ಸಾರಾಂಶ
ಬೆಂಗಳೂರು : ನಟಿ ರನ್ಯಾರಾವ್ ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ಪೊಲೀಸ್ ವ್ಯವಸ್ಥೆ ಕೈಜೋಡಿಸಿರುವುದು ಕಂಡು ಬಂದಿದ್ದು, ಪೊಲೀಸರ ಅಕ್ರಮಗಳನ್ನು ನಿಯಂತ್ರಿಸುವಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್) ಆರೋಪಿಸಿದೆ.
ಪೊಲೀಸ್ ಇಲಾಖೆಯ ಮೇಲೆ ನಿಯಂತ್ರಣವಿಲ್ಲದಿರುವುದರಿಂದಲೇ ಇಲಾಖೆಯಲ್ಲಿನ ಹಲವು ಅಧಿಕಾರಿಗಳು ಯಾವುದೇ ಭಯವಿಲ್ಲದೆ ಕಳ್ಳ ಸಾಗಣೆಯಂತಹ ಅಕ್ರಮಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಹಲವಾರು ಪ್ರಕರಣಗಳಲ್ಲಿ ಪೊಲೀಸರು ನೇರವಾಗಿ ಭಾಗಿಯಾಗಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಡಾ.ಜಿ.ಪರಮೇಶ್ವರ ರಾಜ್ಯ ಕಂಡ ದುರ್ಬಲ ಗೃಹ ಸಚಿವರಲ್ಲಿ ಒಬ್ಬರಾಗಿದ್ದಾರೆ. ಇವರ ಈ ಸ್ಥಾನದಲ್ಲಿ ಮುಂದುವರೆಯುವುದರಿಂದ ರಾಜ್ಯದ ಪೊಲೀಸ್ ವ್ಯವಸ್ಥೆ ಮತ್ತಷ್ಟು ಹದಗೆಡುತ್ತದೆ ಎಂದು ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್.ಜೀವನ್ ಪ್ರಕಟಣೆ ಮೂಲಕ ಕಿಡಿಕಾರಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿಗಳ ಜೊತೆ ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳು ವ್ಯವಹಾರಿಕ ಸಂಬಂಧ ಹೊಂದಿದ್ದಾರೆ ಎಂಬದು ತಿಳಿದಿರುವ ವಿಚಾರವಾಗಿದೆ. ಅಲ್ಲದೇ, ಅನೇಕ ಕ್ರಿಮಿನಲ್‌ಗಳ ಜೊತೆ ಅಧಿಕಾರಿಗಳಿಗೆ ನಿಕಟ ಸಂಪರ್ಕ ಇರುವುದು ಇದೆ. ಇವೆಲ್ಲವನ್ನು ತಡೆಯುವಲ್ಲಿ ಗೃಹ ಸಚಿವರಾಗಿ ಪರಮೇಶ್ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಆದ್ದರಿಂದ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಜೀವನ್ ಆಗ್ರಹಿಸಿದ್ದಾರೆ.