ಸಾರಾಂಶ
ಬೆಂಗಳೂರು : ಕೋವಿಡ್ ನಿರ್ವಹಣೆ ಸಂಬಂಧ 2020-22ರ ನಡುವೆ ಕಿದ್ವಾಯಿ ಆಸ್ಪತ್ರೆಯಲ್ಲೇ 264 ಕೋಟಿ ರು. ಭ್ರಷ್ಟಾಚಾರ ನಡೆದಿದೆ. ಜತೆಗೆ, ಕೋವಿಡ್ ಸಂಬಂಧಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಇಲಾಖೆಯು ವೆಚ್ಚ ಮಾಡಿರುವ 918.34 ಕೋಟಿ ರು.ಗಳಲ್ಲೂ ವ್ಯಾಪಕ ಅವ್ಯವಹಾರ ನಡೆದಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಮೈಕಲ್ ಡಿ. ಕುನ್ಹಾ ನೇತೃತ್ವದ ಆಯೋಗದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆಯೋಗವು ಮಧ್ಯಂತರ ವರದಿಯ ಐದನೇ ವಿಭಾಗದ 142 ಪುಟಗಳಲ್ಲಿ ಕಿದ್ವಾಯಿಯಲ್ಲಿ ನಡೆದಿರುವ ಅವ್ಯವಹಾರಗಳನ್ನು ವಿವರವಾಗಿ ಬಿಚ್ಚಿಟ್ಟಿದೆ.
ಆರ್‌ಟಿಪಿಸಿಆರ್ ಪರೀಕ್ಷೆಯಲ್ಲೂ ಅಕ್ರಮ:
ಕಿದ್ವಾಯಿ ಆಸ್ಪತ್ರೆಯಲ್ಲಿ ಕೊರೋನಾ ವೇಳೆ 264 ಕೋಟಿ ರು. ಭ್ರಷ್ಟಾಚಾರ ನಡೆದಿದೆ. ಕಿದ್ವಾಯಿ ಆಸ್ಪತ್ರೆಯಲ್ಲಿನ 264 ಕೋಟಿ ರು. ಅವ್ಯವಹಾರದಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ 125.46 ಕೋಟಿ ರು., ಸಿಬ್ಬಂದಿ ನೇಮಕಾತಿಯಲ್ಲಿ 74.58 ಕೋಟಿ ರು., ವೈದ್ಯಕೀಯ ಸಲಕರಣೆಗಳಲ್ಲಿ 31.07 ಕೋಟಿ ರು., ಔಷಧಗಳ ಖರೀದಿಯಲ್ಲಿ 33.24 ಕೋಟಿ ರು. ಅಕ್ರಮ ನಡೆಸಲಾಗಿದೆ ಎಂದು ತಿಳಿಸಲಾಗಿದೆ.
ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು:
ಇನ್ನು ಕೋವಿಡ್ ಸಂಬಂಧಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಇನ್ನೊಂದು ಇಲಾಖೆಯು 918.34 ಕೋಟಿ ರು. ವೆಚ್ಚದಲ್ಲಿ ನಡೆಸಿರುವ ವೈದ್ಯಕೀಯ ಉಪಕರಣಗಳು, ಸಿ.ಟಿ. ಸ್ಕ್ಯಾನರ್, ಬೇಬಿ ಇನ್‌ಕ್ಯುಬೇಟರ್, ಪಿಪಿಇ ಕಿಟ್‌ಗಳು, ಮಾಸ್ಕ್, ಐಸಿಯು ಘಟಕ ಹಾಗೂ ಮಾನಿಟರ್ ಯಂತ್ರಗಳ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆಸಿರುವುದಾಗಿ ತಿಳಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮಕ್ಕೆ ಶಿಫಾರಸು ಮಾಡಿದೆ.ಕೊರೋನಾ ವೈರಾಣು ಪತ್ತೆಗೆ ಯಾವುದೇ ರೀತಿಯಲ್ಲಿ ನೆರವಾಗದ 17 ಸಿಟಿ ಸ್ಕ್ಯಾನ್ ಯಂತ್ರಗಳನ್ನು ಖರೀದಿಸಲಾಗಿದೆ. ಇದಕ್ಕಾಗಿ 84 ಕೋಟಿ ರು. ವೆಚ್ಚ ಮಾಡಿದ್ದು, ಇದರಲ್ಲಿ 15 ಕೋಟಿ ರು. ಹಗರಣ ನಡೆಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ. ಇನ್ನು 181 ಕೋಟಿ ರು. ವೆಚ್ಚದಲ್ಲಿ ಮಲ್ಟಿಪಾರಾ ಮೀಟರ್ ಖರೀದಿ ಮಾಡಲಾಗಿದ್ದು, ಇದರಲ್ಲಿ 124 ಕೋಟಿ ರು. ಹಗರಣ ನಡೆಸಲಾಗಿದೆ ಎಂದು ವರದಿ ಹೇಳಿದೆ.
