ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆಯನ್ನು ಖಂಡಿಸಿ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ನಗರದ ಇಂದಿರಗಾಂಧಿ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆಯನ್ನು ಖಂಡಿಸಿ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ನಗರದ ಇಂದಿರಗಾಂಧಿ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಖರ್ಗೆ ಅವರ ಬಂಧನ ಹಾಗೂ ರಾಜೀನಾಮೆಗೆ ಒತ್ತಾಯಿಸಲಾಯಿತು. ಈ ವೇಳೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಅತ್ಯಂತ ಕೀಳು ಭಾಷೆಯಲ್ಲಿ ಮಾತನಾಡಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೇಶಕ್ಕೆ ಮಾಡಿದ ಅವಮಾನವಾಗಿದೆ. ಕಾಂಗ್ರೆಸಿಗರು ಹತಾಷಾ ಮನೋಭಾವದಿಂದ ಈ ರೀತಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದೇ ದಾಟಿಯಲ್ಲಿ ಉತ್ತರ ಕೊಡುವ ಶಕ್ತಿ ಬಿಜೆಪಿಗಿದೆ. ಆದರೆ, ಬಿಜೆಪಿ ಸಂಸ್ಕಾರವಿದೆ. ಇದಕ್ಕೆ ದೇಶದ ಜನತೆಯೇ ತಕ್ಕ ಉತ್ತರ ಕೊಡಲಿದ್ದಾರೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ಬಹಿರಂಗ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ನಿಮಗಿಂತ ಕೀಳು ಪದಗಳಲ್ಲಿ ಜನರೆ ಉತ್ತರ ಕೊಡಲಿದ್ದಾರೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಮಾತನಾಡಿ, ನರೇಂದ್ರ ಮೋದಿ ಅವರು ದೇಶಕ್ಕೆ ಪ್ರಧಾನಿ. ಆದರೆ, ಖರ್ಗೆ ಅವರ ಹೇಳಿಕೆ ಅವಮಾನಕರ, ಅಸಭ್ಯ ಮತ್ತು ಆಕ್ಷೇಪಾರ್ಹವಾಗಿದೆ. ಇದು ಪ್ರಧಾನಿಯ ಕುಟುಂಬದ ಗೌರವಕ್ಕೆ ಧಕ್ಕೆ ತರುವ ಪ್ರಯತ್ನವಾಗಿದೆ. ರಾಜಕೀಯ ಎದುರಾಳಿಗಳನ್ನು ಟೀಕಿಸುವಾಗ ಅವರ ಆಡಳಿತ ಮತ್ತು ನೀತಿಗಳ ಬಗ್ಗೆ ಮಾತನಾಡಬೇಕೇ ಹೊರತು ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಬಾರದು ಎಂದರು.
ದೇಶದ ಪ್ರಧಾನಿಯನ್ನು ನಿಂಧಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಇಂತಹ ನೀಚ ಸಂಸ್ಕೃತಿಯನ್ನು ಕಾಂಗ್ರೆಸ್ ಬಿಡಬೇಕು. ಜತೆಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಮಲ್ಲಿಕಾರ್ಜುನ ಖರ್ಗೆಯವರನ್ನು ತೆರವುಗೊಳಿಸಬೇಕು. ದೇಶದ ಜನತೆಯ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.ಇಂದು ಕಾಂಗ್ರೆಸ್ ಅಭದ್ರತೆಗೊಳಿಸುವ ಹೋರಾಟಕ್ಕೆ ಬೆಂಬಲ ಕೊಡುವ ಕೆಲಸ ಮಾಡುತ್ತಿದೆ ಎಂದು ದೂರಿದ ಅವರು, ಎಸ್ಐಅರ್ನಲ್ಲಿ ಯಾರಿಗೂ ಆಕ್ಷೇಪಣೆ ಇಲ್ಲ. ಆದರೆ, ಕಾಂಗ್ರೆಸ್ ಮಾತ್ರ ಆಕ್ಷೇಪಣೆ ಇದೆ ಎಂದರು.
ಪ್ರತಿಭಟನೆಯಲ್ಲಿ ಮಾಜಿ ಎಂಎಲ್ಸಿ ಸುನಿಲ್ ಸುಬ್ರಮಣಿ, ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರರಾದ ರವಿಕುಶಾಲಪ್ಪ, ತಳೂರು ಕಿಶೋರ್ ಪ್ರಮುಖರಾದ ಅಪ್ಪಣ್ಣ, ಪಿ.ಎಂ.ರವಿ, ಮನುಮಂಜುನಾಥ್, ಡೀನ್ ಬೋಪಣ್ಣ, ಕೆ.ಎಸ್.ರಮೇಶ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.