ಲೇಖನ: ಭುವನ ಪ್ರಸಾದ ಹೆಗ್ಡೆ1915ನೇ ಇಸವಿಯ ಜೂನ್ 8ರಂದು ಜನಿಸಿ, ತಮ್ಮ 9ನೇ ವರ್ಷ ಪ್ರಾಯದಲ್ಲಿ ಪ್ರಥಮ ಕವಿತೆ ರಚಿಸಿದ ಕಯ್ಯಾರ ಕಿಞ್ಞಣ್ಣ ರೈ ಅವರದು ವಯಸ್ಸಿಗೆ ಮೀರಿದ ಬಾಲಪ್ರತಿಭೆ.

“ಕನ್ನಡ ತುಳು ಭಾಷೆಲೆಡ್ ಬರೆಯೆ, ಕನ್ನಡ ಕವಿತೆ ಎನ್ನ 9ನೇ ವರ್ಷಡೇ ಬರೆಯರೆ ಸುರುಮಲ್‌ದಿತ್ತೆ. ತುಳು ಕವಿತೆ 1930ನೇ ಇಸವಿಡೇ ಬರೆಯೆ” ಎಂದು ಅವರು ''''''''ಎನ್ನಪ್ಪೆ ತುಳುವಪ್ಪೆ'''''''' ತುಳುಕವಿತೆಗಳ ಮುನ್ನುಡಿಯಲ್ಲಿ ಉಲ್ಲೇಖಿಸಿದ್ದಾರೆ.1933ನೇ ಇಸವಿ. ಪುತ್ತೂರಿನ ದಸರಾ ಮಹೋತ್ಸವ ಶಿವರಾಮ ಕಾರಂತರ ಮುಂದಾಳತ್ವದಲ್ಲಿ ನಡೆಯುತ್ತಿದ್ದ ಕಾಲ. 18 ವರ್ಷ ಪ್ರಾಯದ ಬಾಲಕ ಕಯ್ಯಾರರು ಅಂಜುತ್ತಾ ಕಾರಂತರಿಂದ ಸಮ್ಮತಿ ಪಡೆದು ಆಗ ತಾನೆ ಬರೆದ ‘ಊರ್ಮಿಳಾ’ ಕವಿತೆಯನ್ನು ಪ್ರಸ್ತುತಪಡಿಸಿದರು.“ಎಣೆವಕ್ಕಿ ಬೇರಾಗೆ ಅದಕಾಗಿ ಮರುಗಿಹನುಪಕ್ಷಿ ಹೃದಯದ ಬೇನೆಯರಿತು ಬಲು ಬರೆದವನುಕವಿಯು ಋಷಿಯಹುದಯ್ಯ, ಬ್ರಹ್ಮರ್ಷಿ ಇರಬಹುದುಅದರವನಲಿ ಮನುಷ್ಯನ ಹೃದಯವಿಲ್ಲೇನು?”ಎಂದು ಮಹಾಕವಿಯನ್ನು ಅರ್ಹವಾಗಿಯೇ ಪ್ರಶ್ನಿಸುತ್ತಾರೆ.

