ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಅಕ್ರಮದಲ್ಲಿ ತೊಡಗಿರುವ ತಮ್ಮ ಹಿಂಬಾಲಕರಿಗೆ ಬೆಂಗಾವಲಾಗಿರುವ ಮಾಜಿ ಶಾಸಕ ಕಿಮ್ಮನೆ ರತ್ನಾಕರ್, ಕ್ಷೇತ್ರದಲ್ಲಿ ಮಾಡಿರುವ ನನ್ನ ಸಾಧನೆಯಿಂದ ಹತಾಶರಾಗಿದ್ದು, ನನ್ನನ್ನು ಮುಗಿಸಲು ಸುಪಾರಿ ನೀಡುವುದಕ್ಕೂ ಸಿದ್ಧರಾಗಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಗಂಭೀರ ಆರೋಪ ಮಾಡಿದರು.

ಮಾಜಿ ಶಾಸಕ ನನ್ನ ವಿರುದ್ಧ ನಿರಂತರವಾಗಿ ಇಲ್ಲಸಲ್ಲದ ಟೀಕೆ ಮಾಡುತ್ತಿದ್ದರೂ ಕ್ಷೇತ್ರದ ಘನತೆಯ ದೃಷ್ಟಿಯಿಂದ ಈವರೆಗೂ ಮೌನವಾಗಿದ್ದೆ. ಇಂದಿಲ್ಲಿ ಈ ಹೇಳಿಕೆ ನೀಡುತ್ತಿರುವ ಬಗ್ಗೆ ಕ್ಷೇತ್ರದ ಕ್ಷಮೆ ಕೇಳುತ್ತೇನೆ. ನನ್ನ ಯಶಸನ್ನು ಸಹಿಸದೇ ನನ್ನನ್ನು ಮುಗಿಸುವುದಕ್ಕೂ ಸಿದ್ಧರಾಗಿರುವ ಕಿಮ್ಮನೆ ವಿರುದ್ಧ ಕೋರ್ಟಿಗೂ ಹೋಗುತ್ತೇನೆ ಎಂದು ಮಂಗಳವಾರ ಪಟ್ಟಣದ ಪಕ್ಷದ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನನ್ನ ಶಾಸಕತ್ವದ ಅವಧಿಯಲ್ಲಿ ಆಗಿರುವ ಸಾಧನೆಯನ್ನು ಜೀರ್ಣಿಸಿಕೊಳ್ಳಲಾಗದೇ ಸುಳ್ಳು ಆರೋಪ ಮಾಡುತ್ತಿರುವ ಅವರ ಹತಾಶ ಸ್ಥಿತಿಯನ್ನು ಕಂಡು ಕನಿಕರವಾಗುತ್ತಿದೆ. ಸರ್ಕಾರಿ ಭೂಮಿ, ದೇವಸ್ಥಾನಗಳ ಹುಂಡಿ ಹಣ, ಶಾಲಾ ಕಾಲೇಜುಗಳ ನಾಟಾ, ನಕಲಿ ದಾಖಲೆ ಸೃಷ್ಟಿಸಿ ಖಾಸಗಿಯವರ ನಿವೇಶನಗಳನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವ ತಮ್ಮ ಪಟಾಲಾಂಗಳಿಗೆ ಬೆಂಗಾವಲಾಗಿ ನಿಂತಿದ್ದಾರೆ ಎಂದರು.

ಕೊಟ್ಟ ಕುದುರೆ ಏರಲಾಗದವ:


ಕಾಂಗ್ರೆಸ್ ಮುಖಂಡ ಡಿ.ಎಸ್. ವಿಶ್ವನಾಥ ಶೆಟ್ಟಿ ಬಗ್ಗೆ ತೀಕ್ಷ್ಣವಾಗಿ ಆರೋಪಿಸಿದ ಆರಗ, ರಾಮೇಶ್ವರ ದೇವಸ್ಥಾನದ ನಾಟಾ, ಅನಂತಮೂರ್ತಿ ಪ್ರೌಢಶಾಲೆಯ ಹಲಸಿನ ಮರದ ಹಗರಣದಲ್ಲಿ ರಕ್ಷಣೆ ನೀಡಿದ್ದ ಕಿಮ್ಮನೆ ಬಗರ್ ಹುಕುಂ ಸಮಿತಿಗೆ ಶಿಫಾರಸು ಮಾಡಿದ್ದಾರೆ. ಕಿಮ್ಮನೆ/ ವಿಶ್ವನಾಥ ಶೆಟ್ಟರಲ್ಲಿ ಗುರು ಯಾರು? ಶಿಷ್ಯ ಯಾರು? ಎಂದೂ ಲೇವಡಿ ಮಾಡಿ, ಸದಾ ಗಾಂಧಿ ಮಂತ್ರವನ್ನು ಜಪಿಸುವ ಅವರ ನಿಜವಾದ ಮುಖವಾಡವನ್ನು ಜನರಿಗೆ ತೋರಿಸಬೇಕಿದೆ ಎಂದೂ ಹೇಳಿದರು.

