ಸಾರಾಂಶ
ವಿಧಾನಸೌಧದ ಪಶ್ಚಿಮ ದ್ವಾರದ ಸಮೀಪ ನಾಗರ ಹಾವೊಂದು ಕಂಡುಬಂದಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಘಟನೆ ನಡೆದಿದೆ.
ಬೆಂಗಳೂರು : ವಿಧಾನಸೌಧದ ಪಶ್ಚಿಮ ದ್ವಾರದ ಸಮೀಪ ನಾಗರ ಹಾವೊಂದು ಕಂಡುಬಂದಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಘಟನೆ ನಡೆದಿದೆ.
ಬುಧವಾರ ಮಧ್ಯಾಹ್ನ 2.30ರ ಸಮಯದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ನಾಗರಹಾವು ಕಂಡಿದೆ. ಆತಂಕಗೊಂಡ ಅವರು, ಹಾವು ಇರುವಂತ ಸ್ಥಳದ ಸುತ್ತಮುತ್ತ ಯಾರೂ ಓಡಾಡದಂತೆ ಎಚ್ಚರವಹಿಸಿದ್ದು, ಇತರೆ ಸಿಬ್ಬಂದಿಯನ್ನು ಸಹಾಯಕ್ಕಾಗಿ ಕರೆದಿದ್ದಾರೆ. ಆದರೆ, ಹಾವು ಹಿಡಿಯಲು ಯಾರು ಮುಂದಾಗದಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು.
ಸಂಜೆ 5 ಗಂಟೆ ಸುಮಾರಿಗೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ವನ್ಯಜೀವಿ ಸಂರಕ್ಷಕ ಎ.ಪ್ರಸನ್ನ ಕುಮಾರ್, ಉರುಗ ತಜ್ಞರಾದ ಸಯ್ಯಾದ್ ಪಾಶಾ, ಮಂಜುನಾಥ್, ಜಯರಾಜ್ ಅವರಿದ್ದ ತಂಡ ಸತತ 1 ಗಂಟೆ ಶ್ರಮಪಟ್ಟು ನಾಗರಹಾವು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಯಿತು. ನಂತರ ಹಾವನ್ನು ಅರಣ್ಯಪ್ರದೇಶವೊಂದರಲ್ಲಿ ಬಿಡುಗಡೆ ಮಾಡಿದೆ. ನಗರದ ಯಾವುದೇ ಬಡಾವಣೆಯಲ್ಲಿ ಹಾವುಗಳು ಕಂಡುಬಂದರೆ ಸಹಾಯವಾಣಿ: 9902794711 ಸಂಪರ್ಕಿಸಬಹುದು.