ಕವಿಗೋಷ್ಠಿಯ ಅಧ್ಯಕ್ಷರಾಗಿದ್ದ ವರಕವಿ ಬೇಂದ್ರೆಯವರು ಇದನ್ನು ಮೆಚ್ಚಿ, ಕಯ್ಯಾರರಿಗೆ ಇನ್ನೊಂದು ಕವಿತೆ ಓದಲು ಸೂಚಿಸಿದರು. ಈ ಘಟನೆಯನ್ನು ಕಯ್ಯಾರರು ಸದಾ ಸಂತೋಷ ಮತ್ತು ಕೃತಜ್ಞತಾ ಪೂರ್ವಕವಾಗಿ ಸ್ಮರಿಸುತ್ತಿದ್ದರು. ರಾಮಾಯಣದಲ್ಲಿ ತೀರಾ ನಿರ್ಲಕ್ಷ್ಯಕ್ಕೊಳಗಾಗಿದ್ದ ಊರ್ಮಿಳೆಯ ಕುರಿತು ಏನೂ ಅನುಕಂಪವನ್ನು ವ್ಯಕ್ತಪಡಿಸದ ವಾಲ್ಮೀಕಿಯನ್ನು ಕವಿ ಆಕ್ಷೇಪಿಸುತ್ತಾರೆ. ಈ ಸಾಲುಗಳು ಕನ್ನಡ ಕಾವ್ಯಲೋಕದಲ್ಲಿ ಸಂಚಲನ ಮೂಡಿಸಿದುವು.ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜಿನ ಪದವಿ ಶಿಕ್ಷಣ ಕಾಲದಲ್ಲಿ ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ಲೇಖನಗಳಿರುವ, ಕನ್ನಡದಲ್ಲಿ ''''''''ನಗು'''''''' ಮತ್ತು ಸಂಸ್ಕೃತದಲ್ಲಿ ''''''''ವಿಕಾಸ'''''''' ಎಂಬ ಕೈಬರಹದ ಮಾಸ ಪತ್ರಿಕೆಗಳನ್ನು ಸಂಪಾದಕರಾಗಿ ಕಯ್ಯಾರರು ಪ್ರಕಟಿಸುತ್ತಿದ್ದರು. ಅಮ್ಮೆಂಬಳ ಶಂಕರನಾರಾಯಣ ನಾವಡರು ಆಗ ಕಯ್ಯಾರರ ಸಹವರ್ತಿಯಾಗಿದ್ದರು.

1940ನೇ ಇಸವಿಯಲ್ಲಿ, ತನ್ನ 25ನೇ ವಯಸ್ಸಿನಲ್ಲಿ, ''''''''ಕನ್ನಡ ಪದ್ಯ ಮಂಜರಿ'''''''' ಭಾಗ ಒಂದು ಮತ್ತು ಎರಡನ್ನು ಸಚಿತ್ರವಾಗಿ ಪ್ರಕಟಿಸಿದರು. ಇದರ ಹಲವು ಪದ್ಯಗಳನ್ನು ಕಯ್ಯಾರರೇ ಲೇಖಕರಾಗಿರುವ, ಒಂದರಿಂದ ಎಂಟನೇ ತರಗತಿವರೆಗೆ ಕನ್ನಡ ಪಠ್ಯವಾಗಿದ್ದ ನವೋದಯ ಕನ್ನಡ ವಾಚನಮಾಲೆಯಲ್ಲಿ ಅಳವಡಿಸಲಾಗಿತ್ತು. ಈ ಪುಸ್ತಕಗಳು ದಕ್ಷಿಣ ಕನ್ನಡ, ಬಳ್ಳಾರಿ, ಕೊಡಗು ಜಿಲ್ಲೆಗಳಲ್ಲಿ ಜನಪ್ರಿಯ ಪಠ್ಯ ಪುಸ್ತಕಗಳಾಗಿದ್ದುವು.

“ಪಠ್ಯ ಪುಸ್ತಕಗಳ ರಾಷ್ಟ್ರೀಕರಣದ ನಂತರವೂ ಕರ್ನಾಟಕ, ಕೇರಳ, ಮಹಾ ರಾಷ್ಟ್ರ ಸರ್ಕಾರದವರು ತಮ್ಮ ಕನ್ನಡ ಪಠ್ಯಗಳಲ್ಲಿ ಪದ್ಯ ಮಂಜರಿಯ ಹಾಡುಗಳನ್ನು ಆರಿಸಿಕೊಳ್ಳುತ್ತಿದ್ದರು. ಕನ್ನಡದಲ್ಲಿ ಶಿಶು ಸಾಹಿತ್ಯವಿರುವ ತನಕ ಕಯ್ಯಾರರ ಶಿಶುಗೀತೆಗಳು ಉಳಿದೇ ಉಳಿಯುತ್ತವೆ. ಶಿಶು ಗೀತೆಗಳ ರಚನೆಯ ಕಾಲಕ್ಕೆ ಕವಿ ಮಗುವಾಗಬೇಕು. ಮಗು ಮನಸ್ಸಿನ ಚಿಂತನೆಯಿದ್ದರೆ ಮಕ್ಕಳ ಸಾಹಿತ್ಯ ನಿರ್ಮಾಣವಾಗಬಲ್ಲುದು. ಹಾರುತ ಕುಣಿಯುತ, ಕುಣಿಯುತ ಹಾರುವ ಶಿಶುಗೀತೆಗಳನ್ನು ಕಯ್ಯಾರರು ರಚಿಸಿದ್ದಾರೆ. ಲಾಲಿತ್ಯ ಪೂರ್ಣವಾದ ಮತ್ತು ಗೇಯತೆ, ಸರಳತೆ, ನೀತಿ ಪಾಠಗಳಿಂದ ಈ ಪದ್ಯಗಳು ಜನ ಮೆಚ್ಚುಗೆಗೆ ಪಾತ್ರವಾಗಿದ್ದುವು " ಎಂದು ಹಿರಿಯ ಕವಿ ಅಧ್ಯಾಪಕ ಅಂಬಾತನಯ ಮುದ್ರಾಡಿ ವಿಶ್ಲೇಷಿಸುತ್ತಾರೆ.


