ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಖಾಸ್ಗತಜ್ಜನ ಜಾತ್ರೆಗೆ ತಾಳಿಕೋಟೆ ಪಟ್ಟಣ ವಿಜಯನಗರ ಸಾಮ್ರಾಜ್ಯದಲ್ಲಿನ ಮೆರುಗು ಕಂಡಂತೆ ಎಲ್ಲೆಡೆ ವಿದ್ಯುತ್ ದ್ವೀಪಗಳ ಅಲಂಕಾರದಿಂದ ಕಂಗೊಳಿಸುತ್ತಿದೆ. ಖಾಸ್ಗತೇಶ್ವರ ಜಾತ್ರೋತ್ಸವ ನಿಮಿತ್ತ ಶ್ರೀಮಠದ ಪೀಠಾಧಿಪತಿ ಸಿದ್ದಲಿಂಗ ದೇವರ ಅಪೇಕ್ಷೆಯಂತೆ ವಿದ್ಯುತ್ ದೀಪಗಳನ್ನು ಅಳವಡಿಸಿ ದೀಪಾವಳಿ ಹಬ್ಬದಂತೆ ಜಾತ್ರೋತ್ಸವ ಯಶಸ್ವಿಗೆ ಮುಂದಾಗಿದ್ದಾರೆ.ಹೊರವಲಯ ಹಾಗೂ ಗೋಪೂರ ಎತ್ತರಕ್ಕೂ ಝಗಮಗಿಸುವ ವಿದ್ಯುತ್ ದೀಪಗಳ ಅಲಂಕಾರ ಹೆಚ್ಚಿಸಲಾಗಿದೆ. ಶ್ರೀಮಠದ ಒಳಭಾಗದಲ್ಲಿಯ ಖಾಸ್ಗತರ ಹಾಗೂ ವಿರಕ್ತಶ್ರೀಗಳವರ ಬೆಳ್ಳಿ ಉತ್ಸವ ಮೂರ್ತಿಗಳಿಗೆ ರಾಜವೈಭವದ ಮಂಟಪಗಳಂತೆ ಥರ್ಮಾಕೋಲದಿಂದ ಅಲಂಕೃತ ಕಂಬಗಳನ್ನು ನಿರ್ಮಿಸಿ ಜಾತ್ರೆಯ ಸೊಬಗನ್ನು ಇನ್ನಷ್ಟು ಇಮ್ಮಡಿಗೊಳಿಸಲಾಗಿದೆ.ಪಟ್ಟಣದ ಪ್ರಮುಖ ಮಾರ್ಗಗಳಾದ ಬಸವೇಶ್ವರ ಸರ್ಕಲ್, ರಾಣಾಪ್ರತಾಪಸಿಂಹ ಸರ್ಕಲ್, ಶಿವಾಜಿ ಮಹಾರಾಜ ವೃತ್ತ ಹಾಗೂ ಡಾ.ಅಂಬೇಡ್ಕರ್ ಸರ್ಕಲ್, ಬಸ್ ನಿಲ್ದಾಣ ಮುಂಭಾಗ, ಖಾಸ್ಗತೇಶ್ವರ ಮಠದ ಮುಂಭಾಗವೂ ಭಕ್ತಾಧಿಗಳು ಹಾಗೂ ವಿವಿಧ ಯುವ ಸಂಘಟಿಕರು ತಮ್ಮ ಇಚ್ಚಾನುಸಾರ ಖಾಸ್ಗತರ ಹಾಗೂ ವಿರಕ್ತಶ್ರೀಗಳ ಹಾಗೂ ಸಿದ್ದಲಿಂಗಶ್ರೀಗಳ ಭಾವಚಿತ್ರದೊಂದಿಗೆ ಸ್ವಾಗತ ಕೋರುವಂತಹ ಕಟೌಟ್‌ಗಳನ್ನು ಕಟ್ಟಿ ಭಕ್ತರಿಗೆ ಸ್ವಾಗತ ಕೋರಿದ್ದಾರೆ.ಜಾತ್ರೋತ್ಸವ ಅಂಗವಾಗಿ ಸಪ್ತ ಭಜನೆಯಲ್ಲಿ ಸುಮಾರು ೧೬೦ಕ್ಕೂ ಹೆಚ್ಚು ಗ್ರಾಮಗಳ ಗ್ರಾಮಸ್ಥರು ಪಾಲ್ಗೊಳ್ಳುವುದರೊಂದಿಗೆ ಭಕ್ತಿ ಸಮರ್ಪಣೆಗೆ ಮುಂದಾಗಿದ್ದು, ಹಗಲು ರಾತ್ರಿಯೂ ಬಿಡುವಿಲ್ಲದೇ ನಡೆಯುವ ಈ ಸಪ್ತ ಭಜನೆ ಕಾರ್ಯದಲ್ಲಿ ಎಲ್ಲ ಭಕ್ತರಿಗೆ ಅವಕಾಶ ಸಿಗಲಿ ಎಂಬ ಕಾರಣದಿಂದ ಒಂದು ಗ್ರಾಮದವರಿಗೆ ೧ ಗಂಟೆ ಮೀಸಲಿಡಲಾಗಿದೆ. ಸದರಿ ಸಪ್ತ ಭಜನಾ ಕಾರ್ಯವು ಆಶಾಡ ಏಕಾದಶಿ ದಿನವಾದ ಜು.೧೮ ಗೋಪಾಲ ಕಾವಲಿ ಒಡೆಯುವ ದಿನದಂದು ಮುಕ್ತಾಯಗೊಳ್ಳಲಿದೆ.ಭಕ್ತರಿಗೆ ಜೀಲೆಬಿ ಪ್ರಸಾದ:
