ಸಾರಾಂಶ
ದೆಹಲಿ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ರೈತರಲ್ಲ, ಅವರು ಖಲಿಸ್ತಾನಿ ಉಗ್ರರು ಎಂದು ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಮತ್ತೊಂದು ವಿವಾದಾತ್ಮಕ ಹೇಳಕೆಯನ್ನು ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಮುಂಡಗೋಡ
ದೆಹಲಿ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ರೈತರಲ್ಲ, ಅವರು ಖಲಿಸ್ತಾನಿ ಉಗ್ರರು ಎಂದು ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಮತ್ತೊಂದು ವಿವಾದಾತ್ಮಕ ಹೇಳಕೆಯನ್ನು ನೀಡಿದ್ದಾರೆ.ಉತ್ತರಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಬಿಜೆಪಿ ಮುಖಂಡರ ಸಭೆ ನಡೆಸಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಪಂಜಾಬ್‌ನ ಗಡಿ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿರುವವರು ರೈತರಲ್ಲ. ಅಲ್ಲಿ ಬಂದಿರುವ ಎಲ್ಲರನ್ನೂ ನೋಡಿ, ಬೇಂಜ್ ಕಾರು ಸೇರಿದಂತೆ ಇತರೆ ಐಷಾರಾಮಿ ಕಾರುಗಳಲ್ಲಿ ಬಂದವರೇ ಇದ್ದಾರೆ. ಇವರಿಗೆಲ್ಲ ವಿದೇಶದಿಂದ ಹಣ ಸಂದಾಯವಾಗುತ್ತಿದೆ. ಖಲಿಸ್ತಾನಿ ಉಗ್ರರು ಇದರಲ್ಲಿ ಭಾಗಿಯಾಗಿದ್ದು, ನಿಜವಾದ ರೈತರು ಯಾರೂ ಇಲ್ಲ ಎಂದು ಹೇಳಿದರು.
ಇದು ನಿಜವಾದ ರೈತರ ಹೋರಾಟವಲ್ಲ, ಖಲಿಸ್ತಾನಿ ಉಗ್ರರ ಹೋರಾಟವಾಗಿದೆ. ನಿಜವಾದ ರೈತರಾಗಿದ್ದರೆ ಬೆಂಜ್, ಆವ್ಡಿ, ಬಿಎಂಡ್ಬ್ಲ್ಯೂ, ರೇಂಜ್‌ರೋವರ್‌ನಂಥ ಅತೀ ಬೆಲೆ ಬಾಳುವ ಕಾರುಗಳಲ್ಲಿ ಬರಲು ಸಾಧ್ಯವೆ. ನಿಜವಾದ ರೈತರೆಲ್ಲ ತಮ್ಮ ಜಮಿನುಗಳಲ್ಲಿ ಕೃಷಿ ಮಾಡುತ್ತಿದ್ದಾರೆ. ವಿದೇಶದಿಂದ ಬೆಂಕಿ ಹಚ್ಚಲೆಂದೇ ಫಂಡಿಂಗ್ ಮಾಡಲಾದ ಟೂಲ್ ಕಿಟ್‌ಗಳಿಂದ ಈ ನಾಟಕೀಯ ಹೋರಾಟ ನಡೆದಿದೆ ಎಂದು ಕಿಡಿಕಾರಿದ್ದಾರೆ.