ಐಸಿಯುಗಳಲ್ಲಿ ರೋಗಿಗಳ ರಕ್ತದೊತ್ತಡ, ಹೃದಯಬಡಿತ, ರಕ್ತದಲ್ಲಿನ ಆಮ್ಲಜನಕ ಪತ್ತೆಗೆ ಮಲ್ಟಿಪಾರಾ ಮೀಟರ್ ಬಳಕೆ ಮಾಡಲಾಗುತ್ತದೆ. ಕೋವಿಡ್ ಅವಧಿಯಲ್ಲೇ ಬಿಬಿಎಂಪಿಯು 36 ಸಾವಿರ ರು. ವೆಚ್ಚದಲ್ಲಿ ಲೋ ಎಂಡ್ ಮಲ್ಟಿಪಾರಾ ಮೀಟರ್ ಖರೀದಿಸಿದೆ. ಹೀಗಿದ್ದರೂ ಇಲಾಖೆಯು ತಲಾ 1.5 ಲಕ್ಷ ರು. ಅಂದಾಜು ವೆಚ್ಚದಲ್ಲಿ ಖರೀದಿಸಲು ಟೆಂಡರ್ ಆಹ್ವಾನಿಸಿತ್ತು. ಈ ವೇಳೆ 1.5 ಲಕ್ಷ ರು.ಗೆ ಪೂರೈಸಲು ಸಿದ್ಧವಿದ್ದರೂ 2.85 ಲಕ್ಷ ರು. ಬಿಡ್ ಮಾಡಿದ್ದ ಕಂಪನಿಗೆ ಟೆಂಡರ್ ನೀಡಲಾಗಿತ್ತು.
355 ಪ್ಯಾರಾಮೀಟರ್ ಖರೀದಿಸಿ 200 ಮೀಟರ್ ಉಚಿತ ಎಂದು ಹೇಳಿತ್ತು. 555 ಯಂತ್ರಗಳನ್ನು 1.5 ಲಕ್ಷ ರು. ವೆಚ್ಚದಲ್ಲಿ ಖರೀದಿಸಿದ್ದರೂ 8.32 ಕೋಟಿ ರು. ಮಾತ್ರ ಆಗುತ್ತಿತ್ತು. 355 ಯಂತ್ರಗಳಿಗೆ 2.85 ಲಕ್ಷ ರು. ಪಾವತಿಸಿರುವುದರಿಂದ 10.11 ಕೋಟಿ ರು. ವೆಚ್ಚ ತಗುಲಿದೆ. ಮತ್ತೆ ಅನಧಿಕೃತವಾಗಿ 2.85 ಲಕ್ಷ ರು.ಗಳಂತೆ ಅದೇ ಎನ್‌ಕಾರ್ಟಾ ಕಂಪನಿಗೆ 142 ಮಾನಿಟರ್ ಪೂರೈಸಲು ಕಾರ್ಯಾದೇಶ ನೀಡಲಾಗಿದೆ. ಹೀಗೆ 2020ರಿಂದ 22ರ ವೇಳೆಗೆ 846 ಯಂತ್ರ ಖರೀದಿಸಿದ್ದು, ಇದರಲ್ಲಿ 675 ಅನಗತ್ಯವಾಗಿತ್ತು. ಹೀಗಾಗಿ ಇದರಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.
ಇನ್ನು ಹೈಎಂಡ್ ಪ್ಯಾರಾ ಮೀಟರ್‌ಗಳು 3.28 ರಿಂದ 3.5 ಲಕ್ಷ ರು.ಗಳಿಗೆ ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಇದೇ ಎನ್‌ಕಾರ್ಟಾ ಕಂಪನಿಯಿಂದ 5.35 ಲಕ್ಷ ರು. ವೆಚ್ಚದಲ್ಲಿ ಹೈಎಂಡ್ ಮೀಟರ್ ಖರೀದಿಸಲಾಗಿದೆ. ಅನಗತ್ಯವಾಗಿ 96 ಕೋಟಿ ರು. ವೆಚ್ಚ ಮಾಡಲಾಗಿದೆ. 3,123 ಮೀಟರ್ ಖರೀದಿಸಿದ್ದು, 1727 ಅನಗತ್ಯವಾಗಿತ್ತು ಎಂದು ವರದಿಯಲ್ಲಿ ತಿಳಿಸಿದೆ.