ಬಿಜೆಪಿ ವಿರುದ್ಧ ಕಿಮ್ಮನೆ ರತ್ನಾಕರ್‌ ಆರೋಪ ನಿರಾಧಾರ

| Published : Sep 17 2024, 12:55 AM IST

ಬಿಜೆಪಿ ವಿರುದ್ಧ ಕಿಮ್ಮನೆ ರತ್ನಾಕರ್‌ ಆರೋಪ ನಿರಾಧಾರ
Share this Article
  • FB
  • TW
  • Linkdin
  • Email

ಸಾರಾಂಶ

ತೀರ್ಥಹಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ನಾಗಮಂಗಲದಲ್ಲಿ ನಡೆದಿರುವ ಗಲಭೆ ಪ್ರಕರಣದ ಹಿಂದೆ ಬಿಜೆಪಿ ಕೈವಾಡವಿದೆ ಎಂಬ ಕಾಂಗ್ರೆಸ್ ವಕ್ತಾರ ಕಿಮ್ಮನೆ ರತ್ನಾಕರ್‌ ಆರೋಪ ನಿರಾಧಾರವಾಗಿದೆ. ಹಿರಿಯ ರಾಜಕಾರಣಿಯಾಗಿ ಯುವಕರಿಗೆ ಮಾರ್ಗದರ್ಶನ ಮಾಡುವ ಬದಲಿಗೆ ತಮ್ಮ ರಾಜಕೀಯ ಅಭದ್ರತೆಯ ಕಾರಣದಿಂದಾಗಿ ವಿನಾ ಕಾರಣ ಬಿಜೆಪಿ ಮತ್ತು ಸ್ಥಳೀಯ ಶಾಸಕರ ವಿರುದ್ಧ ಕ್ಷುಲ್ಲಕ ಆರೋಪ ಮಾಡುತ್ತಿದ್ದಾರೆ ಎಂದು ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್ ದೂರಿದ್ದಾರೆ.

ಸೋಮವಾರ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಆರ್.ಎಂ.ಮಂಜುನಾಥಗೌಡರು ಹಿಡಿತ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಕಿಮ್ಮನೆ ರತ್ನಾಕರ್‌ ಅವರಿಗೆ ರಾಜಕೀಯ ಅಭದ್ರತೆ ಕಾಡುತ್ತಿದೆ. ಹೀಗಾಗಿ ಈ ಕ್ಷೇತ್ರದ ಹಿತಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಶಾಸಕ ಆರಗ ಜ್ಞಾನೇಂದ್ರರ ವಿರುದ್ಧ ಇಲ್ಲದ ಆರೋಪ ಮಾಡುತ್ತಿದ್ದಾರೆ. ಅವರದೇ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದು ಪಿಎಸ್‍ಐ ಹಗರಣ ಸೇರಿದಂತೆ ಎಲ್ಲವನ್ನೂ ತನಿಖೆ ಮಾಡಿಸಬೇಕು. ನಂದಿತಾ ಪ್ರಕರಣವನ್ನೂ ಸಿಬಿಐಗೆ ವಹಿಸುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರಲಿ. ಇದೇ ರೀತಿ ಆರೋಪ ಮುಂದುವರೆಸಿದರೆ ಅವರ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶಾಸಕ ಆರಗ ಜ್ಞಾನೇಂದ್ರರ ಅವಧಿಯಲ್ಲಿ ನಡೆದಿರುವ ಯಾವ ಕಾಮಗಾರಿಗಳೂ ಕಳಪೆಯಾಗಿಲ್ಲಾ. ಕೇವಲ ದುರುದ್ದೇಶದಿಂದ ಆರೋಪ ಮಾಡಲಾಗುತ್ತಿದೆ. ಅನುಕಂಪದ ಆಧಾರದಲ್ಲಿ ಗೆದ್ದು 10 ವರ್ಷ ಅಧಿಕಾರದಲ್ಲಿದ್ದು ಮಾಡಿದ ಸಾಧನೆಯ ಬಗ್ಗೆ ವಿವರ ನೀಡಲಿ ಈ ಬಗ್ಗೆ ಚರ್ಚೆಗೂ ಸಿದ್ಧ. ಸಚಿವರಾಗಿ ಆಯ್ಕೆಯಾಗಿದ್ದರೂ ಅದಕ್ಷತೆಯ ಆಧಾರದಲ್ಲಿ ಇವರನ್ನು ಅಧಿಕಾರದಿಂದ ಕೆಳಗಿಳಿಸಲಾಗಿತ್ತು ಎಂದೂ ಲೇವಡಿ ಮಾಡಿದರು.

ಮಹಾತ್ಮ ಗಾಂಧಿಯವರ ಬಗ್ಗೆ ಬಿಜೆಪಿಯವರಾದ ನಾವುಗಳು ಭಾರತ ವಿಭಜನೆ, ಮುಸ್ಲೀಮರ ತುಷ್ಠೀಕರಣ ಮತ್ತು ನೆಹರೂರವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿರುವ ಬಗ್ಗೆ ವಿರೋಧ ಅಭಿಪ್ರಾಯವನ್ನು ಹೊಂದಿದ್ದೇವೆ. ಪದೇ ಪದೇ ಗಾಂಧಿ, ಅಂಬೇಡ್ಕರ್ ಬಗ್ಗೆ ಮಾತನಾಡುವ ಕಿಮ್ಮನೆ ಗಾಂಧಿಯವರ ಆದರ್ಶವನ್ನು ಮೈಗೂಡಿಸಿಕೊಂಡಿದ್ದಾರೆಯೇ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳಲಿ. ಹಿಂದುತ್ವದ ಆಧಾರದಲ್ಲಿಯೇ ಪಕ್ಷ ಸಂಘಟನೆ ಮಾಡುತ್ತಿದ್ದೇವೆ ಎಂದೂ ಹೇಳಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಜಿಪಂ ಮಾಜಿ ಅಧ್ಯಕ್ಷ ಆಶೋಕಮೂರ್ತಿ, ಪಪಂ ಸದಸ್ಯರಾದ ಸಂದೇಶ್ ಜವಳಿ ಹಾಗೂ ಸೊಪ್ಪುಗುಡ್ಡೆ ರಾಘವೇಂದ್ರ, ತಾಪಂ ಮಾಜಿ ಸದಸ್ಯ ಪ್ರಶಾಂತ್ ಕುಕ್ಕೆ ಮತ್ತು ಸಂತೋಷ್ ದೇವಾಡಿಗ ಇದ್ದರು.