ಹುಬ್ಬಳ್ಳಿ:

ದೂರು ಕೊಟ್ಟರೆ ಪರಿಣಾಮ ನೆಟ್ಟಗಿರಲ್ಲ..!

ಶಿಕ್ಷಕರಿಗೆ ₹ 200 ಕೋಟಿ ದೋಖಾ ಮಾಡಿದ ಹಗರಣದ ಕಿಂಗ್‌ ಪಿನ್‌ ಎನ್ನಲಾದ ಶಿಕ್ಷಣ ಇಲಾಖೆಯ ನೌಕರ ವಂಚನೆಗೆ ಒಳಗಾದ ಶಿಕ್ಷಕಿಯರಿಗೆ ಹಾಕಿದ ಧಮ್ಕಿ.

ಕನ್ನಡಪ್ರಭ ಈ ಹಗರಣ ಬಯಲಿಗೆಳೆದ ಬಳಿಕ ವಂಚನೆಗೆ ಒಳಗಾದ ಶಿಕ್ಷಕ/ ಶಿಕ್ಷಕಿಯರು ಧೈರ್ಯಮಾಡಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಬಕ್ರೀದ್ ಹಿನ್ನಲೆಯಲ್ಲಿ ಹುಬ್ಬಳ್ಳಿ ಕಸಬಾಪೇಟೆ ಪೊಲೀಸರು ದೂರು ಪಡೆಯಲು ಹಿಂದೇಟು ಹಾಕಿ ನಾಳೆ ಬನ್ನಿ ಎಂದು ಶಿಕ್ಷಕರಿಗೆ ಹೇಳಿ ಕಳಿಸಿದ್ದಾರೆ.

ಈ ವಿಷಯ ತಿಳಿದ ಹಗರಣದ ಕಿಂಗ್‌ಪಿನ್‌ ಆ ಶಿಕ್ಷಕಿಯರ ಮಾಹಿತಿ ಪಡೆದು ದೂರು ಕೊಟ್ಟರೆ ಪರಿಣಾಮ ನೆಟ್ಟಗಿರಲ್ಲ ಎಂದು ಧಮ್ಕಿ ಹಾಕಿದ್ದಾನಂತೆ. ಇದೀಗ ಅವರು ತಾವು ಹಣ ಕಳೆದುಕೊಂಡ ವಿಷಯವೂ ಸೇರಿದಂತೆ ಈತನ ವಿರುದ್ಧ ವಂಚನೆ ಹಾಗೂ ಧಮ್ಕಿ (ಕಾಲ್‌ ರೆಕಾರ್ವಿಂಗ್ ಸಮೇತ) ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.


ಇದು ₹200 ಕೋಟಿ ಹಗರಣ:

ಹೆಚ್ಚಿನ ಬಡ್ಡಿ ಕೊಡುತ್ತೇವೆ ಎಂದು ಶಿಕ್ಷಕರನ್ನು ನಂಬಿಸಿ, ಹುಬ್ಬಳ್ಳಿ ಮೂವರು ಶಿಕ್ಷಕರು ಏಜೆಂಟರಂತೆ ಕೆಲಸ ಮಾಡಿ ₹ 200ಕ್ಕೂ ಅಧಿಕ ಕೋಟಿ ಹೂಡಿಕೆ ಮಾಡಿಸಿದ ಪ್ರಕರಣದವಿದು. ಇಲ್ಲಿನ ಮೂವರು ಶಿಕ್ಷಕರು 2021ರಿಂದ ಅಕ್ಷರಶಃ ತಮ್ಮ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಬರೀ ಶಿಕ್ಷಕರಿಗೆ ಬಣ್ಣ-ಬಣ್ಣದ ಮಾತುಗಳಿಂದ ನಂಬಿಸಿ ಹೂಡಿಕೆ ಮಾಡಿಸುವ ಕೆಲಸದಲ್ಲೇ ನಿರತರಾಗಿದ್ದರು.

