ನಗರಕ್ಕೆ ಖರ್ಗೆ, ರಾಗಾ, ಸಿಎಂ,ಡಿಸಿಎಂ ಆಗಮನ: ಸಚಿವ ಎನ್‌.ಎಸ್‌.ಬೋಸರಾಜು

| Published : May 02 2024, 12:21 AM IST

ನಗರಕ್ಕೆ ಖರ್ಗೆ, ರಾಗಾ, ಸಿಎಂ,ಡಿಸಿಎಂ ಆಗಮನ: ಸಚಿವ ಎನ್‌.ಎಸ್‌.ಬೋಸರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಅಭ್ಯರ್ಥಿ ಜಿ.ಕುಮಾರ ನಾಯಕ ಅವರ ಪರ ಪ್ರಚಾರ ನಡೆಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನೇತಾರ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಗುರುವಾರ ನಗರಕ್ಕೆ ಆಗಮಿಸುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ರಾಯಚೂರು

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜಿ.ಕುಮಾರ ನಾಯಕ ಅವರ ಪರ ಪ್ರಚಾರ ನಡೆಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನೇತಾರ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಗುರುವಾರ ನಗರಕ್ಕೆ ಆಗಮಿಸುತ್ತಿದ್ದಾರೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್‌.ಬೋಸರಾಜು ತಿಳಿಸಿದರು.

ಬುಧವಾರ ಮಾತನಾಡಿದ ಅವರು, ರಾಯಚೂರು ನಗರದ ಬಸವೇಶ್ವರ ವೃತ್ತದ ಪಕ್ಕದಲ್ಲಿರುವ ವಾಲ್ಕಾಟ್ ಮೈದಾನದಲ್ಲಿ ಗುರುವಾರ ಮಧ್ಯಾಹ್ನ 2:30 ಕ್ಕೆ ಪ್ರಚಾರ ಸಮಾವೇಶವನ್ನು ಹಮ್ಮಿಕೊಂಡಿದ್ದು ಈಗಾಗಲೇ ಅಗತ್ಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದರು.

ಸಮಾವೇಶದಲ್ಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಮುಖಂಡರು,ಕಾರ್ಯಕರ್ತರು ಸೇರಿದಂತೆ ಸುಮಾರು 30 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದ್ದು ಈ ಹಿನ್ನೆಲೆಯಲ್ಲಿ 70 ಸಾವಿರ ಚದರಡಿಯಲ್ಲಿ ಬೃಹತ್‌ ಪೆಂಡಾಲ್‌ ಹಾಕಲಾಗಿದ್ದು, 20 ಸಾವಿರಕ್ಕು ಹೆಚ್ಚು ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಪೆಂಡಾಲ್‌ನಲ್ಲಿ 20 ಎಲ್‌ಇಡಿ ಇರಿಸಲಾಗಿದ್ದು, ಬಿಸಿಲು ಹೆಚ್ಚಾಗಿರುವುದರಿಂದ 50 ಏರ್‌ ಕೂಲರ್‌ಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.

ಲೋಕಾ ಚುನಾವಣೆಯಲ್ಲಿ ಹೊರಗಿನವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ ಎಂದು ಬಿಜೆಪಿ ಮಾಜಿ ಸಚಿವ ವಿ.ಸೋಮಣ್ಣ ಅವರ ಆರೋಪಕ್ಕೆ ಉತ್ತರಿಸಿದ ಅವರು ಬಿಜೆಪಿಗರು ರಾಜ್ಯದ ವಿವಿಧೆ ಕ್ಷೇತ್ರಗಳಲ್ಲಿ ಯಾರನ್ನು ಎಲ್ಲಿನಿಲ್ಲಿಸಿದ್ದಾರೆ ಎನ್ನುವುದನ್ನು ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌ ಮಾತನಾಡಿ, ಕ್ಷೇತ್ರದಾದ್ಯಂತ ಪಕ್ಷದ ಅಭ್ಯರ್ಥಿ ಪರವಾಗಿ ನಿರಂತರ ಪ್ರಚಾರ ನಡೆಸಿದ್ದು ಎಲ್ಲೆಡೆ ಉತ್ತಮ ಸ್ಪಂದನೆ ಸಿಗುತ್ತಿದೆ. ಗುರುವಾರದ ಪ್ರಚಾರ ಸಮಾವೇಶದಲ್ಲಿಯೂ ಸಹ ಹೆಚ್ಚಿನ ಜನ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಈ ವೇಳೆ ಮಾನ್ವಿ ಶಾಸಕ ಜಿ.ಹಂಪಯ್ಯ ಸಾಹುಕಾರ, ಡಿಸಿಸಿ ಅಧ್ಯಕ್ಷ ಬಸವರಾಜ ಪಾಟೀಲ್‌ ಇಟಗಿ,ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಮುಖಂಡರಾದ ಬಸವರಾಜರೆಡ್ಡಿ, ಅಮರೇಗೌಡ ಹಂಚಿನಾಳ,ಕೆ.ಶಾಂತಪ್ಪ, ರುದ್ರಪ್ಪ ಅಂಗಡಿ ಇದ್ದರು.