“ಚೆನ್ನಿ, ಹೊನ್ನೀ ಬೇಗನೆ ಬನ್ನಿ ಹೂವಿನ ತೋಟಕೆ ತೆರಳುವುದುರೋಸಿ, ಲಿಲ್ಲಿ, ಫಾತಿಮಳೆಲ್ಲಿ, ಆಡುತ ಹಾಡುತ ಹೋಗುವುದು”ಎನ್ನುವ ಹೂಕೊಯ್ಯುವ ಹಾಡಿನಲ್ಲಿ ಕೋಮು ಸೌಹಾರ್ದದ ಸಂದೇಶ ಅಡಗಿದೆ ಎಂದು ಮುಂಗಾರು ಮಳೆಯ ಕವಿ ಜಯಂತ ಕಾಯ್ಕಿಣಿ ಅಭಿಪ್ರಾಯಿಸಿದ್ದಾರೆ.“ಸಂತೆಗೆ ಹೋದನು ಭೀಮಣ್ಣಹಿಂಡಿಯ ಕೊಂಡನು ಹತ್ತುಮಣ "ಎಂಬ ಸಾಲಿನಿಂದ ಪ್ರಾರಂಭವಾಗುವ "ನೀ ನನಗಿದ್ದರೆ ನಾ ನಿನಗೆ " ಎಂಬ ಶೀರ್ಷಿಕೆಯ ಪದ್ಯ “ನೆನಪಿರಲೀ ನುಡಿ ನಮ್ಮೊಳಗೆ " ಎನ್ನುವ ಸಾರ್ವಕಾಲಿಕ ಸತ್ಯದೊಂದಿಗೆ ಮುಕ್ತಾಯವಾಗುತ್ತದೆ. 1950-60ರ ಸಾಲಿನಲ್ಲಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾಗಿದ್ದ ಈಗಿನ ಹಿರಿಯರ ಮನದಲ್ಲಿ ಇಂದಿಗೂ ಅದು ಮಾರ್ದನಿಗೊಳ್ಳುತ್ತಿದೆ. “ಕನ್ನಡದ ಹತ್ತು ಶ್ರೇಷ್ಠ ಶಿಶು ಗೀತೆಗಳನ್ನು ಹೆಸರಿಸಬೇಕು ಎಂದರೆ ಈ ಕವನ ಅವುಗಳಲ್ಲಿ ನಿರ್ವಿವಾದವಾಗಿ ಒಂದಾಗಿರುತ್ತದೆ” ಎಂದು ಹಿರಿಯ ಕವಿ ವಿ.ಗ.ನಾಯಕ ಸಮೀಕ್ಷಿಸಿದ್ದಾರೆ.

2015ನೇ ಇಸವಿಯಲ್ಲಿ ಮಣಿಪಾಲದ ಮಾಹೆಯ ಯುನಿವರ್ಸಲ್ ಪ್ರೆಸ್ ಸಾಂರ್ದಭಿಕ ಚಿತ್ರಗಳನ್ನು ಅಳವಡಿಸಿ, ಈ ಪುಸ್ತಕವನ್ನು ಮರುಮುದ್ರಣ ಮಾಡಿರುವುದು, ಪ್ರಥಮ ಪ್ರಕಟಣೆಯ 75 ವರ್ಷಗಳ ನಂತರವೂ ಈ ಪುಸ್ತಕದ ಬೇಡಿಕೆಗೆ ಹಿಡಿದ ಕೈಗನ್ನಡಿ.

