ಖೋಖೋ ವಿಶ್ವಕಪ್: ಭಾರತ ತಂಡಕ್ಕೆ ಶ್ರೀಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಇಬ್ಬರು ಆಯ್ಕೆ

| Published : Dec 27 2024, 12:45 AM IST

ಖೋಖೋ ವಿಶ್ವಕಪ್: ಭಾರತ ತಂಡಕ್ಕೆ ಶ್ರೀಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಇಬ್ಬರು ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಚೈತ್ರಾ ಬಿ. 30ಕ್ಕೂ ಅಧಿಕ ಬಾರಿ ಕರ್ನಾಟಕದ ಖೋ- ಖೋ ತಂಡದಲ್ಲಿ ಭಾಗವಹಿಸಿದ್ದಾರೆ. ಜೈತ್ರಾ ಹಾಗೂ ಮೋನಿಕ ಅವರು ಭಾರತ ತಂಡವನ್ನು ಪ್ರತಿನಿಧಿಸಬೇಕೆಂದು ಕಠಿಣ ಪರಿಶ್ರಮ ಹಾಕಿ ನಿರಂತರ ಅಭ್ಯಾಸ ನಡೆಸಿದ್ದರು. ಚೈತ್ರಾ ಹಾಗೂ ಮೋನಿಕ ಅವರಿಗೆ ಮಂಜುನಾಥ್ ತರಬೇತಿ ನೀಡಿದ್ದರು. ಇದೀಗ ಭಾರತ ತಂಡಕ್ಕೆ ಆಯ್ಕೆಯಾಗುವ ಮೂಲಕ ಅವರ ಶ್ರಮಕ್ಕೆ ಪ್ರತಿಫಲ ದೊರೆತಿದೆ. ಇಬ್ಬರು ವಿದ್ಯಾರ್ಥಿನಿಯರು ಕಾಲೇಜು, ವಿವಿ ಹಂತದ ಹಲವು ಪಂದ್ಯಗಳಲ್ಲೂ ಭಾಗವಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಜನವರಿ 13 ರಿಂದ 19ರವರೆಗೆ ದೆಹಲಿಯಲ್ಲಿ ನಡೆಯುತ್ತಿರುವ ಖೋ- ಖೋ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಭಾರತ ತಂಡಕ್ಕೆ ಪಾಂಡವಪುರ ತಾಲೂಕಿನ ಜಯಂತಿ ನಗರದ ಶ್ರೀಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಇಬ್ಬರು ಬಿಪಿಇಡಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಸಂಸ್ಥೆಯಲ್ಲಿ ದ್ವಿತೀಯ ಬಿಪಿಇಡಿ ವಿದ್ಯಾರ್ಥಿನಿ ಚೈತ್ರಾ ಬಿ. ಹಾಗೂ ಪ್ರಥಮ ವರ್ಷದ ಮೋನಿಕ ಎಲ್. ಭಾರತ ತಂಡಕ್ಕೆ ಆಯ್ಕೆಯಾಗಿ ತಂಡದ ಕ್ಯಾಂಪ್ ಸೇರಿದ್ದಾರೆ.

ಗ್ರಾಮೀಣ ಕ್ರೀಡೆ ಪ್ರೋತ್ಸಾಹಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಚೊಚ್ಚಲ ಖೋ- ಖೋ ವಿಶ್ವಕಪ್ ಪಂದ್ಯಾವಳಿ ಆಯೋಜಿಸಲಾಗಿದೆ. ಭಾರತ ತಂಡಕ್ಕೆ ರಾಜ್ಯದಿಂದ ನಾಲ್ಕು ಮಂದಿ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದರು. ಇದರಲ್ಲಿ ಶ್ರೀಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಇಬ್ಬರು ವಿದ್ಯಾರ್ಥಿನಿಯರು ಆಯ್ಕೆಯಾಗುವ ಮೂಲಕ ಕೀರ್ತಿ ತಂದಿದ್ದಾರೆ. ಆಯ್ಕೆಯಾದ ಚೈತ್ರಾ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕುರಬೂರು ಗ್ರಾಮ ಹಾಗೂ ಮೋನಿಕ ಕೊತ್ತೇಗಾಲ ಗ್ರಾಮದವರಾಗಿದ್ದು, ಕೃಷಿ ಕುಟುಂಬಕ್ಕೆ ಸೇರಿದ್ದಾರೆ ಎನ್ನುವುದು ಮತ್ತೊಂದು ವಿಶೇಷವಾಗಿದೆ.

