ಕನ್ನಡಪ್ರಭ ವಾರ್ತೆ ಕಿಕ್ಕೇರಿ
ವಿಶ್ವದಲ್ಲಿಯೇ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ ದೇಶ ಬ್ರಿಟಿಷರಿಂದ ಮುಕ್ತರಾಗಲು ಪ್ರಾಣತೆತ್ತ ಸಹಸ್ರಾರು ಮಹಾನೀಯರ ಜೀವನ ಚರಿತ್ರೆಯನ್ನು ಮಕ್ಕಳಿಗೆ ತುಂಬುವ ಕೆಲಸ ಶಿಕ್ಷಕರು, ಪೋಷಕರಿಂದ ಮೊದಲು ಆಗಬೇಕಿದೆ ಎಂದು ಕೆಪಿಎಸ್ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ ಹೇಳಿದರು.ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ರಾಷ್ಟ್ರೀಯ ಹಬ್ಬಗಳ ಸೇವಾ ಸಮಿತಿಯೊಂದಿಗೆ ವಿವಿಧ ಶಾಲೆಗಳ ವತಿಯಿಂದ ಹಮ್ಮಿಕೊಂಡಿದ್ದ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಮಾತನಾಡಿ, ದೇಶಕ್ಕಾಗಿ ಪ್ರಾಣತೆತ್ತ ಮಹಾನೀಯರ ಆತ್ಮಶಾಂತಿಗಾಗಿ ಮೊದಲು ಯುವಕರು ದುಷ್ಚಟಗಳಿಂದ ಮುಕ್ತರಾಗಬೇಕಿದೆ ಎಂದರು.
ಪ್ರಾಂಶುಪಾಲ ಸಹದೇವು ಮಾತನಾಡಿ, ಗಾಂಧೀಜಿ, ಸುಭಾಷ್‌ಚಂದ್ರಬೋಸ್, ಸಂಗೊಳ್ಳಿ ರಾಯಣ್ಣರಂತಹ ಮಾಹಾತ್ಮರ ಬಲಿದಾನದಿಂದ ನಾವಿಂದು ಸ್ವತಂತ್ರರಾಗಿ ಬದುಕುವ ಹಕ್ಕು ಲಭಿಸಿದೆ ಎಂದರು.ನಿವೃತ್ತ ಅಭಿಯಂತರ ಅಯ್ಯನಕೊಪ್ಪಲು ಸತ್ಯನಾರಾಯಣ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಬಡಮಕ್ಕಳ ಭವಿಷ್ಯವಿದೆ. ಎಸ್ಸೆಸ್ಸೆಲ್ಸಿ ಓದಿದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವುದಾಗಿ ಉತ್ತೇಜಿಸಿದರು. ಕೆಪಿಎಸ್ ಶಾಲಾ ವಿದ್ಯಾರ್ಥಿಗಳು ಕನ್ನಡ, ಇಂಗ್ಲಿಷ್, ಹಿಂದಿಯಲ್ಲಿ ಸ್ವಾತಂತ್ರ್ಯೋತ್ಸವ ಕುರಿತು ಮಾತನಾಡಿದರು. ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ನೃತ್ಯ ಪ್ರದರ್ಶನ ಮೂಡಿಬಂತು.
ಇಲ್ಲಿನ ಪ್ರಮುಖ ಬೀದಿಯಲ್ಲಿ ವಿವಿಧ ಶಾಲೆ ಮಕ್ಕಳು ದೇಶಕ್ಕಾಗಿ ಪ್ರಾಣತೆತ್ತ ಮಹಾನೀಯರ ವೇಷಭೂಷಣ ಧರಿಸಿದ ಮಕ್ಕಳೊಂದಿಗೆ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ಮಹಾನೀಯರ ಹೆಸರನ್ನುಘೋಷಣೆ ಕೂಗುತ್ತ ಮೆರವಣಿಗೆಯಲ್ಲಿ ಸಾಗಿದರು.
ವಿಪ್ರ ಬಾಂಧವ ಸೇವಾ ಸಮತಿಯಿಂದ ಎಸ್ಸೆಸ್ಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸ್ಪಂದನಾ ಪೌಂಢೇಷನ್, ಸ್ವಾಮಿ ವಿವೇಕಾನಂದ ಸ್ವಯಂ ಸೇವಾ ಪ್ರತಿಷ್ಠಾನದಿಂದ ಹಣ್ಣಿನ ಗಿಡ ವಿತರಿಸಲಾಯಿತು.
ಈ ವೇಳೆ ಎಸ್‌ಡಿಎಂಸಿ ಸದಸ್ಯ ಮಧು, ಕಾಂತರಾಜು, ಕಾಯಿ ಮಂಜೇಗೌಡ, ಎನ್‌ಸಿಸಿ ಘಟಕಾಧಿಕಾರಿ ಎಸ್.ಎಂ. ಬಸವರಾಜು, ಎನ್‌ಎಸ್‌ಎಸ್ ಘಟಕಾಧಿಕಾರಿ ಕುಮಾರಸ್ವಾಮಿ, ಮುಖ್ಯಶಿಕ್ಷಕಿ ಮಮತಾ, ನಂಜುಂಡಯ್ಯ, ಶ್ರೀಕಾಂತ್, ಮುಖಂಡರಾದ ವೆಂಕಟೇಶ್, ಮಹಬಲಶರ್ಮ, ಅನಂತಸ್ವಾಮಿ, ಕೆ.ಎಸ್. ಪರಮೇಶ್ವರಯ್ಯ, ವಿವಿಧ ಶಾಲಾ ಶಿಕ್ಷಕ ಸಮೂಹದವರು ಇದ್ದರು.