“ಅಳಿಲೆ ಅಳಿಲೆ, ಚುಂಚುಂ ಅಳಿಲೆ ಮರದಿಂದಿಳಿದು ಬಾ ಬಾ ನಲಿದು” ಎಂದು ಹಾಡುವಾಗಲೇ ಅಭಿನಯಿಸಿ ಕುಣಿಯುವಂತೆ ಹುರಿದುಂಬಿಸುವ ಕವಿತೆಗಳು ಮಕ್ಕಳ ಮನಸ್ಸನ್ನು ಶೀಘ್ರ ಮುಟ್ಟುತ್ತವೆ.

‘ಕುಂಟ ಮತ್ತು ಕುರುಡ’ ಎಂಬ ಪದ್ಯ ನಡೆಯಲಾರದ ಕುಂಟನನ್ನು ಕಣ್ಣು ಕಾಣದ ಕುರುಡ ಹೆಗಲ ಮೇಲೇರಿಸಿಕೊಂಡು ಸಹಕಾರದಿಂದ ಜೀವನ ನಡೆಸಲು ಸಾಧ್ಯವಿದೆ ಎಂಬ ಸತ್ಯವನ್ನು ತಿಳಿಸುತ್ತದೆ.“ಕಾ ಕಾ ಕಾ ಕಾ ಪದ ಹಾಡಕ್ಕಾ” ಎನ್ನುವ ಗೀತೆ ಮೋಸಗಾರ ನರಿಯ ಹೊಗಳಿಕೆಗೆ ಮರುಳಾಗಿ ಕಾಗೆ ತನ್ನ ಬಾಯಲ್ಲಿದ್ದ ಆಹಾರವನ್ನು ಕಳೆದುಕೊಂಡ ಪರಿಯನ್ನು ತಿಳಿಸುತ್ತದೆ. ನರಿ ಬುದ್ದಿಯ ಜನರ ಹೊಗಳ ಮಾತಿಗೆ ಉಬ್ಬಿ ತಮ್ಮದೆಲ್ಲವನ್ನು ಕಳಕೊಳ್ಳಬಾರದೆಂಬ ನೀತಿ ಬೋಧೆ ಇದರಲ್ಲಿ ಅಡಗಿದೆ.ಭೂತಾಳ ಪಾಂಡ್ಯ ಎನ್ನುವ ಕಥನ ಕಾವ್ಯದಲ್ಲಿ ತುಳುನಾಡಿನ ಜೀವನ ಚಿತ್ರಣವಿದೆ. ಸೋದರ ಸೋದರಿಯರ ಬಾಂಧವ್ಯದ ಕುರಿತ ಕವಿತೆ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಪನ್ನಾದಾಸಿ ಕವಿತೆಯಲ್ಲಿ ಸ್ವಾಮಿನಿಷ್ಠ ದಾಸಿಯು ತನ್ನ ಸ್ವಂತ ಮಗುವನ್ನು ಕಟುಕನಿಗಿತ್ತು ರಾಜನ ಮಗನನ್ನು ಬದುಕಿಸಿದ ತ್ಯಾಗಮಯಿಯ ಚಿತ್ರಣವಿದೆ.ಕಯ್ಯಾರರ “ಏರಲಿ ಹಾರಲಿ ನಮ್ಮಿಧ್ವಜವು”, ಮತ್ತು “ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ” ಎಂಬ ಧ್ವಜಗೀತೆಗಳು ಮಕ್ಕಳಿಗೆ ದೇಶಪ್ರೇಮದ ಪಾಠವನ್ನು ಹೇಳುತ್ತವೆ.

