ಸಾರಾಂಶ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಗ್ಯಾರಂಟಿ ಯೋಜನೆಯಿಂದ 14ಕ್ಕೂ ಅಧಿಕ ಅಥವಾ 20 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದಿದ್ದರು.
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಗ್ಯಾರಂಟಿ ಯೋಜನೆಯಿಂದ 14ಕ್ಕೂ ಅಧಿಕ ಅಥವಾ 20 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದಿದ್ದರು. ಆದರೆ ಗ್ಯಾರಂಟಿಗಳಿಗೆ ರಾಜ್ಯದಲ್ಲಿ ಜನ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ ಎನ್ನುವುದು ಚುನಾವಣೆ ಫಲಿತಾಂಶದಿಂದ ಸ್ಪಷ್ಟವಾಗುತ್ತದೆ ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಲೇವಡಿ ಮಾಡಿದರು.ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಭಾರತೀಯ ಜನತಾ ಪಕ್ಷದ ಬಾಗಲಕೋಟೆ ಮತಕ್ಷೇತ್ರದ ಉಮೇದುವಾರರಾಗಿ ಉತ್ತಮ ಮತ ಪಡೆದು ಪಿ.ಸಿ.ಗದ್ದಿಗೌಡರ ಆಯ್ಕೆಯಾಗಿದ್ದು, ನಾನು ಉಸ್ತುವಾರಿಯಾಗಿ ಕೆಲಸ ಮಾಡಿದ ವಿಜಯಪುರ ಕ್ಷೇತ್ರ ಕೂಡ ಹಿಂದಿನ ಸಂಸದರು ಮತ್ತು ಮಾಜಿ ಸಚಿವ ರಮೇಶ ಜಿಗಜೀವಣಗಿ ಕೂಡ ಗೆದ್ದಿರುವುದು ಹರ್ಷ ತಂದಿದೆ ಎಂದರು.ಎರಡೂ ಕ್ಷೇತ್ರಗಳಲ್ಲಿ ನಾನು ಓಡಾಡಿದ್ದೇನೆ. ಈ ಗೆಲುವಿಗೆ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಹಗಲಿರುಳು ಶ್ರಮಿಸಿದ್ದಾರೆ. ನಮ್ಮ ಗೆಲುವಿಗೆ ಬಾಗಲಕೋಟೆ ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ ಹಾಗೂ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಭಾಗಕ್ಕೆ ಬಂದು ಪ್ರಚಾರ ಮಾಡಿ ಪಿ.ಸಿ.ಗದ್ದಿಗೌಡರ ಮತ್ತು ರಮೇಶ ಜಿಗಜಿಣಗಿ ಗೆಲುವಿಗೆ ಕಾರಣರಾಗಿದ್ದಾರೆ.
ದೇಶದಲ್ಲಿಯೂ ಎನ್.ಡಿ.ಎ. ಅಭ್ಯರ್ಥಿಗಳ ಗೆಲುವಿನ ಸಂಖ್ಯೆ ಹೆಚ್ಚಿದೆ. ಪ್ರತಿಯೊಬ್ಬ ಸದಸ್ಯರು ಪಕ್ಷದೊಂದಿಗೆ ಒಗ್ಗಟ್ಟಿನಿಂದ ಇದ್ದಾರೆ. ಹೀಗಾಗಿ ಎನ್.ಡಿ.ಎ. ಈ ಬಾರಿಯೂ ಸರ್ಕಾರ ರಚನೆ ಮಾಡಲಿದೆ. 3 ನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಆಯ್ಕೆಯಾಗಿ ದೇಶವನ್ನು ಉತ್ತಮ ಸ್ಥಿತಿಗೆ ಒಯ್ಯುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.