ಚೈತ್ರಾ ಬಿ. 30ಕ್ಕೂ ಅಧಿಕ ಬಾರಿ ಕರ್ನಾಟಕದ ಖೋ- ಖೋ ತಂಡದಲ್ಲಿ ಭಾಗವಹಿಸಿದ್ದಾರೆ. ಜೈತ್ರಾ ಹಾಗೂ ಮೋನಿಕ ಅವರು ಭಾರತ ತಂಡವನ್ನು ಪ್ರತಿನಿಧಿಸಬೇಕೆಂದು ಕಠಿಣ ಪರಿಶ್ರಮ ಹಾಕಿ ನಿರಂತರ ಅಭ್ಯಾಸ ನಡೆಸಿದ್ದರು. ಚೈತ್ರಾ ಹಾಗೂ ಮೋನಿಕ ಅವರಿಗೆ ಮಂಜುನಾಥ್ ತರಬೇತಿ ನೀಡಿದ್ದರು. ಇದೀಗ ಭಾರತ ತಂಡಕ್ಕೆ ಆಯ್ಕೆಯಾಗುವ ಮೂಲಕ ಅವರ ಶ್ರಮಕ್ಕೆ ಪ್ರತಿಫಲ ದೊರೆತಿದೆ. ಇಬ್ಬರು ವಿದ್ಯಾರ್ಥಿನಿಯರು ಕಾಲೇಜು, ವಿವಿ ಹಂತದ ಹಲವು ಪಂದ್ಯಗಳಲ್ಲೂ ಭಾಗವಹಿಸಿದ್ದಾರೆ.

ರೈತಾಪಿ ಕುಟುಂಬದಲ್ಲಿ ಜನಿಸಿ ಇದೀಗ ವಿಶ್ವಕಪ್‌ನಂತಹ ದೊಡ್ಡ ಕ್ರೀಡಾಕೂಟಕ್ಕೆ ಭಾಗವಹಿಸಲು ಭಾರತ ತಂಡವನ್ನು ಪ್ರತಿನಿಧಿಸುತ್ತಿರುವುದಕ್ಕೆ ಸಂಸ್ಥೆ ಆಡಳಿತ ಮಂಡಳಿ ಹಾಗೂ ಉಪನ್ಯಾಸಕರು, ಶಿಕ್ಷಕರು, ತರಬೇತುದಾರರು ಅಭಿನಂದನೆ ಸಲ್ಲಿಸಿದ್ದಾರೆ.

‘ದೆಹಲಿಯಲ್ಲಿ ನಡೆಯುತ್ತಿರುವ ಚೊಚ್ಚಲ ವಿಶ್ವಕಪ್ ಖೋ ಖೋ ಪಂದ್ಯಾವಳಿಗೆ ನಮ್ಮ ಸಂಸ್ಥೆಯ ವಿದ್ಯಾರ್ಥಿನಿಯರು ಭಾರತ ತಂಡಕ್ಕೆ ಆಯ್ಕೆಯಾಗಿರುವುದು ಸಂತಸದ ವಿಚಾರ. ಇಬ್ಬರು ವಿದ್ಯಾರ್ಥಿಗಳು ನಿರಂತರ ಪರಿಶ್ರಮ ಹಾಕುತ್ತಿದ್ದರು. ಇದೀಗ ಅವರ ಶ್ರಮಕ್ಕೆ ಬೆಲೆ ಸಿಕ್ಕಿದೆ. ಸಂಸ್ಥೆ ಹಾಗೂ ಪೋಷಕರಿಗೆ ಹೆಮ್ಮೆ ತಂದಿದೆ. ವಿಶ್ವಕಪ್ ಪಂದ್ಯಾವಳಿಯಲ್ಲಿ ಗೆದ್ದು ದೇಶಕ್ಕೆ ಕೀರ್ತಿ ತರಲಿ.’

- ಅಕ್ಷಯ್, ಆಡಳಿತಾಧಿಕಾರಿ, ಶ್ರೀಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆ ಪಾಂಡವಪುರ