ಸಾರಾಂಶ
ಧಾರವಾಡ:
ರೈತರ ಹೆಸರಿನ ನಕಲಿ ದಾಖಲೆ ಬಳಸಿ ಕೆಐಎಡಿಬಿಯಲ್ಲಿ ಹಣ ಲಪಟಾಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಆಗಮಿಸಿ ತನಿಖೆ ಕೈಗೊಂಡಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶನಿವಾರ ಇಬ್ಬರು ಏಜೆಂಟರ್‌ನ್ನು ವಶಕ್ಕೆ ಪಡೆದು ವಿಚಾರಣೆಗೆ ಮುಂದಾಗಿದ್ದಾರೆ.ಇಲ್ಲಿಯ ಲಕಮನಹಳ್ಳಿಯಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಚೇರಿ ಮೇಲೆ ಶುಕ್ರವಾರ ದಾಳಿ ನಡೆಸಿದ್ದ ಅಧಿಕಾರಿಗಳ ತಂಡ ಸಾಕಷ್ಟು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ₹ 20 ಕೋಟಿ ಡಬಲ್ ಪೇಮೆಂಟ್ ವಿಚಾರವಾಗಿ ತನಿಖೆ ಆರಂಭಿಸಿದ್ದು, ಅಧಿಕಾರಿಗಳಿಗೆ ಸಾಕಷ್ಟು ದಾಖಲೆಗಳು ಲಭ್ಯವಾಗಿವೆ ಎಂಬ ಮಾಹಿತಿ ಇದೆ. ಈ ಪ್ರಕರಣದಲ್ಲಿ ಅಧಿಕಾರಿಗಳ ಜತೆಗೆ ಏಜೆಂಟರು ಕೂಡ ಭಾಗಿಯಾಗಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದ ರವಿ ಕುರಬೆಟ್ ಹಾಗೂ ನಗರದ ರಾಜು ಹೆಬ್ಬಳ್ಳಿ ಎಂಬಿಬ್ಬರು ಏಜೆಂಟರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಶನಿವಾರ ಕಚೇರಿಗೆ ರಜೆ ಇದ್ದರೂ ಸಂಬಂಧಿಸಿದ ಅಧಿಕಾರಿಗಳನ್ನು ಕಚೇರಿಗೆ ಕರೆಯಿಸಿ ತನಿಖೆ ಮುಂದುವರಿಸಿರುವ ಇಡಿ ಅಧಿಕಾರಿಗಳು ಎಲ್ಲ ಆಯಾಮಗಳಿಂದಲೂ ತನಿಖೆಗೆ ಮುಂದಾಗಿದ್ದಾರೆ. ಈ ಪ್ರಕರಣದಲ್ಲಿ ಅಧಿಕಾರಿಗಳಿಗೆ ಕುಮ್ಮಕ್ಕು ನೀಡಿ ಅನೇಕ ಏಜೆಂಟರು ಅಕ್ರಮದಲ್ಲಿ ಶಾಮೀಲಾಗಿದ್ದಾರೆ. ಏಜೆಂಟರ ಮಾತನ್ನು ಕೇಳಿ ಅಧಿಕಾರಿಗಳು ಕೂಡ ಹಣವನ್ನು ಹೊಡೆದಿದ್ದಾರೆ. ಅಲ್ಲದೇ ಒಂದೇ ಭೂಮಿಯನ್ನು ಎರಡು ಬಾರಿ ಸ್ವಾಧೀನಪಡಿಸಿಕೊಂಡಂತೆ ತೋರಿಸಿ ಮೊದಲಿಗೆ ₹ 20 ಕೋಟಿ ನಂತರದಲ್ಲಿ ₹ 40 ಕೋಟಿ ಗುಳುಂ ಮಾಡಲಾಗಿದೆ. ಇದರಲ್ಲಿ ಬ್ಯಾಂಕ್ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ ಎಂದು ಸರ್ಕಾರಕ್ಕೆ ದೂರು ಸಲ್ಲಿಸಿದ್ದೆ ಎಂದು ಹೋರಾಟಗಾರ ಬಸವರಾಜ ಕೊರವರ ಹೇಳಿದರು. ಅಲ್ಲದೇ ಮೃತಪಟ್ಟ ರೈತರ ಹೆಸರಿನಲ್ಲಿರುವ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡು, ಮೃತರ ಖಾತೆಗೆ ಹಣ ವರ್ಗಾವಣೆ ಮಾಡಿ, ಬಳಿಕ ಆ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದೇನು ಎಂದರು.ಪ್ರಸ್ತುತ ಇಡಿ ಅಧಿಕಾರಿಗಳು ಈ ಎಲ್ಲ ಅಕ್ರಮಗಳ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸುತ್ತಿದ್ದು, ಎಜೆಂಟರ ವಿಚಾರಣೆ ಬಳಿಕ ಮತ್ತಷ್ಟು ಮಾಹಿತಿ ದೊರೆಯುವ ಸಾಧ್ಯತೆಗಳಿವೆ. ಜತೆಗೆ ಸಾಕಷ್ಟು ದಾಖಲೆಗಳು ಲಭ್ಯವಾಗಿವೆ. ಅಲ್ಲದೇ ತಮಗೆ ಅನುಮಾನ ಬಂದಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕೂಡ ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.