1980-90ರ ದಶಕದಲ್ಲಿ ಕಾಸರಗೋಡು ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಯ್ಯಾರರು ಮತ್ತು ಮಂಗಳ ಗಂಗೋತ್ರಿಯ ನಿರ್ದೇಶಕರಾದ ಎಸ್.ವಿ. ಪರಮೇಶ್ವರ ಭಟ್ಟರು ಈ ನಾಡಿನಾದ್ಯಂತ ಸಂಚರಿಸಿ ಶಾಲಾ, ಕಾಲೇಜುಗಳಲ್ಲಿ ವರ್ಧಂತ್ಯೋತ್ಸವ ಮತ್ತು ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಸಂಚಲನೆಯನ್ನುಂಟು ಮಾಡಿದ್ದರು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ| ಬಿ.ಎ ವಿವೇಕ ರೈ ಅಭಿಮಾನ ಪಡುತ್ತಾರೆ.ಬಾಲ ಕವಿಯಾಗಿ, ಉತ್ತಮ ವಾಗ್ಮಿಯಾಗಿ, ಸಂಸ್ಕೃತ-ಕನ್ನಡಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು, ಸ್ವಾತಂತ್ರ್ಯ ಧುರೀಣರಾಗಿ, ರಾಷ್ಟ್ರಪ್ರಶಸ್ತಿ ಪಡೆದ ಅಧ್ಯಾಪಕರಾಗಿ, ಗ್ರಾಮಾಭಿವೃದ್ಧಿಯ ಹರಿಕಾರರಾಗಿ, ಪ್ರಗತಿಪರ ಕೃಷಿಕರಾಗಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ನಾಡೋಜ, ಡಾಕ್ಟರೇಟ್ ಗೌರವಕ್ಕೆ ಭಾಜನರಾದ ''''''''ಚಿಕ್ಕ ಅಣ್ಣ'''''''' ಎಂಬ ಅರ್ಥದ ಕಿಞ್ಞಣ್ಣ ಎಂಬ ದಿಗ್ಗಜ, ನಮ್ಮ ನಾಡಿನ ಸಾಹಿತ್ಯಲೋಕದ ಹಿರಿಯಣ್ಣನಾದುದು ಇದೀಗ ಇತಿಹಾಸ.

ಕರ್ಣನಿಗೆ ಕೌರವನ ಪರವಾಗಿ ಹೋರಾಡಬೇಕಾಗಿದ್ದರೂ ಪಾಂಡವರನ್ನು ಕಾಪಾಡಬೇಕಾದ ಅನಿವಾರ್ಯತೆಯನ್ನು ಕುಂತಿಯ ಮಾತಿನ ಮೂಲಕ ಕಯ್ಯಾರರು ಬಹಳ ಮನೋಜ್ಞವಾಗಿ ಚಿತ್ರಿಸಿದ್ದಾರೆ.“ಬೇಡುವೆಂ ಚಂದ್ರವಂಶದ ಕುಡಿಯ ಕಾಪಾಡುತೊಟ್ಟ ಶರವಂ ಮರಳಿ ಮರೆತು ಬಿಡುನಿನಗಕ್ಕೆ ಮಂಗಳಂ”ಎಂಬ ಸ್ವರಚಿತ ಕವನದ ಭಾವುಕ ಸನ್ನಿವೇಶವನ್ನು ವಿದ್ಯಾರ್ಥಿಗಳಿಗೆ ಪಾಠ ಹೇಳುವಾಗ ಕಯ್ಯಾರರು ಗದ್ಗದಿತರಾಗಿ ಕಣ್ಣಂಚಿನಿಂದ ನೀರು ಹನಿಯುತ್ತಿತ್ತು ಎಂದು ಅವರ ಶಿಷ್ಯೆ ನಿವೃತ್ತ ಕನ್ನಡ ಪ್ರಾಧ್ಯಾಪಿಕೆ ಡಾ| ಯು ಮಹೇಶ್ವರಿ ನೆನಪಿಸುತ್ತಾರೆ. “ಮಕ್ಕಳಿಗೆ ಪಾಠ ಹೇಳುವುದರ ಜೊತೆಗೆ ಅವರ ವ್ಯಕ್ತಿತ್ವವನ್ನು ಬೆಳೆಸುವ ದೊಡ್ಡ ಗುಣ ಕಯ್ಯಾರರದ್ದು” ಎಂದು ತುಳು ಅಕಾಡೆಮಿಯ ಮಾಜಿ ಸದಸ್ಯೆ ಲೇಖಕಿ ರೂಪಕಲಾ ಆಳ್ವ ಅಭಿಪ್ರಾಯಪಟ್ಟಿದ್ದಾರೆ.

