ಚಿನ್ನಾಭರಣ ಅಂಗಡಿ ಮಾಲೀಕ ಮಹಾಂತೇಶ ಅರ್ಜುಣಗಿ ಮೇಲೆ ಜ.5ರಂದು ಸಿಂದಗಿ ಹಾಗೂ ಆಲಮೇಲ ಪೊಲೀಸರು ಹಲ್ಲೆ ನಡೆಸಿ, ಬಲವಾಗಿ ಹೊಡೆದು ಯುವಕನ ಹಲ್ಲು ಮುರಿದಿದ್ದಾರೆ. ಮಾಡದ ತಪ್ಪನ್ನು ಮಾಡಿದ್ದೇನೆ ಎಂದು ಒಪ್ಪಿಕೊಳ್ಳಲು ಒತ್ತಡ ಹೇರಿದ್ದಾರೆ ಎಂದು ಇಂಡಿ ಚಿನ್ನಾಭರಣಗಳ ತಯಾರಕರು ಹಾಗೂ ಮಾರಾಟಗಾರರ ಸಂಘದ ಅಧ್ಯಕ್ಷ ಸೋಮಶೇಖರ ಬಿರಾದಾರ ಗಂಭೀರವಾಗಿ ಆರೋಪ

ಕನ್ನಡಪ್ರಭ ವಾರ್ತೆ ಇಂಡಿ

ಕಾನೂನು ರಕ್ಷಿಸಬೇಕಾದ ಪೊಲೀಸರೇ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಸುಖಾಸುಮ್ಮನೇ ನಗರದ ಚಿನ್ನಾಭರಣ ಅಂಗಡಿ ಮಾಲೀಕ ಮಹಾಂತೇಶ ಅರ್ಜುಣಗಿ ಮೇಲೆ ಜ.5ರಂದು ಸಿಂದಗಿ ಹಾಗೂ ಆಲಮೇಲ ಪೊಲೀಸರು ಹಲ್ಲೆ ನಡೆಸಿ, ಬಲವಾಗಿ ಹೊಡೆದು ಯುವಕನ ಹಲ್ಲು ಮುರಿದಿದ್ದಾರೆ. ಮಾಡದ ತಪ್ಪನ್ನು ಮಾಡಿದ್ದೇನೆ ಎಂದು ಒಪ್ಪಿಕೊಳ್ಳಲು ಒತ್ತಡ ಹೇರಿದ್ದಾರೆ ಎಂದು ಇಂಡಿ ಚಿನ್ನಾಭರಣಗಳ ತಯಾರಕರು ಹಾಗೂ ಮಾರಾಟಗಾರರ ಸಂಘದ ಅಧ್ಯಕ್ಷ ಸೋಮಶೇಖರ ಬಿರಾದಾರ ಗಂಭೀರವಾಗಿ ಆರೋಪ ಮಾಡಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸರು ಮಾಹಿತಿ ನೀಡದೆ, ನೋಟಿಸ್ ಜಾರಿಗೊಳಿಸದೆ, ಸಮವಸ್ತ್ರದಲ್ಲಿಯೂ ಬರದೆ ಖಾಸಗಿ ವಾಹನದಲ್ಲಿ ಬಂದು ಬಂಗಾರ ಅಂಗಡಿಯ ಮಾಲೀಕನಿಗೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನ ಬಂದಂತೆ ಥಳಿಸಿದ್ದಾರೆ.

ಕಳ್ಳತನದ ಆರೋಪ ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದಾರೆ. ಬಂಗಾರ ಅಂಗಡಿ ಮಾಲೀಕನನ್ನು ಸಿಂದಗಿ ಠಾಣೆಗೆ ಎಳೆದುಕೊಂಡು ಹೋಗಿ, ಕೈಕೋಳ ತೊಡಿಸಿ, ಒಂದು ದಿನ ಬಂಧನದಲ್ಲಿಟ್ಟು ಹಿಂಸೆ ಕೊಟ್ಟಿದ್ದಾರೆ. ಮಹಾಂತೇಶ ಅವರಿಂದ ಐದು ಬಿಳಿ ಖಾಲಿ ಹಾಳಿಗಳ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆ. ಅಂಗಡಿ ಮಾಲೀಕನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದರು.

ಪೊಲೀಸ್ ಸಿಬ್ಬಂದಿ ಚಿನ್ನಾಭರಣ ಅಂಗಡಿ ಮಾಲೀಕ ಮಹಾಂತೇಶ್ ಅರ್ಜುಣಗಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತು ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾದಾಗ ಪ್ರಕರಣವನ್ನು ದಾಖಲಿಸಿಕೊಳ್ಳದೆ ಸಮಯ ವ್ಯಯಿಸುವ ಕಾರ್ಯ ಮಾಡಿದ್ದಾರೆ. ಚಿನ್ನಾಭರಣ ಅಂಗಡಿಗಳ ಮಾಲೀಕರು ಹಾಗೂ ತಯಾರಕರ ಸಂಘದ ಸದಸ್ಯರು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಭೇಟಿ ಮಾಡಿ ನಡೆದ ಸಂಗತಿಗಳನ್ನು ತಿಳಿಸಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಕೂಡಲೇ ತನಿಖೆ ಆರಂಭಿಸಿ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನಾವು ಕಾನೂನು ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪೊಲೀಸರು ಕಾನೂನು ವ್ಯವಸ್ಥೆಯಲ್ಲಿ ಬಂದು ತನಿಖೆ ಮಾಡಲಿ, ಅದಕ್ಕೆ ನಾವು ಸಿದ್ದ. ಆದರೆ ಪೊಲೀಸರು ತಮಗೆ ಕಾನೂನು ಅನ್ವಯಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಗೃಹ ಮಂತ್ರಿ ಡಾ.ಜಿ.ಪರಮೇಶ್ವರ ಅವರು ಚಿನ್ನಾಭರಣ ಅಂಗಡಿಗಳಿಗೆ ತನಿಖೆಗೆ ಹೋಗಬೇಕಾದರೆ ಕಡ್ಡಾಯವಾಗಿ ಪೊಲೀಸರು ಅವರಿಗೆ ನೋಟಿಸ್ ಜಾರಿ ಮಾಡಿ, ಸಮವಸ್ತ್ರ ಧರಿಸಿಕೊಂಡು, ಸರ್ಕಾರಿ ವಾಹನದಲ್ಲೇ ಹೋಗಬೇಕೆಂದು ಆದೇಶಿಸಿದ್ದರೂ ಪೊಲೀಸ್ ಇಲಾಖೆ ಗೃಹ ಮಂತ್ರಿಗಳ ಆದೇಶಕ್ಕೇ ಬೆಲೆಯೇ ಕೊಡುತ್ತಿಲ್ಲ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀಶೈಲ ಅರ್ಜುಣಗಿ, ಸಂದೀಪ ಧನಶೆಟ್ಟಿ, ನಾಮದೇವ ಡಾಂಗೆ, ವಿಜಯಕುಮಾರ ಮಹೇಂದ್ರಕರ, ಪ್ರಭು ಹೊಸಮನಿ ಸೇರಿದಂತೆ ಇತರರು ಇದ್ದರು.