ಗ್ರಾಮ ಸಂಚಾಲಕರ ಕಾರ್ಯಾಗಾರದಲ್ಲಿ ಎ.ಬಿ.ರಾಮಚಂದ್ರಪ್ಪ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸಮಾಜದಲ್ಲಿ ವಿವಿಧ ಅವಕಾಶಗಳಿಂದ ವಂಚಿತರಾದವರಿಗೆ ಮಾನವ ಬಂಧುತ್ವ ವೇದಿಕೆಯು ಧ್ವನಿಯಾಗುವ ಮೂಲಕ ಅವರಿಗೆ ಬಂಧುತ್ವದ ಬಲ ನೀಡುವ ಶಕ್ತಿಯಾಗಿ ಹೊರಹೊಮ್ಮಬೇಕಿದೆ ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ ರಾಮಚಂದ್ರಪ್ಪ ಕರೆ ನೀಡಿದರು.ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮಾನವ ಬಂಧುತ್ವ ವೇದಿಕೆಯ ಚಿತ್ರದುರ್ಗ ತಾಲೂಕು ಗ್ರಾಮ ಸಂಚಾಲಕರ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಅವರು, ಅವಕಾಶ ವಂಚಿತರ ಪರವಾಗಿ ಹೋರಾಡಲು ಮತ್ತು ಅವರಲ್ಲಿ ಆತ್ಮವಿಶ್ವಾಸ ತುಂಬಲು ಕಾರ್ಯಕರ್ತರು ಸನ್ನದ್ಧರಾಗಬೇಕು. ನಿಮ್ಮ ಈ ಸಾಮಾಜಿಕ ಹೋರಾಟದ ಬೆನ್ನಿಗೆ ವೇದಿಕೆಯ ಸಂಸ್ಥಾಪಕರಾದ ಸತೀಶ ಜಾರಕಿಹೊಳಿ ಅವರು ಸದಾ ನಿಮ್ಮೊಂದಿಗಿರುತ್ತಾರೆ. ಗ್ರಾಮ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವ ಮೂಲಕ ಸಾಮಾಜಿಕ ಬದಲಾವಣೆಗೆ ನಾವೆಲ್ಲರೂ ಶ್ರಮಿಸಬೇಕಿದೆ ಎಂದರು.
ಪರಿವರ್ತನ ಚಿಂತಕ ಕಸವನಳ್ಳಿ ಶಿವಣ್ಣ ಮಾತನಾಡಿ, ನಮ್ಮ ಗ್ರಾಮೀಣ ಭಾಗದ ಹಳ್ಳಿ ಕಟ್ಟೆಗಳಲ್ಲಿ ಇಂದಿಗೂ ಜಾತಿಯತೆ ಎದ್ದು ಕಾಣಿಸುತ್ತಿದೆ. ತಾರತಮ್ಯದ ಈ ಅನಿಷ್ಟ ವ್ಯವಸ್ಥೆ ಮೊದಲು ಬದಲಾಗಬೇಕಿದೆ. ಆಗ ಮಾತ್ರ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಆಶಯ ವ್ಯಕ್ತಪಡಿಸಿದರು. ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಪಿ.ಬಸವರಾಜ ಬಚ್ಚಬೋರನಹಟ್ಟಿ, ಮಹಿಳಾ ಸಂಚಾಲಕಿ ಬೈಲಮ್ಮ, ಚಿತ್ರಕಲಾ ಪರಿಷತ್ ಸದಸ್ಯ ಕಣ್ಮೇಶ್, ವಿಮುಕ್ತಿ ವಿದ್ಯಾಸಂಸ್ಥೆಯ ಅಧ್ಯಕ್ಷೆ ಅನ್ನಪೂರ್ಣಮ್ಮ, ಪ್ರತಿಭಾ ಅಕಾಡೆಮಿಯ ಉಸ್ತುವಾರಿ ಪ್ರಕಾಶ್ ರಾಮಾನಾಯ್ಕ್ ಸೇರಿದಂತೆ ಮತ್ತಿತರರು ಇದ್ದರು.ಚಿತ್ರದುರ್ಗದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮಾನವ ಬಂಧುತ್ವ ವೇದಿಕೆಯ ತಾಲೂಕು ಗ್ರಾಮ ಸಂಚಾಲಕರ ಕಾರ್ಯಾಗಾರ ಉದ್ದೇಶಿಸಿ ಎ.ಬಿ.ರಾಮಚಂದ್ರಪ್ಪ ಮಾತನಾಡಿದರು.