ಸಾರಾಂಶ
ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆ ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯತಿ ಬಿಜೆಪಿ ಸದಸ್ಯನನ್ನು ಅಪಹರಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಸ್ಥಳೀಯ ಪಟ್ಟಣ ಪಂಚಾಯತಿ ಪುರಸಭೆ ಸದಸ್ಯರೊಬ್ಬರನ್ನು ಅಪಹರಿಸಿದ ಘಟನೆ ಗುರುವಾರ ರಾತ್ರಿ ನಡೆದಿದ್ದು, ಇದನ್ನು ಖಂಡಿಸಿ ಬಿಜೆಪಿ ಮುಖಂಡರು ಕಾರ್ಯಕರ್ತರು ಶುಕ್ರವಾರ ಬೆಳಗಾವಿ ಹಾಗೂ ಕಿತ್ತೂರುದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣ ಪಂಚಾಯತಿಯ 2ನೇ ವಾರ್ಡ್ ನ ಬಿಜೆಪಿ ಸದಸ್ಯ ನಾಗರಾಜ ಅಸುಂಡಿ ಅಪಹರಣಕ್ಕೊಳಗಾದ್ದು, ಪಟ್ಟಣದ ಚೌಕಿಮಠದ ಬಳಿ ನಿಂತಿದ್ದಾಗ ಸ್ಕಾರ್ಪಿಯೋ ಕಾರಿನಲ್ಲಿ ಬಂದ ಕೆಲವರು ಅಪಹರಣ ಮಾಡಿದ್ದಾರೆ ಎಂದು ಕಿತ್ತೂರು ಠಾಣೆಯಲ್ಲಿ ಪೋಷಕರು ದೂರು ನೀಡಿದ್ದಾರೆ.ಸೆ.3ರಂದು ಸ್ಥಳೀಯ ಪಟ್ಟಣ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ. ಒಟ್ಟು 18 ಸ್ಥಾನ ಹೊಂದಿರುವ ಪಪಂನಲ್ಲಿ 9 ಬಿಜೆಪಿ, 5 ಕಾಂಗ್ರೆಸ್ ಹಾಗೂ 4 ಪಕ್ಷೇತರ ಸದಸ್ಯರಿದ್ದಾರೆ. ಪಕ್ಷೇತರ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿರುವುದರಿಂದ ಬಿಜೆಪಿ ಹಾಗೂ ಕಾಂಗ್ರೆಸ್ ಸಮಬಲ ಸಾಧಿಸಿವೆ. ಅಧಿಕಾರ ಹಿಡಿಯಲು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಅಪಹರಣ ಘಟನೆ ನಡೆದಿದೆ ಎಂದು ಬಿಜೆಪಿ ಮುಖಂಡರು ದೂರಿದ್ದಾರೆ.
ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಮುಖಂಡರಾದ ಬಸವರಾಜ ಸಂಗೊಳ್ಳಿ, ಅಶೋಕ ಮಾಳಗಿ ಹಾಗೂ ಸುರೇಶ ಕಡೇಮನಿ ಎಂಬುವವರ ಮೇಲೆ ನಾಗರಾಜನ ತಂದೆ ಬಸವರಾಜ ಪ್ರಕರಣ ದಾಖಲಿಸಿದ್ದು, ಕಿತ್ತೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.