ಸಾರಾಂಶ
ಗದಗ: ಭಾರತ–ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿತ್ಯ ಬೆಳವಣಿಗೆಯನ್ನು ಪಡೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಮಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದ್ಯೋಗ ಖಾತ್ರಿ ಕಾರ್ಮಿಕರು ಭಾರತೀಯ ಸೇನೆಗೆ ನೈತಿಕ ಬೆಂಬಲ ನೀಡಲು ವಿಶಿಷ್ಟ ರೀತಿಯ ನಡೆ ಕೈಗೊಂಡಿದ್ದಾರೆ.ದಿನನಿತ್ಯ ತಮ್ಮ ಕಷ್ಟದ ಕೆಲಸಗಳಿಗೆ ತೆರಳುವ ಕಾರ್ಮಿಕರು, ಈ ಬಾರಿಯ ಕಾರ್ಯದ ಆರಂಭದಲ್ಲಿ ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ಭಾರತೀಯ ಸೈನ್ಯಕ್ಕೆ ಜಯವಾಗಲಿ ಎಂಬ ದೇಶಭಕ್ತಿಯ ಘೋಷಣೆಗಳನ್ನು ಕೂಗಿ ಕಾರ್ಯಾರಂಭಿಸಿದರು.ನಮ್ಮ ದೇಶ, ನಮ್ಮ ಹೆಮ್ಮೆ, ರಕ್ತದ ಕಣಕಣ ಕೂಗುತಿದೆ... ಭಾರತ, ಭಾರತ ಎನ್ನುತ್ತಿದೆ ಎಂಬ ಘೋಷ ವಾಕ್ಯಗಳನ್ನು ಉಚ್ಚರಿಸುತ್ತ ಅವರು ನಿಸ್ವಾರ್ಥ ಸೇವೆಯಲ್ಲಿರುವ ಯೋಧರಿಗೆ ಭಾವನಾತ್ಮಕ ಶಕ್ತಿಯನ್ನು ಪೂರೈಸುವ ಕೆಲಸ ಮಾಡುತ್ತಿದ್ದಾರೆ.ಈ ಘಟನೆಯು ಜನಮನದಲ್ಲಿ ದೇಶಾಭಿಮಾನನ್ನು ಮೂಡಿಸುವ ಉದಾಹರಣೆಯಾಗಿದೆ. ಶ್ರಮಿಕರು ತಮ್ಮ ನಿಷ್ಠೆ ಮತ್ತು ಭಕ್ತಿಯಿಂದ ದೇಶಸೇವೆಗೂ ಭಾಗಿಯಾಗಬಹುದು ಎಂಬುದಕ್ಕೆ ಈ ಘಟನೆ ಸ್ಪಷ್ಟ ಸಾಕ್ಷಿಯಾಗಿದೆ. ನಾವು ಶಸ್ತ್ರಾಸ್ತ್ರ ಹಿಡಿಯಲಾಗದಿದ್ದರೂ ಯೋಧರಿಗೆ ಧೈರ್ಯ ತುಂಬಬಹುದು ಎಂದು ಕಾರ್ಮಿಕರು ಭಾವೋದ್ವೇಗದಿಂದ ಹೇಳಿದರು.