ಖಾರ್‌ಲ್ಯಾಂಡ್ ಕಾಮಗಾರಿ ಕಳಪೆ: ಆರೋಪ

| Published : May 16 2024, 12:51 AM IST

ಸಾರಾಂಶ

ಈ ಕಾಮಗಾರಿಗೆ ಸಂಬಂಧಪಟ್ಟ ಅಧಿಕೃತ ಅಂದಾಜು ತಯಾರಿಸಿದ್ದು, ಆದರೆ ಅಂದಾಜಿಗೆ ವಿರುದ್ಧವಾದ ಕೆಲಸಗಳೇ ಈ ಕಾಮಗಾರಿಯಲ್ಲಿ ನಡೆದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಅಂಕೋಲಾ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ತಾಲೂಕಿನ ಮಂಜುಗುಣಿಯಲ್ಲಿ ನಡೆದ ₹572 ಲಕ್ಷ ವೆಚ್ಚದ ಖಾರ್‌ಲ್ಯಾಂಡ್ ನಿರ್ಮಾಣವು ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಯಿಂದಾಗಿ ಸಾರ್ವಜನಿಕ ಬಾವಿ ಮತ್ತು ಕೃಷಿ ಜಮೀನುಗಳಿಗೆ ಉಪ್ಪು ನೀರು ನುಗ್ಗಿ ಹಾನಿಯಾಗಿದೆ. ಕಾಮಗಾರಿಯ ಸಮಗ್ರ ತನಿಖೆಗೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ತಾಲೂಕಿನ ಮಂಜಗುಣಿ ಗ್ರಾಮದಲ್ಲಿ ಖಾರ್‌ಲ್ಯಾಂಡ್ ಕಾಮಗಾರಿ ನಡೆಸುತ್ತಿದ್ದು, ಸಂಪೂರ್ಣ ಅವೈಜ್ಞಾನಿಕ ಮತ್ತು ಅಷ್ಟೇ ಕಳಪೆಮಟ್ಟದ್ದಾಗಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ಸೈಟ್ ಎಂಜಿನಿಯರ್‌ ಹಾಗೂ ಅಧಿಕಾರಿಗಳೇ ಕಾರಣರಾಗಿದ್ದಾರೆ.

ಈ ಕಾಮಗಾರಿಗೆ ಸಂಬಂಧಪಟ್ಟ ಅಧಿಕೃತ ಅಂದಾಜು ತಯಾರಿಸಿದ್ದು, ಆದರೆ ಅಂದಾಜಿಗೆ ವಿರುದ್ಧವಾದ ಕೆಲಸಗಳೇ ಈ ಕಾಮಗಾರಿಯಲ್ಲಿ ನಡೆದಿದೆ. ಪ್ರಮಾಣಕ್ಕಿಂತ ಕಡಿಮೆ ಮಟ್ಟದ ಕಬ್ಬಿಣ, ಗ್ರೇಡ್‌ ಇಲ್ಲದ ಸಿಮೆಂಟ್‌, ಉಪ್ಪು ನೀರು ಮಿಶ್ರಿತ ಕಸ ಕಡ್ಡಿ ಇರುವ ಉಸುಕನ್ನು ಕಾಂಕ್ರೀಟ್‌ಗೆ ಬಳಸಿದ್ದಾರೆ. ಕಾಂಕ್ರೀಟ್ ಹಾಕಿದ ಮಾರನೇ ದಿನ ಅದಕ್ಕೆ ನೀರನ್ನು ಹಾಕದೇ ಇದ್ದುದರಿಂದ ಅದನ್ನು ನೋಡಿದ ಜನ ವಿರೋಧ ಮಾಡಿದ 15 ದಿನಗಳ ನಂತರ ಕಾಟಾಚಾರಕ್ಕೆ ನೀರನ್ನು ಹಾಕಿದ್ದಾರೆ.

ಇಲ್ಲಿರುವ ಉತ್ತಮ ಸ್ಥಿತಿಯಲ್ಲಿರುವ ಬ್ರಿಡ್ಜ್‌ ಕೆಡವಿ ಮತ್ತೆ ಈ ಇಲಾಖೆ ಒಂದೇ ವಾರದಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಬೆಡ್, ಪಿಲ್ಲರ್, ಸ್ಟೇಪ್ ಹಾಕಿ ಯಾವುದನ್ನೂ ಸರಿಯಾಗಿ ಕ್ಯೂರ್ ಮಾಡದೇ ತರಾತುರಿಯಲ್ಲಿ ಬ್ರಿಜ್ಡ್‌ ಮಾಡಿದ್ದಾರೆ. ಈ ಒಂದು ಚಿಕ್ಕ ಹಳ್ಳಕ್ಕೆ ಹೊಂದಿಕೊಂಡು ರೈತರ ಕೃಷಿ ಭೂಮಿ, ಕುಡಿಯುವ ನೀರಿನ ಬಾವಿ ಇದ್ದು. ಸಂಬಂಧಪಟ್ಟ ಇಲಾಖೆಯ ಬೇಜವಾಬ್ದಾರಿತನದ ಅಧಿಕಾರಿಗಳಿಂದ ಸಮುದ್ರದ ಉಪ್ಪು ನೀರು ಕೃಷಿ ಭೂಮಿ ಮತ್ತು ಕುಡಿಯುವ ನೀರಿನ ಬಾವಿಗೆ ಹೋಗಿದ್ದು, ಕೃಷಿ ಭೂಮಿ ಹಾಳಾಗುವುದರ ಜತೆಗೆ ಕುಡಿಯುವ ನೀರು ಇಲ್ಲದ ಪರಿಸ್ಥಿತಿ ಮಾಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿಯ ಮೂಲಕ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಜಿಲ್ಲಾಧಿಕಾರಿಗಳು ಈ ಕಾಮಗಾರಿಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ, ಕಳಪೆ ಕಾಮಗಾರಿ ಮಾಡಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಕಾನೂನಿನ ಕ್ರಮ ಆಗದೇ ಇದ್ದಲ್ಲಿ ಮುಂದೆ ನಾವು ಉಗ್ರ ಹೋರಾಟ ಮಾಡುತ್ತೇವೆ ಎಂದು ಗ್ರಾಮಸ್ಥರಾದ ಅಶೋಕ ನಾಯ್ಕ, ಉದಯ ನಾಯ್ಕ, ರಮೇಶ ನಾಯ್ಕ, ಮೋಹನ ನಾಯ್ಕ, ದಿನೇಶ ಹರಿಕಂತ್ರ, ರಮೇಶ ತಾಂಡೇಲ, ಮಹಾದೇವ ನಾಯ್ಕ, ಶಾಂತಾರಾಮ ನಾಯ್ಕ, ಸಂಜಯ ನಾಯ್ಕ, ವಿನಾಯಕ ನಾಯ್ಕ, ಗೋವಿಂದ ನಾಯ್ಕ, ರಾಮಚಂದ್ರ ನಾಯ್ಕ, ಪ್ರವೀಣ ನಾಯ್ಕ ಅವರು ಮನವಿಯಲ್ಲಿ ತಿಳಿಸಿದ್ದಾರೆ.