ಹುಬ್ಬಳ್ಳಿ ಕೇಂದ್ರವನ್ನಾಗಿ ಇಟ್ಟುಕೊಂಡು ಉತ್ತರ ಕರ್ನಾಟಕದ ಜಿಲ್ಲೆಗಳಷ್ಟೇ ಅಲ್ಲ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ಶಿಕ್ಷಕರನ್ನು ಹೂಡಿಕೆ ಮಾಡಿಸಲಾಗಿತ್ತು. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತೇವೆ. 3 ವರ್ಷದಲ್ಲೇ ದುಪ್ಪಟ್ಟು ಹಣ ಪಡೆಯಬಹುದು ಎಂದು ನಂಬಿಸಲಾಗಿತ್ತು.ಚಿಕ್ಕೋಡಿ ಮೂಲದ ವ್ಯಕ್ತಿ ಹಾಗೂ ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ವ್ಯಕ್ತಿಗಳಿಗೆ ಈ ದುಡ್ಡು ಹಾಕಿಸಲಾಗಿತ್ತು. ದಾಖಲೆಗಳ ಪ್ರಕಾರ 185ಕ್ಕೂ ಹೆಚ್ಚು ಜನ ಶಿಕ್ಷಕರು ಇದರಲ್ಲಿ ಹಣ ತೊಡಗಿಸಿದ್ದು, ಒಬ್ಬೊಬ್ಬರು ₹ 10, ₹ 15, ₹ 30, ₹ 50 ಲಕ್ಷ ವರೆಗೂ ಹೂಡಿದ್ದಾರೆ. ಇದರ ಮೊತ್ತ ₹ 200 ಕೋಟಿಗೂ ಅಧಿಕವಾಗಿದೆ. ಆರಂಭದಲ್ಲಿ ಬೆರಳೆಣಿಕೆಯಷ್ಟು ಶಿಕ್ಷಕರಿಗೆ ಹೆಚ್ಚಿನ ಬಡ್ಡಿ ನೀಡಿದಂತೆ ಮಾಡಿ ಆಮೇಲೆ ಕೈ ಎತ್ತಿದ್ದಾರೆ. ಶಿಕ್ಷಕರೇ ಸಾಕಷ್ಟು ಸಲ ಪ್ರಯತ್ನಿಸಿದ್ದರೂ ಪ್ರಯೋಜನವಾಗಿರಲಿಲ್ಲ.ಇತ್ತೀಚಿಗೆ ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣವರ ಪ್ರಕರಣ ಹೊರಬೀಳುತ್ತಿದ್ದಂತೆ ಶಿಕ್ಷಕ ವಲಯಕ್ಕೆ ವಂಚಿಸಿದ ಪ್ರಕರಣ ಕೂಡ ಮತ್ತೆ ಚರ್ಚೆಗೆ ಬಂದಿತ್ತು. ಕನ್ನಡಪ್ರಭಕ್ಕೆ ದಾಖಲೆಗಳು ಲಭ್ಯವಾದ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ದೋಖಾ ಎಂಬ ವರದಿಯನ್ನೂ ಪ್ರಕಟಿಸಿತ್ತು. ಇದರಿಂದ ಧೈರ್ಯ ತಂದುಕೊಂಡು ಕಳೆದ ವಾರ (ಬಕ್ರೀದ್‌ ಹಿಂದಿನ ದಿನ- ಮೇ 27))ದಂದು ಇಲ್ಲಿನ ಕಸಬಾ ಠಾಣೆಗೆ ಕೋಲಾರದ ಕೆಲ ಶಿಕ್ಷಕರು ದೂರು ಕೊಡಲು ಬಂದಿದ್ದರು. ಆಗ ಪೊಲೀಸರು, ಬಕ್ರೀದ್‌ ನೆಪ ಮಾಡಿಕೊಂಡು ಪ್ರಕರಣ ದಾಖಲಿಸಿಕೊಳ್ಳದೇ ಮುಂದಿನ ವಾರ ಬನ್ನಿ ಎಂದು ಸಾಗ ಹಾಕಿದ್ದರು.