9ರಂದು ಖ್ಯಾಪನೆ: ಗುರುಪರಂಪರೆಯ ವಿಶೇಷ ಸೇವೆ

| Published : Jan 07 2024, 01:30 AM IST / Updated: Jan 07 2024, 05:03 PM IST

ಸಾರಾಂಶ

ಮೂಲಮಠದ ಪುನರುತ್ಥಾನ ಹಾಗೂ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿಕಾಸಕ್ಕೆ ಅಶೋಕೆಯ ಮೂಲವಾದ ಮಲ್ಲಿಕಾರ್ಜುನನ ಕೃಪೆ ಬೇಕು. ಮಲ್ಲಿಕಾರ್ಜುನ ನಮ್ಮ ಸೇವೆಯಿಂದ ಸಂತೃಪ್ತನಾಗಿ ಮಳೆ ಸುರಿಸಿದ್ದಾನೆ.

ಗೋಕರ್ಣ: ಅಶೋಕೆಯ ಶ್ರೀ ಮಲ್ಲಿಕಾರ್ಜುನನಿಗೆ ಅತಿರುದ್ರ ಅಭಿಷೇಕ ನಡೆದ ಕೊನೆಯ ದಿನ ಗುರು ಪರಂಪರೆಯ ವಿಶೇಷ ಸೇವೆ ನಡೆಯಲಿದೆ. ಜ. 9ರಂದು ನಡೆಯುವ ಖ್ಯಾಪನಾ ಕಾರ್ಯಕ್ರಮದಲ್ಲಿ ಶ್ರೀ ಶಂಕರರ ಅವಿಚ್ಛಿನ್ನ ಪರಂಪರೆಯ ಎಲ್ಲ ಪೂರ್ವಾಚಾರ್ಯರಲ್ಲಿ ಇಡೀ ಸಮಾಜ ಕ್ಷಮೆಯಾಚನೆ ಮಾಡುವ ಮತ್ತು ಸಾಮೂಹಿಕವಾಗಿ ಗುರು ಅಷ್ಟಕ ಪಠಣ ನಡೆಯಲಿದೆ ಎಂದು ರಾಘವೇಶ್ವರಭಾರತೀ ಸ್ವಾಮೀಜಿ ನುಡಿದರು.

ಇಲ್ಲಿನ ಅಶೋಕೆಯಲ್ಲಿ ನಡೆಯುತ್ತಿರುವ ಅತಿರುದ್ರ ಅಭಿಷೇಕದ ಎಂಟನೇ ದಿನವಾದ ಶನಿವಾರ ಕುಮಟಾ ಮಂಡಲದ ಶಿಷ್ಯರ ರುದ್ರಸೇವೆ ಸಮರ್ಪಣೆಯ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಮೂಲಮಠದ ಪುನರುತ್ಥಾನ ಹಾಗೂ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿಕಾಸಕ್ಕೆ ಅಶೋಕೆಯ ಮೂಲವಾದ ಮಲ್ಲಿಕಾರ್ಜುನನ ಕೃಪೆ ಬೇಕು. ಮಲ್ಲಿಕಾರ್ಜುನ ನಮ್ಮ ಸೇವೆಯಿಂದ ಸಂತೃಪ್ತನಾಗಿ ಮಳೆ ಸುರಿಸಿದ್ದಾನೆ. ನಮಗೆ ಕರುಣೆಯ ಮಳೆಯನ್ನೂ ಹರಿಸಿ, ಎಲ್ಲ ಕಷ್ಟ-ಕೋಟಲೆಗಳು ತೊಳೆದುಹೋಗಲಿ ಎಂದು ಆಶಿಸಿದರು.ಇಡೀ ಸಮಾಜ ಆತನ ಕರುಣೆಯಿಂದ ತಂಪಾಗಿ, ಹಸಿರಾಗಿ ನಳನಳಿಸಬೇಕು. ಕರೆದಾಗ ಒಬ್ಬೊಬ್ಬರು ಒಂದೊಂದು ರೀತಿಯ ಉತ್ತರ ನೀಡಬಹುದು.

 ಶಿವ ಮಳೆ ರೂಪದಲ್ಲಿ ಅನುಗ್ರಹಿಸಿದ್ದಾನೆ. ಶಿವನಿಗೆ ಎರೆದ ಗಂಗೆ ಆತನ ಪಾದವಾದ ಭೂಮಿಯನ್ನು ತಂಪಾಗಿಸಿದ್ದಾಳೆ. ಪ್ರತಿಕೂಲಗಳ ನಡುವೆ ನಾವು ಸಲ್ಲಿಸುವ ಸೇವೆಗೆ ಫಲ ಅಧಿಕ. 

ನೆನೆದ ನೆಲ ಮತ್ತು ನೆನೆದ ಮನದಲ್ಲಿ ಸೇವೆ ಸಲ್ಲಿಸುವುದು ನಿಜಕ್ಕೂ ಅಪೂರ್ವ ಎಂದು ಬಣ್ಣಿಸಿದರು.ವಿಷ್ಣುಗುಪ್ತ ವಿವಿ ಗೌರವಾಧ್ಯಕ್ಷ ದೇವಶ್ರವ ಶರ್ಮಾ, ವಿ. ಸತ್ಯನಾರಾಯಣ ಶರ್ಮಾ, ಆಡಳಿತಾಧಿಕಾರಿ ಡಾ. ಪ್ರಸನ್ನಕುಮಾರ ಟಿ.ಜಿ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ರಮಣಭಟ್ ಮುಂಬೈ, ಮನೋರಂಜಿನಿ, ಕುಮಟಾ ಮಂಡಲ ಅಧ್ಯಕ್ಷ ಮುರೂರು ಸುಬ್ರಾಯ ಭಟ್, ವ್ಯವಸ್ಥಾ ಪರಿಷತ್ ಕಾರ್ಯಾಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ, ಶ್ರೀವತ್ಸ ಮುರುಗೋಡು, ಶ್ರೀಮಠದ ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ ಉಪಸ್ಥಿತರಿದ್ದರು.