ಸುಮಾರು ೯ ದಿನ ಜರುಗಲಿರುವ ಜಾತ್ರೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಈ ಭಾರಿ ಜು.೧೬ ಮತ್ತು ೧೭ ರಂದು ಸಮಸ್ತ ಭಕ್ತರಿಗಾಗಿ ಅನ್ನ ಪ್ರಸಾದದ ಜೊತೆಗೆ ಸುಮಾರು ೮ ಕ್ವಿಂಟಲ್ ಅಧಿಕ ಬೆಲ್ಲದ ಜೀಲೆಬಿಯನ್ನು ಉಣಬಡಿಸಲು ಶ್ರೀಮಠ ನಿರ್ಧರಿಸಿದ್ದು, ಎರಡು ದಿನಗಳ ಕಾಲ ದಿನಕ್ಕೆ ೫೦ ಸಾವಿರ ಜೀಲೆಬಿಯ ಗಾಲಿಗಳು ತಯಾರಿಸಿ ಭಕ್ತರಿಗೆ ನೀಡವ ಸಿದ್ಧತೆ ಕೈಗೊಂಡಿದ್ದಾರೆ.ವಿಶೇಷವಾಗಿ ಜು.೧೮ ಗೋಪಾಲ ಕಾವಲಿ ಒಡೆಯುವ ದಿನದಂದು ಈ ಹಿಂದಿನಿಂದ ಬಂದ ಸಾಂಪ್ರದಾಯದಂತೆ ಉತ್ತರ ಕರ್ನಾಟಕ ಭಾಗದ ಸಜ್ಜಕ ಹಾಗೂ ಅನ್ನ ಪ್ರಸಾದ ಸಾರಿನ ವ್ಯವಸ್ಥೆ ನಡೆಯಲಿದೆ. ಜು.೧೯ ಖಾಸ್ಗತ ಶಿವಯೋಗಿಗಳ ರಥೋತ್ಸವ ದಿನದಂದು ಯುವ ಭಕ್ತ ಸಮೂಹದವರು ತಮ್ಮ ಸ್ವ ಇಚ್ಚೆಯಿಂದ ಚಪಾತಿಯ ಮಾದಲಿ ಹಾಗೂ ಅನ್ನ ಪ್ರಸಾದದ ವ್ಯವಸ್ಥೆ ಮಾಡಲು ಮುಂದೆ ಬಂದಿದ್ದು, ಜಾತ್ರೆ ಪ್ರಾರಂಭದಿನದಿಂದಲೂ ಮುಕ್ತಾಯದವರೆಗೆ ವಿಶೇಷವಾಗಿ ರೊಟ್ಟಿ, ವಿವಿಧ ತರಹದ ಪಲ್ಲೆ, ಸಾಂಬರ, ಅನ್ನ, ಸಜ್ಜಕ, ಶೀರಾ, ಬಜಿ ಒಳಗೊಂಡಂತೆ ವಿವಿಧ ಬಗೆಯ ಫಕ್ವಾನ ಭೋಜನೆದಂತೆ ಶ್ರೀಮಠದಿಂದ ಪ್ರಸಾದದ ವ್ಯವಸ್ಥೆ ನಡೆಯಲಿದೆ...ಭಕ್ತರೇ ಶ್ರೀಮಠದ ಆಸ್ತಿಯಾಗಿದ್ದಾರೆ. ಖಾಸ್ಗತಜ್ಜನ ಜಾತ್ರೆ ಭಕ್ತರಿಂದಲೇ ಮೇರಗನ್ನು ಹೆಚ್ಚಿಸಿಕೊಂಡಿದೆ. ಸಂಭ್ರಮದ ಜಾತ್ರೆಯ ಸೊಬಗನ್ನು ಹೆಚ್ಚಿಸಲು ಭಕ್ತರೇ ನಿಂತು ಎಲ್ಲ ಕಾರ್ಯ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಇದು ಭಕ್ತರ ಮಠ, ಅಜ್ಜನ ಜಾತ್ರೆಗೆ ಎಲ್ಲರೂ ಬಂದು ಖಾಸ್ಗತಜ್ಜನ ಕೃಪೆಗೆ ಪಾತ್ರರಾಗಬೇಕು.
-ಬಾಲಶಿವಯೋಗಿ ಸಿದ್ದಲಿಂಗ ಶ್ರೀ, ಖಾಸ್ಗತೇಶ್ವರ ಮಠ ತಾಳಿಕೋಟೆ.