗಿದೆ.
ಭೌತಿಕವಾಗಿ ೧೨೨ ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆಯವರು ಅನುಭವದಲ್ಲಿದ್ದಾರೆ. ಆದರೆ, ಅರಣ್ಯಪ್ರದೇಶದ ಆರ್‌ಟಿಸಿಯಲ್ಲಿರುವುದು ಕೇವಲ ೩೪ ಎಕರೆ ಮಾತ್ರವಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳೇ ಹೇಳುತ್ತಿದ್ದಾರೆ.ಸರ್ವೇ ನಂ.೧೬೮ರ ೧೫.೩೪ ಎಕರೆ ವಿಸ್ತೀರ್ಣದಲ್ಲಿ ನಾಗಮಂಗಲ ಖಬರ್‌ಸ್ಥಾನ ಸುನ್ನಿ (ದರ್ಗಾ ಹಜರತ್) ಕಟ್ಟಡಗಳು ಇವೆ. ಅಲ್ಲದೆ ಇದೇ ಸರ್ವೇ ನಂಬರ್‌ನ ೧೧೭.೦೬ ಎಕರೆ ಪ್ರದೇಶ ಕೆಲವು ಖಾಸಗಿ ವ್ಯಕ್ತಿಗಳಿಗೆ ಭೂ ಮಂಜೂರಾತಿಯಾಗಿದೆ. ಮಂಜೂರಾತಿಯ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ತೀರ್ಮಾನ ಕೈಗೊಂಡು ಉಳಿಕೆ ಜಮೀನನ್ನು ಅರಣ್ಯ ಇಲಾಖೆಯಲ್ಲೇ ಮುಂದುವರೆಸಬಹುದು ಎಂದು ನಿರ್ಣಯ ಮಾಡಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಕಂದಾಯ ಇಲಾಖೆಯವರು ಗುರುತಿಸಿಕೊಟ್ಟಿಲ್ಲವೆಂದು ದೂರುತ್ತಿದ್ದಾರೆ.
೧೨೨ ಎಕರೆ ಅರಣ್ಯದಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಹಿಂದೂ ಸ್ಮಶಾನಕ್ಕೆ ೩ ಎಕರೆ ಹೊರತುಪಡಿಸಿ ಉಳಿಕೆ ೧೧೯ ಎಕರೆ ಜಮೀನನ್ನು ಅರಣ್ಯ ಇಲಾಖೆಯಲ್ಲೇ ಮುಂದುವರೆಸುವಂತೆ ನಿರ್ಣಯ ಕೈಗೊಂಡು ಎಂಟು ವರ್ಷಗಳಾಗಿದ್ದರೂ ಯಾವುದೇ ಫಲ ನೀಡಿಲ್ಲ.ಅನುಭವದಲ್ಲಿರುವ ಬಗ್ಗೆ ತಪ್ಪು ಮಾಹಿತಿ..!:
ಸರ್ವೆ ನಂ.೧೬೮ರಲ್ಲಿ ಇರುವುದೇ ೧೯೮.೩ ಎಕರೆ ಪ್ರದೇಶವಾಗಿದೆ. ಅದರಲ್ಲಿ ೧೨೨ ಎಕರೆ ಅನುಭವದಲ್ಲಿದ್ದೇವೆ ಎಂದು ಅರಣ್ಯಾಧಿಕಾರಿಗಳು ಒಂದೆಡೆ ಹೇಳಿದರೆ ೧೧೯ ಎಕರೆ ಪ್ರದೇಶವನ್ನು ಅರಣ್ಯ ಇಲಾಖೆಯಲ್ಲಿ ಮುಂದುವರೆಸುವಂತೆ ಸಮಿತಿ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ. ಇದರ ಜೊತೆಗೆ ಸಾರ್ವಜನಿಕ ಸ್ಮಶಾನಕ್ಕೆ ೩ ಎಕರೆ ನೀಡುವಂತೆಯೂ ತಿಳಿಸಲಾಗಿದೆ. ವಾಸ್ತವದಲ್ಲಿ ಆರ್‌ಟಿಸಿಯಲ್ಲಿರುವಂತೆ ೩೪ ಎಕರೆ ಹೊರತುಪಡಿಸಿ ಉಳಿದ ಡೀಮ್ಡ್ ಫಾರೆಸ್ಟ್ ಪ್ರದೇಶ ಖಬರ್‌ಸ್ಥಾನ ಸುನ್ನಿ (ದರ್ಗಾ ಹಜರತ್) ಕಟ್ಟಡಗಳು ಹಾಗೂ ಖಾಸಗಿ ವ್ಯಕ್ತಿಗಳು ಅನುಭವದಲ್ಲಿರುವುದು ಕಂಡುಬರುತ್ತಿದೆ.‘ಸರ್ವೇ ನಂಬರ್ ೧೬೮ರಲ್ಲಿ ೧೨೨ ಎಕರೆಯಲ್ಲಿ ಅರಣ್ಯ ಪ್ರದೇಶದಲ್ಲಿ ಅನುಭವವಿದ್ದರೂ ೩೪ ಎಕರೆ ಪ್ರದೇಶಕ್ಕಷ್ಟೇ ಆರ್‌ಟಿಸಿ ಬರುತ್ತಿದೆ. ಎಂಟು ವರ್ಷಗಳ ಹಿಂದೆ ಏನು ನಿರ್ಣಯ, ಆದೇಶವಾಗಿದೆಯೋ ಗೊತ್ತಿಲ್ಲ. ದಾಖಲೆಗಳನ್ನು ಪರಿಶೀಲಿಸಿ ಕ್ರಮ ವಹಿಸುತ್ತೇವೆ.’
- ಸಂಪತ್, ವಲಯ ಅರಣ್ಯಾಧಿಕಾರಿ, ನಾಗಮಂಗಲ