ಡಿ.ಕೆ .ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಆದ ಮೇಲೆ ಪೂರ್ಣ ಆತ್ಮ ವಿಶ್ವಾಸವನ್ನು ಕಳೆದುಕೊಂಡಿದ್ದು ಮುಂಬರುವ ಚುನಾವಣೆಗೆ ಅವಕಾಶ ಸಿಗುವ ಸಾಧ್ಯತೆಯೂ ಇಲ್ಲ. ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಪ್ರಾಣ ಕಳೆದುಕೊಂಡವರಿದ್ದಾರೆ. ಕೊಟ್ಟ ಕುದುರೆ ಏರಲಾಗದವ ಎಂಬುದನ್ನೂ ಪ್ರಸ್ತುತ ಪಡಿಸಿರುವ ಕಿಮ್ಮನೆಗೆ ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡರು ಮಾಡುತ್ತಿರುವ ಕೆಲಸದ ಬಗ್ಗೆಯೂ ಕಿರಿಕಿರಿಯಾಗುತ್ತಿದೆ ಎಂದು ಹೇಳಿದರು.

ಬಗಗ್‌ಹುಕುಂ ಮಂಜೂರಾತಿಯಲ್ಲಿ ಪಕ್ಷಭೇದ ಮಾಡದೇ ಎಲ್ಲ ಜಾತಿ ಜನಾಂಗ ಮತ್ತು ಪಕ್ಷದವರಿಗೂ ಸಹಾಯ ಮಾಡಿದ್ದೇನೆ. ಕಿಮ್ಮನೆ ಅಧಿಕಾರವಧಿಯಲ್ಲಿ ಬಡವರ ದಾಖಲೆಯನ್ನು ತಿದ್ದಿ 33 ಎಕರೆ ಜಾಗವನ್ನು 11 ಮಂದಿ ಬೇನಾಮಿ ವ್ಯಕ್ತಿಗಳ ಹೆಸರಿನಲ್ಲಿ ಪ್ರಭಾವಿಗಳಿಗೆ ಮಂಜೂರು ಮಾಡಿದ್ದಾರೆ. ಸ್ವತಃ ಅರಣ್ಯಭೂಮಿಯನ್ನು ಒಳಹಾಕಿ 20 ಎಕರೆ ಅಡಕೆ ತೋಟವನ್ನು ಮಾಡಿದ್ದಾರೆ. ನನ್ನ ವಿರುದ್ದ ಪಾದಯಾತ್ರೆ ಮಾಡುವ ಬದಲಿಗೆ ಕಿಮ್ಮನೆ ತಮ್ಮ ಹಿಂಬಾಲಕರು ಅಕ್ರಮ ಮಾಡಿರುವ ಕೆಳಕೆರೆ ಮತ್ತು ಮೇಗರವಳ್ಳಿಯಿಂದ ಪಾದಯಾತ್ರೆ ಮಾಡಲಿ ಎಂದೂ ಸವಾಲು ಹಾಕಿದರು.

ಭಿಂತಳ ಗ್ರಾಮದಲ್ಲ್ಲಿ ನನ್ನ ಮಗ ಕೊಂಡಿರುವ ಜಮೀನು ಆತನ ದುಡಿಮೆಯ ಹಣದಿಂದ. ಈ ಗ್ರಾಮದ ಜನರ ಕೋರಿಕೆಯಂತೆ ರಸ್ತೆ ನಿರ್ಮಾಣ ಮಾಡಲಾಗಿದೆ. ಕ್ರಿಮಿನಲ್ ಹಿಂಬಾಲಕರಿಗೆ ಬೆಂಗಾವಲಾಗಿ ತಾನು ಪ್ರಾಮಾಣಿಕ ಎಂದು ಪ್ರಚಾರ ಮಾಡಿಕೊಳ್ಳುತ್ತಿರುವ ಆತ್ಮರತಿ ಇವರದ್ದು. ಇವರ ಬುದ್ಧಿ ಹಿಡಿಸದ ಕಾರಣ ಮಗನೂ ಇವರ ಜೊತೆ ಇಲ್ಲಾ. ಬೇರೆಯವರ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಮಾನಸಿಕ ಹಿಡಿತವನ್ನು ಕಳೆದುಕೊಂಡಿರುವ ಇವರ ಸ್ಥಿತಿ ಅಪಾಯಕಾರಿಯಾಗಿದ್ದು ವೈದ್ಯರ ಚಿಕಿತ್ಸೆ ಅಗತ್ಯವಾಗಿದೆ ಎಂದು ಟೀಕಿಸಿದರು.

ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ಕೆ.ನಾಗರಾಜ ಶೆಟ್ಟಿ, ಶಂಕರನಾರಾಯಣ ಯತಾಳ್, ಸಿ.ಬಿ.ಈಶ್ವರ್, ಅಶೋಕ ಮೂರ್ತಿ ಬೇಗುವಳ್ಳಿ ಸತೀಶ್, ಸುಮಾ ರಾಮಚಂದ್ರ, ಸಂದೇಶ್ ಜವಳಿ ಮುಂತಾದವರು ಇದ್ದರು.