ಪಠ್ಯ ಪುಸ್ತಕಗಳು, ನಾಟಕ, ಕಥೆ, ಕವನಗಳು, ಆತ್ಮಕಥೆ, ವ್ಯಕ್ತಿ ಚಿತ್ರಣ ಸೇರಿ ಸುಮಾರು 37 ಕೃತಿಗಳನ್ನು ರಚಿಸಿದ್ದು ಹೆಚ್ಚಿನವುಗಳನ್ನು ಅವರೇ ಪ್ರಕಟಿಸಿದ್ದಾರೆ. ಸುಮಾರು 5000ಕ್ಕೂ ಹೆಚ್ಚು ಬಿಡಿ ಲೇಖನಗಳನ್ನು ಬರೆದಿದ್ದಾರೆ. ಅವರ ಕುರಿತು ವಿವಿಧ ಲೇಖಕರು ಬರೆದ 14 ಪುಸ್ತಕಗಳು ಪ್ರಕಟವಾಗಿವೆ.ಅವರ ಜೀವನ ಸಾಧನೆಗಳನ್ನು ಸಂಶೋಧಿಸಿ ಪಿ.ಹೆಚ್.ಡಿ, ಪದವಿ ಪಡೆದ ಆಕಾಶವಾಣಿಯ ಡಾ| ಸದಾನಂದ ಪೆರ್ಲ, “ರೈ ಎಂದರೆ ಸಂಸ್ಕೃತದಲ್ಲಿ ಸಂಪತ್ತು ಎಂದರ್ಥ. ರೈ ಅರ್ಥಕ್ಕೆ ಅನ್ವರ್ಥವಾಗಿ ಕಾಸರಗೋಡಿನ, ಕನ್ನಡ ನಾಡಿನ, ಸಾಮಾಜಿಕ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ರಂಗಕ್ಕೆ ನೀಡಿದ ಕೊಡುಗೆ ಸಂಪದ್ಭರಿತವಾಗಿದ್ದು ಅವರ ಸಮಾಜಮುಖಿ ಸೇವಾಕ್ಷೇತ್ರಗಳು ಅದನ್ನು ಸಾಬೀತು ಪಡಿಸುತ್ತವೆ” ಎಂದಿದ್ದಾರೆ.

ಕಯ್ಯಾರರ ಈ ಎಲ್ಲಾ ಸಾಧನೆಗಳ ಹೊರತಾಗಿಯೂ ಅವರು ವಿನಮ್ರತೆಯಿಂದ ಇಂತು ಆತ್ಮನಿವೇದನೆ ಮಾಡಿಕೊಂಡಿದ್ದಾರೆ. “ಕನ್ನಡದ ಈ ಹಿರಿಯ ಪಂಕ್ತಿಯಲ್ಲಿ ನಾನು ಅತ್ಯಂತ ಕಿರಿಯನು. ಹೆಬ್ಬೆರಳು, ತೋರು ಬೆರಳು, ನಡು ಬೆರಳುಗಳ ಸಾಲಿನಲ್ಲಿ ಕೇವಲ ಕಿರು ಬೆರಳಿನಂತಿರುವವನು. ಬದುಕಿನುದ್ದಕ್ಕೂ ನಾಡು ನುಡಿಗಳ ಪ್ರೇಮದ ಪುಣ್ಯಭಾರವನ್ನು ಹರಕೆಯ ಹೊರೆಯನ್ನು ಹೊತ್ತುಕೊಂಡು ನಡೆಯುತ್ತಾ ಬಂದಿದ್ದೇನೆ. ಮುಂದೆ ಒಂದು ಸುದಿನ ಸೂರ್ಯೋದಯದಲ್ಲಿ ಕನ್ನಡ ತಾಯಿಯ ಅಡಿಗಳಿಗೆ ಮುಡಿ ಮುಟ್ಟಿಸಿ ಹರಕೆಯ ಹೊರೆ ಅರ್ಪಿಸಿ ನನ್ನ ಪಾಲಿನ ಋಣದ ಭಾರವನ್ನು ಕೈಲಾದಷ್ಟು ಇಳಿಸಿ ಜೀವನದಲ್ಲಿ ಸಾರ್ಥಕ್ಯ ಪಡೆಯಲು ಹಾರೈಸುತ್ತೇನೆ. ಅದಕ್ಕಿಂತ ಹೆಚ್ಚಿನ ಭಾಗ್ಯ ಬೇರೇನಿದೆ?”ಕಯ್ಯಾರರು ನಿಸ್ಪೃಹರು, ರಾಷ್ಟ್ರಪ್ರಶಸ್ತಿ ಪುರಸ್ಕೃತರು, 3 ಅವಧಿಗೆ ಪಂಚಾಯತ್ ಅಧ್ಯಕ್ಷರು, ಆ ಅವಧಿಯಲ್ಲಿ ರಾಜ್ಯದ ಅತ್ಯುತ್ತಮ ಪಂಚಾಯತ್ ಪ್ರಶಸ್ತಿಗೆ ಭಾಜನರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು. ಇಷ್ಟೆಲ್ಲಾ ಸಾಧನೆಗಳನ್ನು ಮಾಡಿದ್ದರೂ ಅವರಿಗೆ ಗೌರವ ಪ್ರಶಸ್ತಿಗಳು ಬಹಳ ವಿಳಂಬವಾಗಿ ದೊರೆತುವು.

ಮಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ 82 ವರ್ಷ. ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪ್ರದಾನಿಸಿದಾಗ 90ರ ವಯಸ್ಸು. ಹಂಪಿ ವಿಶ್ವವಿದ್ಯಾನಿಲಯ ನಾಡೋಜ ಗೌರವ ನೀಡಿದಾಗ 92ರ ಹಿರಿಯ. ಪಂಪ ಪ್ರಶಸ್ತಿಗೆ ಭಾಜನರಾದ ಕಾಲಕ್ಕೆ 98ರ ಹರೆಯ. ಈ ಎಲ್ಲಾ ವಿಳಂಬಿತ ಗೌರವಗಳಿಗೆ ಅವರ ನಿಸ್ಪೃಹತೆ ಕಾರಣ.

ಸದಾ ಶತಮಾನದ ಬದುಕನ್ನು ಹಾರೈಸುತ್ತಿದ್ದ ಅವರು 100 ವರ್ಷ, 2 ತಿಂಗಳು 1 ದಿನದ ಪರಿಪೂರ್ಣ ಜೀವನವನ್ನು ಪೂರೈಸಿ 2015ನೇ ಇಸವಿ ಆಗಸ್ಟ್ 9ರಂದು ಕಾವ್ಯಲೀನರಾದರು. ಅವರ ಜೀವಮಾನ ಸಾಧನೆಗಳನ್ನು ನಿರಂತರವಾಗಿ ಕಾಪಿಡುವ ಕಾರ್ಯ ನಡೆದಿದೆ. ಬದಿಯಡ್ಕದಲ್ಲಿ ಅವರ ಮನೆಗೆ ಹೋಗುವ ರಸ್ತೆಗೆ ಅವರ ಹೆಸರನ್ನಿಡಲಾಗಿದೆ. ಮೂಡಬಿದ್ರೆಯಲ್ಲಿ ಮೋಹನ ಆಳ್ವರು ಅವರಿಂದಲೇ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಕಯ್ಯಾರರ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ. ಬದಿಯಡ್ಕದಲ್ಲಿ ಅವರ ಹೆಸರಿನ ಸಂಶೋಧನ ಕಟ್ಟಡದ ಕಾರ್ಯ ಪೂರ್ಣವಾಗುತ್ತಿದೆ. ಈ ಎಲ್ಲಾ ಕಾರ್ಯಗಳಿಂದಾಗಿ ಕಯ್ಯಾರರ ಹೆಸರು ಅಜರಾಮರವಾಗಿರುತ್ತದೆ.